Nosthush Kenjige: ಪಾಕಿಸ್ತಾನದ ವಿರುದ್ಧ ಮಿಂಚಿದ ಕನ್ನಡಿಗ ನಾಸ್ತುಷ್ ಕೆಂಜಿಗೆ
ಡಲ್ಲಾಸ್‌ನ ಗ್ರಾಂಡ್ ಪ್ರೈರಿ ಕ್ರೀಡಾಂಗಣದಲ್ಲಿ ಯುಎಸ್‌ಎ ತಂಡದ ಪರವಾಗಿ ಆಡುತ್ತಿರುವ ಕನ್ನಡಿಗ ಅಬ್ಬರಿಸಿದ್ದಾರೆ. ಚಿಕ್ಕಮಗಳೂರು ಹುಡುಗ ನಾಸ್ತುಷ್ ಕೆಂಜಿಗೆ ಪಾಕಿಸ್ತಾನದ ವಿರುದ್ಧದ ಟಿ20 ವಿಶ್ವಕಪ್ ಪಂದ್ಯದಲ್ಲಿ ಪ್ರಮುಖ ಮೂರು ವಿಕೆಟ್ ಪಡೆಯುವ ಮೂಲಕ ಮಿಂಚಿದ್ದಾರೆ.
ಎಡಗೈ ಸ್ಪಿನ್ನರ್ ನಾಸ್ತುಷ್ ಕೆಂಜಿಗೆ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ 4 ಓವರ್ ಗಳಲ್ಲಿ 30 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆದರು. ಉಸ್ಮಾನ್ ಖಾನ್, ಶದಾಬ್ ಖಾನ್ ಮತ್ತು ಅಜಾಮ್ ಖಾನ್ ಅವರ ವಿಕೆಟ್ ಪಡೆದು ಪಾಕಿಸ್ತಾನದ ರನ್ ಗಳಿಕೆಗೆ ಕಡಿವಾಣ ಹಾಕಿದರು.

ಟಾಸ್ ಗೆದ್ದ ಯುಎಸ್‌ಎ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 159 ರನ್ ಕಲೆಹಾಕಿತು. 26 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಪಾಕಿಸ್ತಾನಕ್ಕೆ ಬಾಬರ್ ಅಜಂ ಮತ್ತು ಶದಾಬ್ ಖಾನ್ ಆಸರೆಯಾದರು.
ಬಾಬರ್ ಆಜಮ್ 44 ರನ್ ಗಳಿಸಿದರೆ, ಶದಾಬ್ ಖಾನ್ 40 ರನ್ ಗಳಿಸಿದರು. ಶಹಿನ್ ಅಫ್ರಿದಿ 16 ಎಸೆತಗಳಲ್ಲಿ 23 ರನ್ ಗಳಿಸಿ ಕೊನೆಯಲ್ಲಿ ಪಾಕಿಸ್ತಾನಕ್ಕೆ ನೆರವಾದರು.
ಯುಎಸ್‌ಎ ಪರವಾಗಿ ನಾಸ್ತುಷ್ ಕೆಂಜಿಗೆ 3 ವಿಕೆಟ್ ಪಡೆದರೆ, ಸೌರಭ್ ನೆತ್ರಾವಲ್ಕರ್ 2 ವಿಕೆಟ್ ಪಡೆದರು. ಆಲಿ ಖಾನ್ ಮತ್ತು ಜಸ್ದೀಪ್ ಸಿಂಗ್ ತಲಾ 1 ವಿಕೆಟ್ ಪಡೆದುಕೊಂಡರು.
ಯಾರು ಈ ನಾಸ್ತುಷ್ ಕೆಂಜಿಗೆ?
