Vaibhav Sooryavanshi: ಬಾಲಕ ವೈಭವ್ ಸೂರ್ಯವಂಶಿ ಕ್ರಿಕೆಟ್ ಭವಿಷ್ಯದ ಕುರಿತು ಬಿಸಿಸಿಐ ಮಹತ್ವದ ನಿರ್ಧಾರ
Vaibhav Sooryavanshi: ಟೀಮ್ ಇಂಡಿಯಾ ಕ್ರಿಕೆಟ್‌ನ ಯುವ ಪ್ರತಿಭೆ 15 ವರ್ಷದ ವೈಭವ್ ಸೂರ್ಯವಂಶಿ ಅವರು ಆಕ್ರಮಣಕಾರಿ ಬ್ಯಾಟಿಂಗ್‌ನಿಂದಲೇ ಹೆಸರಾಗಿದ್ದಾರೆ. ಈಗಲೂ ಸಹ ಕ್ರಿಕೆಟ್ ವಲಯದಲ್ಲಿ ಅವರದ್ದೇ ಚರ್ಚೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಈ ನಡುವೆಯೇ ಇದೀಗ 'ವಂಡರ್ ಕಿಡ್' ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಮಹತ್ವದ ಯೋಜನೆಯನ್ನು ರೂಪಿಸಿದೆ.
ವೈಭವ್ ಸೂರ್ಯವಂಶಿ ಅವರ ದಿಢೀರ್ ಬೆಳವಣಿಗೆ ಹಾಗೂ ಅದ್ಭುತ ಪ್ರತಿಭೆಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅವರ ಭವಿಷ್ಯದ ವೃತ್ತಿಜೀವನಕ್ಕಾಗಿ ವಿಶೇಷ ಹಾಗೂ ಸುದೀರ್ಘ ಯೋಜನೆಯನ್ನು ರೂಪಿಸಿದೆ. ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಯುವ ಆಟಗಾರ ಕೇವಲ 'ಒಂದು ಸರಣಿಯ ಭಾಗವಾಗಿ ಉಳಿಬಾರದು, ಬದಲಿಗೆ ಸಚಿನ್ ತೆಂಡೂಲ್ಕರ್ ಅವರಂತೆ ಭಾರತೀಯ ಕ್ರಿಕೆಟ್‌ಗೆ ಸುದೀರ್ಘ ಸೇವೆ ಸಲ್ಲಿಸುವ ಸಾಧಕನಾಗಬೇಕು,' ಎಂದು ಹೇಳಿದ್ದಾರೆ.

ಬಿಸಿಸಿಐನಿಂದ ಮಹತ್ವದ ಸಭೆ
ಮುಂಬೈನಲ್ಲಿರುವ ಬಿಸಿಸಿಐ ಪ್ರಧಾನ ಕಚೇರಿಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಈ ಸಭೆಯಲ್ಲಿ ದೇವಜಿತ್ ಸೈಕಿಯಾ, ಟೆಸ್ಟ್ ಹಾಗೂ ಏಕದಿನ ತಂಡದ ನಾಯಕ ಶುಭಮನ್ ಗಿಲ್, ಟಿ20 ನಾಯಕ ಶ್ರೇಯಸ್ ಅಯ್ಯರ್, ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಹಾಗೂ ಸೆಂಟರ್ ಆಫ್ ಎಕ್ಸಲೆನ್ಸ್ ಮುಖ್ಯಸ್ಥ ವಿ.ವಿ.ಎಸ್. ಲಕ್ಷ್ಮಣ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ದೇವಜಿತ್ ಸೈಕಿಯಾ ಮಹತ್ವದ ಹೇಳಿಕೆ
ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ದೇವಜಿತ್ ಸೈಕಿಯಾ ಅವರು, 'ನಾವು ವೈಭವ್ ಸೂರ್ಯವಂಶಿಯವರ ಭವಿಷ್ಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದೇವೆ. 15ನೇ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಆಟಗಾರನನ್ನು ಪ್ರೋತ್ಸಾಹಿಸಲು ಬಿಸಿಸಿಐ ಹೆಮ್ಮೆಪಡುತ್ತದೆ. ಆದರೆ, ಅವರು ಇಡುವ ಪ್ರತಿಯೊಂದು ಹೆಜ್ಜೆಯೂ ಸರಿಯಾಗಿರುವಂತೆ ಎಚ್ಚರ ವಹಿಸಲಾಗುತ್ತಿದೆ. ಸಚಿನ್ ತೆಂಡೂಲ್ಕರ್ ಅವರಂತೆಯೇ ವೈಭವ್ ಕೂಡ ಸುದೀರ್ಘ ಕಾಲ ದೇಶಕ್ಕೆ ಸೇವೆ ಸಲ್ಲಿಸಬೇಕು ಎಂಬುದೇ ನಮ್ಮ ಆಶಯ,' ಎಂದು ಹೇಳಿ ಗಮನ ಸೆಳೆದಿದ್ದಾರೆ.
