T20 World Cup: ಯುಎಸ್‌ಎಗೆ ಹೊರಟ ಟೀಂ ಇಂಡಿಯಾ; ಮೊದಲ ಪಂದ್ಯ ಯಾವಾಗ? ಎದುರಾಳಿ ಯಾರು?
ಟಿ20 ವಿಶ್ವಕಪ್ ಪಂದ್ಯಾವಳಿ ಆರಂಭಕ್ಕೆ ದಿನಗಣನೆ ಶುರುವಾಗಿದ್ದು, ಎಲ್ಲಾ ತಂಡಗಳು ಸಿದ್ಧತೆ ಆರಂಭಿಸಿವೆ. ಐಪಿಎಲ್‌ನಲ್ಲಿ ಮಿಂಚಿರುವ ಭಾರತ ತಂಡದ ಆಟಗಾರರು, ಈಗ ವಿಶ್ವಕಪ್ ಪಂದ್ಯಾವಳಿಗೆ ಸಜ್ಜಾಗಲು ಯುಎಸ್‌ಎಗೆ ತೆರಳಿದ್ದಾರೆ.
ಶನಿವಾರ ಮುಂಬೈ ವಿಮಾನ ನಿಲ್ದಾಣದಿಂದ ಭಾರತ ತಂಡದ ಹಲವು ಆಟಗಾರರು ಯುಎಸ್‌ಎಗೆ ಪ್ರಯಾಣ ಮಾಡಿದ್ದಾರೆ. ನಾಯಕ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಮೊಹಮ್ಮದ್ ಸಿರಾಜ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ರಿಷಬ್ ಪಂತ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್ ಜೊತೆಗೆ ಕೋಚ್ ರಾಹುಲ್ ದ್ರಾವಿಡ್ ಕೂಡ ಪ್ರಯಾಣ ಬೆಳೆಸಿದರು.

ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಮತ್ತು ಸಂಜು ಸ್ಯಾಮ್ಸನ್ ಮುಂದಿನ ಬ್ಯಾಚ್‌ನಲ್ಲಿ ಯುಎಸ್‌ಎಗೆ ಪ್ರಯಾಣ ಮಾಡುವ ಸಾಧ್ಯತೆ ಇದೆ. ಟಿ20 ವಿಶ್ವಕಪ್ ಆರಂಭಕ್ಕೆ ಮುನ್ನ ಬಾಂಗ್ಲಾದೇಶದ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಲಿದೆ.
ಭಾರತ ತಂಡದ ಎದುರಾಳಿಗಳು ಯಾರು?
ಟಿ20 ವಿಶ್ವಕಪ್‌ನಲ್ಲಿ ಭಾರತ ಎ ಗುಂಪಿನಲ್ಲಿದೆ. ಲೀಗ್ ಹಂತದಲ್ಲಿ ಭಾರತ ನಾಲ್ಕು ಪಂದ್ಯಗಳನ್ನು ಆಡಲಿದೆ. ಜೂನ್ 5 ರಂದು ಭಾರತ ಟಿ20 ವಿಶ್ವಕಪ್ 2024 ರಲ್ಲಿ ತಮ್ಮ ಮೊದಲ ಪಂದ್ಯವನ್ನು ಆಡಲಿದೆ. ಮೊದಲ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಸೆಣೆಸಲಿದ್ದು, ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಜೂನ್ 9 ರಂದು ನಡೆಯಲಿರುವ ಮಹತ್ವದ ಪಂದ್ಯದಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಆಡಲಿದ್ದು, ಈ ಪಂದ್ಯ ಕೂಡ ನ್ಯೂಯಾರ್ಕ್‌ನಲ್ಲಿ ನಡೆಯಲಿದೆ. ಬಳಿಕ ಜೂನ್ 12 ರಂದು ಯುಎಸ್‌ಎ ವಿರುದ್ಧ ಪಂದ್ಯವನ್ನಾಡಲಿದ್ದು, ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಭಾರತ ಕೆನಡಾ ತಂಡವನ್ನು ಎದುರಿಸಲಿದೆ. ಈ ಪಂದ್ಯ ಜೂನ್ 15 ರಂದು ಫ್ಲೋರಿಡಾದಲ್ಲಿ ನಡೆಯಲಿದೆ.
ಏಕದಿನ ವಿಶ್ವಕಪ್‌ನಲ್ಲಿ ಫೈನಲ್‌ನಲ್ಲಿ ಸೋತು ನಿರಾಸೆ ಅನುಭವಿಸಿದ್ದ ಭಾರತ ತಂಡ ಈಗ ಟಿ20 ವಿಶ್ವಕಪ್‌ಗೆ ಸಿದ್ಧತೆ ಆರಂಭಿಸಿದೆ. 11 ವರ್ಷಗಳ ಐಸಿಸಿ ಟ್ರೋಫಿ ಬರಕ್ಕೆ ಈ ವರ್ಷವಾದರೂ ಭಾರತ ಅಂತ್ಯವಾಡಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.
ಟಿ20 ವಿಶ್ವಕಪ್‌ಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ (ಉಪನಾಯಕ), ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ಸಂಜು ಸ್ಯಾಮ್ಸನ್, ಶಿವಂ ದುಬೆ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಯುಜ್ವೇಂದ್ರ ಚಹಾಲ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್.












Click it and Unblock the Notifications