Vaibhav Sooryavanshi: ಅರ್ಧಶತಕದ ಮೂಲಕ ವಿಶ್ವದಾಖಲೆ ಮಾಡಿದ ವೈಭವ್ ಸೂರ್ಯವಂಶಿ
Vaibhav Sooryavanshi: ಭಾರತೀಯ ಕ್ರಿಕೆಟ್‌ನ ಯುವ ಸ್ಫೋಟಕ ಬ್ಯಾಟರ್ 15 ವರ್ಷದ ವೈಭವ್ ಸೂರ್ಯವಂಶಿ ಮತ್ತೊಂದು ಐತಿಹಾಸಿಕ ದಾಖಲೆ ಮಾಡಿದ್ದಾರೆ. ಹರಾರೆಯಲ್ಲಿ ಗುರುವಾರ (ಜುಲೈ 23) ನಡೆದ ಜಿಂಬಾಬ್ವೆ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಅರ್ಧಶತಕ ಸಿಡಿಸಿ ಹೊಸ ಮೈಲುಗಲ್ಲು ಸಾಧಿಸಿ ಗಮನ ಸೆಳೆದಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಜಿಂಬಾಬ್ವೆ ವಿರುದ್ಧದ ಟಿ20 ಪಂದ್ಯದಲ್ಲಿ 50 ರನ್ ಸಿಡಿಸುವ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅರ್ಧಶತಕ ಗಳಿಸಿದ ವಿಶ್ವದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಸಾಧನೆ ಮಾಡಿರುವ ಪ್ರಚಂಡ ಪುಟಾಣಿಗೆ ಮೆಚ್ಚುಗೆಗಳ ಸುರಿಮಳೆಯೇ ಹರಿದುಬರುತ್ತಿದೆ.

18 ಎಸೆತಗಳಲ್ಲಿ ಅರ್ಧಶತಕ, ದಾಖಲೆ ಉಡೀಸ್
ಜಿಂಬಾಬ್ವೆ ನೀಡಿದ 126 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಭಾರತಕ್ಕೆ ವೈಭವ್ ಸೂರ್ಯವಂಶಿ ಉತ್ತಮ ಆರಂಭ ನೀಡಿದರು. ಕೇವಲ 18 ಎಸೆತಗಳಲ್ಲಿ 4 ಸಿಕ್ಸರ್, 4 ಬೌಂಡರಿಗಳ ನೆರವಿನಿಂದ ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಅರ್ಧಶತಕ ಪೂರೈಸಿದರು. 19 ಎಸೆತಗಳಲ್ಲಿ 50 ರನ್ ಗಳಿಸಿ ರಿಚರ್ಡ್ ನ್ಗಾನವಾ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಕಡೆಗೆ ನಡೆದರು.
ಯಾರೆಲ್ಲಾ ದಾಖಲೆ ಬ್ರೇಕ್?
ಈ ಅದ್ಭುತ ಇನ್ನಿಂಗ್ಸ್ ಮೂಲಕ ವೈಭವ್ ಸೂರ್ಯವಂಶಿ ಅವರು ದಿಗ್ಗಜ ಆಟಗಾರರ ಸುದೀರ್ಘ ಕಾಲದ ದಾಖಲೆಗಳನ್ನು ಪುಡಿಗಟ್ಟಿದರು. ಸಚಿನ್ ತಮ್ಮ 16ನೇ ವಯಸ್ಸಿನಲ್ಲಿ (16 ವರ್ಷ 213 ದಿನ) ಪಾಕಿಸ್ತಾನ ವಿರುದ್ಧ ಚೊಚ್ಚಲ ಅರ್ಧಶತಕ ಸಿಡಿಸಿದ್ದರು. ವೈಭವ್ ಈಗ ಸಚಿನ್ ದಾಖಲೆಯನ್ನು ಹಿಂದಿಕ್ಕಿದ್ದಾರೆ.