ಯುಎಸ್‌ಎನಲ್ಲಿ ಜನಿಸಿದ ನಾಸ್ತುಷ್ ಕೆಂಜಿಗೆ ಬಳಿಕ ಭಾರತಕ್ಕೆ ಆಗಮಿಸಿದ ಹಲವು ವರ್ಷ ಇಲ್ಲಿದ್ದರು. 2015ರಲ್ಲಿ ಅವರು ಮತ್ತೆ ಯುಎಸ್‌ಎಗೆ ತೆರಳಿದರು. 4 ವರ್ಷಗಳ ಕಾಲ ಯುಎಸ್‌ಎನಲ್ಲಿ ವಾಸಿಸಿದರೆ ಮಾತ್ರ ಅವರು ಯುಎಸ್‌ಎ ತಂಡಕ್ಕಾಗಿ ಆಡಲು ಅವಕಾಶ ಸಿಗುತ್ತಿತ್ತು, ಇದು ಐಸಿಸಿ ನಿಯಮವಾಗಿದೆ.
ಈ ಅವಶ್ಯಕತೆಯನ್ನು ಪೂರೈಸಲು ನಿರ್ಧರಿಸಿದ ಕೆಂಜಿಗೆ, ನ್ಯೂಯಾರ್ಕ್‌ನಲ್ಲಿ 9-5 ಗಂಟೆಯ ಪೂರ್ಣ ಸಮಯದ ಎಕ್ಸ್-ರೇ ಯಂತ್ರಗಳ ತಂತ್ರಜ್ಞರ ಕೆಲಸವನ್ನು ಮಾಡುತ್ತಿದ್ದರು. ಸಂಜೆ 6 ರಿಂದ 10 ರವರೆಗೆ ಕ್ರಿಕೆಟ್ ತರಬೇತಿ ಪಡೆಯುತ್ತಿದ್ದರು. ವಾರಾಂತ್ಯದಲ್ಲಿ ತರಬೇತಿ ಅಕಾಡೆಮಿಯಲ್ಲಿ ಸಂಪೂರ್ಣ ತರಬೇತಿ ಪಡೆಯುತ್ತಿದ್ದರು.
ಫೆಬ್ರವರಿ 2017 ರ ಹೊತ್ತಿಗೆ, ಅವರು 100 ದಿನಗಳ ತರಬೇತಿಯನ್ನು ಪೂರ್ಣಗೊಳಿಸಿದರು ಮತ್ತು ಯುಎಸ್‌ಎ ಅನ್ನು ಪ್ರತಿನಿಧಿಸಲು ಅರ್ಹತೆ ಪಡೆದುಕೊಂಡರು.
ಆಗಸ್ಟ್ 2018 ರಲ್ಲಿ, ಕೆಂಜಿಗೆ ಅವರು 2018-19 ಐಸಿಸಿ ವಿಶ್ವ ಟ್ವೆಂಟಿ 20 ಅಮೇರಿಕಾಸ್ ಕ್ವಾಲಿಫೈಯರ್ ಪಂದ್ಯಾವಳಿಗಾಗಿ ಯುನೈಟೆಡ್ ಸ್ಟೇಟ್ಸ್ ತಂಡಕ್ಕೆ ಆಯ್ಕೆಯಾದರು. 6 ಪಂದ್ಯಗಳಲ್ಲಿ 12 ಔಟಾಗುವುದರೊಂದಿಗೆ ಪಂದ್ಯಾವಳಿಯಲ್ಲಿ ಪ್ರಮುಖ ವಿಕೆಟ್-ಟೇಕರ್ ಆದರು.
ಈ ವರ್ಷ ಕೆನಡಾ ವಿರುದ್ಧದ ಪಂದ್ಯದಲ್ಲಿ ಯುಎಸ್‌ಎ ಗಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅವರು, ಮೊದಲ ಪಂದ್ಯದಲ್ಲೇ 21 ರನ್ ನೀಡಿ 3 ವಿಕೆಟ್ ಪಡೆದು ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದುಕೊಂಡರು. ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಮತ್ತೆ ಮೂರು ವಿಕೆಟ್ ಪಡೆದು ಮತ್ತಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ.












Click it and Unblock the Notifications