Virat Kohli: ಮೈದಾನದಲ್ಲೇ ಅಕ್ಷರ್ ಪಟೇಲ್ ಕಾಲಿಗೆ ಬೀಳಲು ಹೋದ ವಿರಾಟ್ ಕೊಹ್ಲಿ; ಕಾರಣವೇನು?
ವಿರಾಟ್ ಕೊಹ್ಲಿ ಸದ್ಯ ಕ್ರಿಕೆಟ್ ಜಗತ್ತಿನ ಶ್ರೇಷ್ಠ ಬ್ಯಾಟರ್ ಗಳಲ್ಲಿ ಒಬ್ಬರು. ಜನಪ್ರಿಯತೆ ವಿಚಾರದಲ್ಲಿ ಕೊಹ್ಲಿ ಹೊಸ ಎತ್ತರಕ್ಕೆ ಏರಿದ್ದಾರೆ. ಎದುರಾಳಿಗಳು ಕೆಣಕಿದರೆ ಅವರದೇ ಭಾಷೆಯಲ್ಲಿ ಉತ್ತರ ಕೊಡುವುದು ಕೊಹ್ಲಿ ಕರಗತವಾಗಿದೆ. ಆದರೆ ತಂಡದ ಆಟಗಾರರ ಜೊತೆ ಅವರು ಅದೆಷ್ಟು ಉತ್ತಮ ಬಾಂಧವ್ಯ ಹೊಂದಿರುತ್ತಾರೆ ಎನ್ನುವುದನ್ನು ಹಲವು ಬಾರಿ ನೋಡಿದ್ದೇವೆ. ಈಗ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ತಾನು ತಂಡದ ಆಟಗಾರ ಎನ್ನುವುದನ್ನು ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ.
ಅಭಿಮಾನಿಗಳಿಗೆ ಶಕ್ತಿ ತುಂಬುವುದರಿಂದ ಹಿಡಿದು ತಂಡದ ಆಟಗಾರರನ್ನು ಆಗಾಗ್ಗೆ ಕಾಲೆಳೆಯುವ ಕಿಚಾಯಿಸುವ ಕೊಹ್ಲಿ ಎಲ್ಲರ ಅಚ್ಚುಮೆಚ್ಚಿನ ಆಟಗಾರ. ಅವರು ಮೈದಾನದಲ್ಲಿ ಇದ್ದರೆ ಅಭಿಮಾನಿಗಳಿಗೆ ಮನರಂಜನೆಗೆ ಕೊರತೆ ಎನ್ನುವುದೇ ಇರುವುದಿಲ್ಲ. ತಾನೆಷ್ಟೇ ಎತ್ತರಕ್ಕೆ ಏರಿದರು ತಂಡದ ಯುವ ಆಟಗಾರರನ್ನು ಕೂಡ ಗೌರವದಿಂದ ನಡೆಸಿಕೊಳ್ಳುವ ಗುಣ ಅವರಲ್ಲಿದೆ.

ಕಾಲಿಗೆ ಬೀಳಲು ಹೋದ ವಿರಾಟ್ ಕೊಹ್ಲಿ
ದುಬೈನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ನ್ಯೂಜಿಲೆಂಡ್ ವಿರುದ್ಧದ ಭಾರತದ ಅಂತಿಮ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮಾಡಿದ ಕೆಲಸ ಇದೀಗ ವೈರಲ್ ಆಗಿದೆ. 250 ರನ್‌ಗಳ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್‌ಗೆ ಕೇನ್ ವಿಲಿಯಮ್ಸನ್ ಭಾರತಕ್ಕೆ ದೊಡ್ಡ ತಲೆನೋವಾಗಿದ್ದರು. ಆದರೆ ಅಕ್ಷರ್ ಪಟೇಲ್ 81 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ವಿಲಿಯಮ್ಸನ್ ಅವರನ್ನು ಔಟ್ ಮಾಡಿದ ಬಳಿಕ ಭಾರತದ ದೊಡ್ಡ ಆತಂಕ ದೂರವಾಯಿತು.
ಕೇನ್ ವಿಲಿಯಮ್ಸನ್‌ರನ್ನು ಔಟ್ ಮಾಡುತ್ತಿದ್ದಂತೆ ಅಕ್ಷರ್ ಪಟೇಲ್ ಬಳಿಗೆ ಬಂದ ವಿರಾಟ್ ಕೊಹ್ಲಿ, ಕಾಲು ಮುಟ್ಟಿ ನಮಸ್ಕರಿಸಲು ಮುಂದಾದರು. ಆದರೆ ತಕ್ಷಣ ಕೊಹ್ಲಿಯನ್ನು ಹಿಡಿದುಕೊಂಡ ಅಕ್ಷರ್ ಪಟೇಲ್ ಕೈ ಮುಗಿದರು. ಇಬ್ಬರ ನಡುವಿನ ಈ ತಮಾಷೆಯ ಕ್ಷಣಗಳು ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿರಾಟ್ ಕೊಹ್ಲಿಗೆ ಯಾವುದೇ ಅಹಂ ಇಲ್ಲದೆ ತಂಡದ ಆಟಗಾರರ ಜೊತೆ ಬೆರೆಯುವ ಗುಣ ಹೊಂದಿರುವುದು ಅಭಿಮಾನಿಗಳ ಮನಗೆದ್ದಿದೆ.
ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರಾಳಿ
ಭಾರತ ನಾಳೆ (ಮಾರ್ಚ್ 4, ಮಂಗಳವಾರ) ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಣೆಸಲಿದೆ. 2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತವನ್ನು ಸೋಲಿಸಿದ್ದ ಆಸ್ಟ್ರೇಲಿಯಾವನ್ನು ಸೋಲಿಸಿ ಸೇಡು ತೀರಿಸಿಕೊಳ್ಳುವ ಅವಕಾಶ ಸಿಕ್ಕಿದೆ.
ಆಸ್ಟ್ರೇಲಿಯಾ ಕೂಡ ಉತ್ತಮ ಫಾರ್ಮ್‌ನಲ್ಲಿದೆ, ತಂಡದ ಬ್ಯಾಟಿಂಗ್ ಉತ್ತಮವಾಗಿದ್ದು, ಬೌಲಿಂಗ್‌ನಲ್ಲಿ ಅನುಭವದ ಕೊರತೆಯಿದೆ. ಮುಖ್ಯವಾದ ಪಂದ್ಯ ಎಂದು ಬಂದಾಗ ಆಸ್ಟ್ರೇಲಿಯಾ ಉತ್ತಮ ಪ್ರದರ್ಶನ ನೀಡಿರುವ ಇತಿಹಾಸ ಹೊಂದಿದೆ. ಮಂಗಳವಾರ ಭಾರತ ಆಸ್ಟ್ರೇಲಿಯಾ ವಿರುದ್ಧ ಗೆಲುವು ಸಾಧಿಸುವ ಮೂಲಕ ಫೈನಲ್ ತಲುಪಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.












Click it and Unblock the Notifications