RCB: ಈ ಆರ್‌ಸಿಬಿ ಸ್ಫೋಟಕ ಬ್ಯಾಟರ್ ಆಟ ನೋಡಲು ಕಾಯುತ್ತಿದ್ದಾರಂತೆ ಬ್ರಿಯಾನ್ ಲಾರಾ
ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಇಂಗ್ಲೆಂಡ್ ತಂಡದ ಸ್ಫೋಟಕ ಬ್ಯಾಟರ್ ಜೇಕಬ್ ಬೆಥೆಲ್‌ರನ್ನು 2.6 ಕೋಟಿ ರೂಪಾಯಿಗೆ ಖರೀದಿ ಮಾಡಿದೆ. ಸನ್‌ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಜೇಕಬ್‌ಗಾಗಿ ತೀವ್ರ ಪೈಪೋಟಿ ನಡೆಸಿದರು ಆರ್‌ಸಿಬಿ ಅವರನ್ನು ಬಿಟ್ಟುಕೊಡಲು ತಯಾರಿರಲಿಲ್ಲ. ಅಂತಿಮವಾಗಿ ಜೇಕಬ್ ಆರ್‌ಸಿಬಿ ಪಾಲಾದರು.
ವಿಲ್ ಜ್ಯಾಕ್ಸ್ ಅಂತಹ ಆಟಗಾರನನ್ನು ಕೈಬಿಟ್ಟಿರುವ ಬಗ್ಗೆ ಅಭಿಮಾನಿಗಳು ಸಿಟ್ಟಾಗಿದ್ದಾರೆ. ಕಳೆದ ಐಪಿಎಲ್‌ನಲ್ಲಿ ಆರ್ ಸಿಬಿ ಪರವಾಗಿ ಅತ್ಯುತ್ತಮ ಪ್ರದರ್ಶನ ನೀಡಿದ ವಿಲ್ ಜ್ಯಾಕ್ಸ್‌ರನ್ನು ಆರ್ ಸಿಬಿ ರಿಟೈನ್ ಮಾಡುತ್ತದೆ ಎಂದು ಅಭಿಮಾನಿಗಳು ವಿಶ್ವಾಸ ಇಟ್ಟುಕೊಂಡಿದ್ದರು. ಆದರೆ ಅಚ್ಚರಿ ಎನ್ನುವಂತೆ ಟಿಮ್ ಡೇವಿಡ್‌ರನ್ನು ಖರೀದಿ ಮಾಡಿದ ಆರ್ ಸಿಬಿ ವಿಲ್ ಜ್ಯಾಕ್ಸ್‌ರನ್ನು ಮುಂಬೈ ಇಂಡಿಯನ್ಸ್ ತಂಡಕ್ಕೆ ಬಿಟ್ಟುಕೊಟ್ಟಿತು. ಬಳಿಕ ಇಂಗ್ಲೆಂಡ್‌ನ ಮತ್ತೊಬ್ಬ ಯುವ ಬ್ಯಾಟರ್ ಜೇಕಬ್ ಬೆಥೆಲ್‌ರನ್ನು ಖರೀದಿ ಮಾಡಿತು.

ವೆಸ್ಟ್ ಇಂಡೀಸ್‌ನ ಮಾಜಿ ಕ್ರಿಕೆಟಿಗ ಬ್ರಿಯಾನ್ ಲಾರಾ ಜೇಕಬ್ ಬೆಥೆಲ್ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆರ್ ಸಿಬಿ ಆತನನ್ನು ಖರೀದಿ ಮಾಡಿದ್ದು ಉತ್ತಮ ಆಯ್ಕೆ ಎಂದಿದ್ದಾರೆ. ಇಂಗ್ಲೆಂಡ್ ವೆಸ್ಟ್ ಇಂಡೀಸ್‌ನಲ್ಲಿ ಆಡಿದ ಟಿ20 ಸರಣಿಯಲ್ಲಿ ಜೇಕಬ್ ಅತ್ಯುತ್ತಮ ಪ್ರದರ್ಶನ ನೀಡಿದ್ದರು, ಅವರ ಪ್ರದರ್ಶನವನ್ನು ಹತ್ತಿರದಿಂದ ನೋಡಿರುವ ಬ್ರಿಯಾನ್ ಲಾರಾ ಕೊಂಡಾಡಿದ್ದಾರೆ.
ಆರ್‌ಸಿಬಿ ಕೋಚ್ ಹೇಳಿದ್ದೇನು?
