WTC Points Table: ಭಾರತದ ವಿರುದ್ಧ ಸೋತ ಆಸ್ಟ್ರೇಲಿಯಾಗೆ ಶಾಕ್ ಕೊಟ್ಟ ದಕ್ಷಿಣ ಆಫ್ರಿಕಾ!
ಭಾರತದ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಮೊದಲ ಟೆಸ್ಟ್‌ನಲ್ಲಿ ಸೋತಿದ್ದ ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಕುಸಿತ ಕಂಡಿತ್ತು. ಪರ್ತ್ ಟೆಸ್ಟ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಭಾರತ ಮತ್ತೆ ಮೊದಲ ಸ್ಥಾನಕ್ಕೇರಿತ್ತು. ಎರಡನೇ ಸ್ಥಾನದಿಂದ ಮೊದಲ ಸ್ಥಾನಕ್ಕೆ ಮರಳುವ ಲೆಕ್ಕಾಚಾರದಲ್ಲಿದ್ದ ಆಸ್ಟ್ರೇಲಿಯಾ ತಂಡಕ್ಕೆ ದಕ್ಷಿಣ ಆಫ್ರಿಕಾ ಶಾಕ್ ನೀಡಿದೆ. ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ ದಕ್ಷಿಣ ಆಫ್ರಿಕಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದು, ಆಸ್ಟ್ರೇಲಿಯಾ ಇದೀಗ ಮೂರನೇ ಸ್ಥಾನಕ್ಕೆ ಕುಸಿದಿದೆ.
ಶ್ರೀಲಂಕಾ ವಿರುದ್ಧ ಡರ್ಬನ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಶ್ರೀಲಂಕಾ ವಿರುದ್ಧ 233 ರನ್‌ಗಳ ಭರ್ಜರಿ ಗೆಲುವು ಸಾಧಿಸಿದ ದಕ್ಷಿಣ ಆಫ್ರಿಕಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರುವ ಮೂಲಕ ಫೈನಲ್ ರೇಸ್‌ನಲ್ಲಿ ಆಸ್ಟ್ರೇಲಿಯಾಗಿಂತ ಮುಂಚೂಣಿಯಲ್ಲಿದೆ.

516 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಶ್ರೀಲಂಕಾ ದಕ್ಷಿಣ ಆಫ್ರಿಕಾದ ಪ್ರಬಲ ಬೌಲಿಂಗ್ ಎದುರು ರನ್ ಗಳಿಸಲು ಪರದಾಡಿತು. 4ನೇ ದಿನದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 103 ರನ್ ಗಳಿಸಿದ್ದ ಶ್ರೀಲಂಕಾ 5ನೇ ದಿನ 282 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಶರಣಾಯಿತು. ವೇಗಿ ಮಾರ್ಕೊ ಜಾನ್ಸೆನ್ 11 ವಿಕೆಟ್ ಪಡೆಯುವ ಮೂಲಕ ಶ್ರೀಲಂಕಾ ಸೋಲಿಗೆ ಪ್ರಮುಖ ಕಾರಣವಾದರು. ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 42 ರನ್‌ಗಳಿಗೆ ಆಲೌಟ್ ಆಗಿದ್ದ ಶ್ರೀಲಂಕಾ ಎರಡನೇ ಇನ್ನಿಂಗ್ಸ್‌ನಲ್ಲಿ 282 ರನ್‌ಗಳಿಗೆ ಆಲೌಟ್ ಆಯಿತು. ಮಾರ್ಕೊ ಜಾನ್ಸೆನ್ ಅತ್ಯುತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ಪಂದ್ಯ ಶ್ರೇಷ್ಠ ಆಟಗಾರ ಪ್ರದರ್ಶನ ಪಡೆದರು.
ಎರಡನೇ ಸ್ಥಾನಕ್ಕೆ ಜಿಗಿದ ಹರಿಣಗಳು
ದಕ್ಷಿಣ ಆಫ್ರಿಕಾ ತನ್ನ ಒಂಬತ್ತು ಟೆಸ್ಟ್ ಪಂದ್ಯಗಳಲ್ಲಿ ಐದರಲ್ಲಿ ಗೆದ್ದು ಮೂರರಲ್ಲಿ ಸೋತಿದ್ದು 59.26% ಪಿಸಿಟಿಯೊಂದಿಗೆ ಎರಡನೇ ಸ್ಥಾನಕ್ಕೆ ಏರಿದೆ. 15 ಪಂದ್ಯಗಳಲ್ಲಿ ಒಂಬತ್ತು ಗೆಲುವು ಮತ್ತು ಐದು ಸೋಲು ಕಂಡಿರುವ ಭಾರತ ಶೇಕಡಾ 61.11% ಪಿಸಿಟಿಯೊಂದಿಗೆ ಸದ್ಯ ಅಗ್ರಸ್ಥಾನದಲ್ಲಿದೆ.
ಆಸ್ಟ್ರೇಲಿಯಾ 13 ಪಂದ್ಯಗಳಲ್ಲಿ 8 ಪಂದ್ಯಗಳನ್ನು ಗೆದ್ದು 4 ಪಂದ್ಯಗಳಲ್ಲಿ ಸೋತಿದ್ದು 57.690 ಪಿಸಿಟಿಯೊಂದಿಗೆ ಮೂರನೇ ಸ್ಥಾನದಲ್ಲಿದೆ. ಡಿಸೆಂಬರ್ 6 ರಂದು ಅಡಿಲೇಡ್ ಓವಲ್‌ನಲ್ಲಿ ಭಾರತದ ವಿರುದ್ಧ ಎರಡನೇ ಟೆಸ್ಟ್ ಆರಂಭವಾಗಲಿದ್ದು ಈ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಗೆದ್ದರೆ ಮತ್ತೆ ಅಗ್ರಸ್ಥಾನಕ್ಕೆ ಬರಲಿದ್ದು, ಭಾರತ ಮೂರನೇ ಸ್ಥಾನಕ್ಕೆ ಕುಸಿಯುವ ಅಪಾಯ ಕೂಡ ಇದೆ.
ಭಾರತ ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಗೆದ್ದರೆ ಫೈನಲ್ ತಲುಪುವ ಅವಕಾಶ ಇರಲಿದೆ. ಕನಿಷ್ಠ ಇನ್ನೊಂದು ಪಂದ್ಯ ಗೆದ್ದರೂ ಭಾರತದ ಫೈನಲ್ ಆಸೆ ಜೀವಂತವಾಗಿರಲಿದೆ. ಆದರೆ ಇದು ಬೇರೆ ತಂಡಗಳ ಫಲಿತಾಂಶವನ್ನು ಅವಲಂಬಿಸಿರುತ್ತದೆ. ಒಂದು ವೇಳೆ ಭಾರತ 4-0 ಅಥವಾ 5-0 ಅಂತರದಲ್ಲಿ ಸರಣಿ ಗೆದ್ದರೆ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯಲಿದೆ.












Click it and Unblock the Notifications