ಅಫ್ರಿದಿ (16 ವರ್ಷ 214 ದಿನ) ಅವರ ದಾಖಲೆ ಉಡೀಸ್ ಮಾಡಿದ್ದು, ನೇಪಾಳದ ಕುಶಾಲ್ ಮಲ್ಲಾ (15 ವರ್ಷ 340 ದಿನ) ಹೆಸರಿನಲ್ಲಿದ್ದ ಪುರುಷರ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಕಿರಿಯ ಅರ್ಧಶತಕದ ದಾಖಲೆಯನ್ನು ಕೂಡ ವೈಭವ್ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ತಾಯಿಗೆ ವಿಶೇಷ ಗೌರವ ಸಲ್ಲಿಸಿದ ವೈಭವ್ ಸೂರ್ಯವಂಶಿ
ಅರ್ಧಶತಕ ಪೂರೈಸಿದ ತಕ್ಷಣವೇ ವೈಭವ್ ಸೂರ್ಯವಂಶಿ ಅವರು ಬೆರಳುಗಳಿಂದ 'A' ಆಕಾರವನ್ನು ತೋರಿಸಿ ಸಂಭ್ರಮಿಸಿದರು. ಐಪಿಎಲ್ 2026ರ ಸಮಯದಲ್ಲೇ ವೈರಲ್ ಆಗಿದ್ದ ಈ ಸಂಭ್ರಮಾಚರಣೆಯ ಹಿಂದಿನ ಭಾವನಾತ್ಮಕ ಕಥೆಯನ್ನು ವೈಭವ್ ಹಂಚಿಕೊಂಡಿದ್ದಾರೆ. 'ತಮ್ಮ ತಾಯಿ ಆರತಿ ಅವರ ಹೆಸರಿನ ಮೊದಲ ಅಕ್ಷರ 'A' ಆಗಿರುವುದರಿಂದ, ತಮ್ಮ ಪ್ರತಿಯೊಂದು ಸಾಧನೆಯನ್ನು ಅವರಿಗೆ ಸಮರ್ಪಿಸಲು ಈ ರೀತಿ ಸಂಭ್ರಮಿಸುತ್ತೇನೆ,' ಎಂದು ಅವರು ತಿಳಿಸಿದ್ದಾರೆ.
ವೈಭವ್ ಸೂರ್ಯವಂಶಿ ಅವರು ಅಂತಾರಾಷ್ಟ್ರೀಯ ಮಟ್ಟದ ದೊಡ್ಡ ವೇದಿಕೆಯಲ್ಲೂ ತಮ್ಮ ತಾಯಿಯ ಮೇಲಿನ ಪ್ರೀತಿಯನ್ನು ಪ್ರದರ್ಶಿಸಿದ ಈ ಕ್ಷಣ ಅಭಿಮಾನಿಗಳ ಮನ ಗೆದ್ದಿದೆ. ಇವರ ಈ ಸಂಭ್ರಮದ ಶೈಲಿ ಹಾಗೂ ಆಕ್ರಮಣಕಾರಿ ಆಟಕ್ಕೆ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಗಳ ಸುರಿಮಳೆಯನ್ನೇ ಹರಿಸಿದ್ದಾರೆ. 'ಭಾರತೀಯ ಕ್ರಿಕೆಟ್‌ನಲ್ಲಿ ಇದೀಗ ಯುವ ಆಟಗಾರ ವೈಭವ್‌ನದ್ದೇ ಸದ್ದು ಜೋರಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡುವುದರಲ್ಲಿ ಎರಡು ಮಾತಿಲ್ಲ,' ಎಂದು ಹೇಳುತ್ತಿದ್ದಾರೆ.
ಮತ್ತೆ ಕೆಲವರು 'ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಮೂರು ಪಂದ್ಯಗಳಲ್ಲಿ ಸತತ ವೈಫಲ್ಯ ಕಂಡಿದ್ದ ವೈಭವ್ ಅವರನ್ನು ಯಾರೆಲ್ಲಾ ಅಣಕಿಸಿದ್ದರೋ ಅಂತಹವರಿಗೆ ತಕ್ಕ ತಿರುಗೇಟು ಕೊಟ್ಟಿದ್ದಾರೆ. ಅವರಲ್ಲಿ ಅದ್ಭುತ ಪ್ರತಿಭೆ ಇದೆ. ಕೆಣಕುವ ಪ್ರಯತ್ನ ಕೂಡ ಮಾಡಬೇಡಿ,' ಎಂದು ಎಚ್ಚರಿಕೆ ಸಂದೇಶವನ್ನು ರವಾನೆ ಮಾಡಿದ್ದಾರೆ.


Click it and Unblock the Notifications