ಬೆಥೆಲ್‌ರನ್ನು ಖರೀದಿ ಮಾಡಿದ ಬಗ್ಗೆ ಮಾತನಾಡಿದ ಆಂಡಿ ಫ್ಲವರ್, "ಜೇಕಬ್ ಬೆಥೆಲ್ ತುಂಬಾ ಸಾಮರ್ಥ್ಯ ಹೊಂದಿರುವ ವ್ಯಕ್ತಿ, ಆತ ಆಡುವಾಗ ನಮ್ಮ ಫ್ರಾಂಚೈಸಿ ಅಭಿಮಾನಿಗಳು ಅವರ ಆಟವನ್ನು ಹೆಚ್ಚು ಇಷ್ಟಪಡುತ್ತಾರೆ ಎಂದುಕೊಂಡಿದ್ದೇನೆ. ಎಡಗೈ ಬ್ಯಾಟರ್, ದೊಡ್ಡ ಹೊಡೆತಗಳನ್ನು ಹೊಡೆಯುವ ಸಾಮರ್ಥ್ಯ ಹೊಂದಿದ್ದಾರೆ. ಈ ವರ್ಷ ಬ್ಯಾಟರ್ ಆಗಿ ಆತ ನಮಗೆ ತುಂಬಾ ಮುಖ್ಯವಾಗುತ್ತಾರೆ ಎಂದು ಹೇಳಿದ್ದಾರೆ.
21 ವರ್ಷದ ಬೆಥೆಲ್ ಈವರೆಗೆ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಏಳು ಟಿ20 ಪಂದ್ಯಗಳಲ್ಲಿ ಆರು ಇನ್ನಿಂಗ್ಸ್‌ಗಳಲ್ಲಿ 173 ರನ್ ಗಳಿಸಿದ್ದಾರೆ. 57.66 ಸರಾಸರಿ ಹೊಂದಿದ್ದು 167.96 ಸ್ಟ್ರೈಕ್‌ರೇಟ್ ಹೊಂದಿದ್ದಾರೆ. ಅಜೇಯ 62 ರನ್ ಅವರ ಗರಿಷ್ಠ ಮೊತ್ತವಾಗಿದೆ. 14 ಬೌಂಡರಿ, 10 ಸಿಕ್ಸರ್ ಬಾರಿಸಿದ್ದಾರೆ.
ಇಂಗ್ಲೆಂಡ್‌ನ ಮಾಜಿ ಆಟಗಾರ, ದಂತಕಥೆ ನಾಸರ್ ಹುಸೇನ್ ಕೂಡ ಬೆಥೆಲ್‌ರನ್ನು ಮೆಚ್ಚಿಕೊಂಡಿದ್ದಾರೆ. ಆತ ಬ್ಯಾಟಿಂಗ್‌ಗೆ ಬಂದಾಗ ಡಂಕನ್ ಫ್ಲೆಚರ್ ಜ್ಞಾಪಕಕ್ಕೆ ಬರುತ್ತಾರೆ. ಈತ ಭವಿಷ್ಯದಲ್ಲಿ ಇಂಗ್ಲೆಂಡ್‌ನ ಪ್ರಮುಖ ಆಟಗಾರನಾಗುತ್ತಾರೆ ಎಂದು ಹೇಳಿದ್ದಾರೆ. ಆತನ ಮೇಲೆ ಹೂಡಿಕೆ ಮಾಡಿದರೆ ಭವಿಷ್ಯದಲ್ಲಿ ಉತ್ತಮ ಪ್ರತಿಫಲ ಸಿಗಲಿದೆ ಎಂದು ಹೇಳಿದ್ದಾರೆ.
ಇಂಗ್ಲೆಂಡ್‌ನ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಕೂಡ ಬೆಥೆಲ್‌ರನ್ನು ಮೆಚ್ಚಿಕೊಂಡಿದ್ದಾರೆ, ಆತ ನಂಬಲಾಗದಷ್ಟು ಪ್ರತಿಭಾವಂತ. ಆತ ಧೈರ್ಯವಾಗಿ ಬ್ಯಾಟಿಂಗ್ ಮಾಡುತ್ತಾನೆ. ಆತ ಆಡುವುದನ್ನು ನೋಡಲು ಉತ್ಸಾಹದಲ್ಲಿದ್ದೇನೆ ಎಂದು ಹೇಳಿದ್ದಾರೆ.












Click it and Unblock the Notifications