ವೈಭವ್ ಸೂರ್ಯವಂಶಿಯವರ ಸಾಧನೆಯ ಹಾದಿ
ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ವೈಭವ್ ಸೂರ್ಯವಂಶಿ ಅವರು, 776 ರನ್ ಗಳಿಸಿ 'ಆರೆಂಜ್ ಕ್ಯಾಪ್', 'ಮೋಸ್ಟ್ ವ್ಯಾಲ್ಯೂಯಬಲ್ ಪ್ಲೇಯರ್' ಹಾಗೂ 'ಎಮರ್ಜಿಂಗ್ ಪ್ಲೇಯರ್' ಸೇರಿದಂತೆ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದರು.
ಬಳಿಕ ಅವರು ಇಂಗ್ಲೆಂಡ್ ವಿರುದ್ಧ ಟಿ-20 ಪಂದ್ಯವಾಡುವ ಮೂಲಕ ಭಾರತದ ಪರ ಅಂತಾರಾಷ್ಟ್ರೀಯ ಪಂದ್ಯವಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಜಿಂಬಾಬ್ವೆ ಪ್ರವಾಸದಲ್ಲಿ 151 ರನ್ ಗಳಿಸಿ 'ಪ್ಲೇಯರ್ ಅಫ್ ದಿ ಸೀರಿಸ್' ಪ್ರಶಸ್ತಿ ಪಡೆದಿದ್ದರು. ಇತ್ತೀಚೆಗಷ್ಟೇ ದುಲೀಪ್ ಟ್ರೋಫಿ ಇತಿಹಾಸದಲ್ಲಿ ಅರ್ಧಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ (15 ವರ್ಷ 157 ದಿನಗಳು) ಎಂಬ 57 ವರ್ಷಗಳ ಹಳೆಯ ದಾಖಲೆಯನ್ನು ಮುರಿದರು.
ಕೇವಲ ವೈಭವ್ ಸೂರ್ಯವಂಶಿ ಒಬ್ಬರನ್ನೇ ಗಮನದಲ್ಲಿಟ್ಟುಕೊಳ್ಳದೆ, ಬಿಸಿಸಿಐ 'ಸೆಂಟರ್ ಆಫ್ ಎಕ್ಸಲೆನ್ಸ್' ಮೂಲಕ ಸುಮಾರು 10 ರಿಂದ 15 ಉದಯೋನ್ಮುಖ ಯುವ ಆಟಗಾರರನ್ನು ಗುರುತಿಸಿದೆ. ಈ 'ಟಾರ್ಗೆಟೆಡ್ ಗ್ರೂಪ್' ಆಟಗಾರರ ತರಬೇತಿ, ಕೌಶಲ್ಯ ಅಭಿವೃದ್ಧಿ ಮತ್ತು ದೈಹಿಕ ಸಾಮರ್ಥ್ಯದ ಮೇಲೆ ವಿ.ವಿ.ಎಸ್. ಲಕ್ಷ್ಮಣ್ ನೇತೃತ್ವದಲ್ಲಿ ನಿರಂತರ ನಿಗಾ ವಹಿಸಲಾಗುತ್ತಿದೆ. ಕೊನೆಗೆ ಯುವ ಆಟಗಾರರ ಮೇಲೆ ಹೆಚ್ಚಿನ ಒತ್ತಡ ಹೇರದೆ, ಹಂತ-ಹಂತವಾಗಿ ಅವರ ವೃತ್ತಿಜೀವನವನ್ನು ಉತ್ತಮಗೊಳಿಸುವುದೇ ಬಿಸಿಸಿಐನ ಪ್ರಮುಖ ತಂತ್ರಗಾರಿಕೆಯಾಗಿದೆ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ ಇದೀಗ ಸಾಮಾನ್ಯವಾಗಿ ಎಲ್ಲರ ಕಣ್ಣು ಇರುವುದೇ ವೈಭವ್ ಅವರ ಮೇಲೆ ಎಂದು ಹೇಳಿದರೆ ತಪ್ಪಾಗಲಾರದು.


Click it and Unblock the Notifications
