T20 World Cup: ರೋಹಿತ್ ಪಡೆ ಭಾರತಕ್ಕೆ ತಂದದ್ದು ನಕಲಿ ಟ್ರೋಫಿ! ಅಸಲಿ ಟ್ರೋಫಿ ಎಲ್ಲಿದೆ ಗೊತ್ತಾ?
17 ವರ್ಷಗಳ ಬಳಿಕ ಭಾರತ ತಂಡ ಟಿ20 ವಿಶ್ವಕಪ್ ಗೆದ್ದಿದೆ. ಬಾರ್ಬಡೋಸ್‌ನಿಂದ ಎರಡು ದಿನ ತಡವಾಗಿ ಬಂದರೂ, ರೋಹಿತ್ ಶರ್ಮಾ ಮತ್ತು ಪಡೆಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಜನಸಾಗರದ ನಡುವೆ ಭಾರತ ತಂಡದ ಆಟಗಾರರು, ಕಪ್ ಎತ್ತಿಹಿಡಿದು ಸಂಭ್ರಮಿಸಿದ್ದಾರೆ.
ಅಚ್ಚರಿಯ ವಿಚಾರ ಎಂದರೆ, ಟಿ20 ವಿಶ್ವಕಪ್ ಗೆದ್ದಿರುವ ಭಾರತ ತವರಿಗೆ ತಂದಿರುವುದು ಅಸಲಿ ಟ್ರೋಫಿಯಲ್ಲಿ ಬದಲಾಗಿ ಅದರ ನಕಲು ಅಷ್ಟೇ! ಹೌದು, ಭಾರತದಲ್ಲಿ ಸಾವಿರಾರು ಅಭಿಮಾನಿಗಳ ಮುಂದೆ ಎತ್ತಿಹಿಡಿದು ತೋರಿಸಿದ್ದು ಅಸಲಿ ಟ್ರೋಫಿಯಲ್ಲ.

ಹಾಗಾದರೆ, ಅಸಲಿ ಟ್ರೋಫಿ ಎಲ್ಲಿದೆ? ವಿಶ್ವಕಪ್ ಗೆದ್ದರೂ ಅಸಲಿ ಟ್ರೋಫಿಯನ್ನು ಭಾರತಕ್ಕೆ ಏಕೆ ನೀಡಿಲ್ಲ ಎನ್ನುವ ಪ್ರಶ್ನೆಗಳು ಕಾಡುವುದು ಸಹಜ. ಅದರ ಬಗ್ಗೆ ಎಲ್ಲಾ ಡಿಟೈಲ್ಸ್ ಇಲ್ಲಿದೆ.
ಅಸಲಿ ಟ್ರೋಫಿ ಫೋಟೊಗಷ್ಟೇ ಸೀಮಿತ!
ಬಾರ್ಬಡೋಸ್‌ನಲ್ಲಿ ಭಾರತ ಫೈನಲ್ ಪಂದ್ಯದಲ್ಲಿ ಗೆದ್ದಾಗ ಅಲ್ಲಿ ನೀಡಿದ್ದು ಅಸಲಿ ಟಿ20 ವಿಶ್ವಕಪ್ ಟ್ರೋಫಿಯನ್ನು. ರೋಹಿತ್ ಪಡೆ ಮೈದಾನದಲ್ಲಿ ಎತ್ತಿ ಹಿಡಿದು ಸಂಭ್ರಮಿಸಿದ ಟ್ರೋಫಿ ಅಸಲಿ. ಅಲ್ಲಿ ಫೋಟೊ ಎಲ್ಲಾ ತೆಗೆಸಿಕೊಂಡ ಮೇಲೆ, ಅಸಲಿ ಟ್ರೋಫಿಯನ್ನು ವಾಪಸ್ ಪಡೆಯಲಾಯಿತು. ಅದರ ಬದಲಾಗಿ ಪ್ರತಿಕೃತಿಯನ್ನು ಭಾರತ ತಂಡಕ್ಕೆ ತವರಿಗೆ ತರಲು ನೀಡಲಾಯಿತು.
ಇದೇನು ಹೊಸದಲ್ಲ ಈವರೆಗೆ ವಿಶ್ವಕಪ್ ಗೆದ್ದಿರುವ ಎಲ್ಲಾ ತಂಡಗಳಿಗೆ ಸಿಕ್ಕಿರುವುದು ಕೂಡ ನಕಲಿ ಟ್ರೋಫಿಯೇ!, ಅಂದರೆ ಟಿ20 ವಿಶ್ವಕಪ್ ಟ್ರೋಫಿಯ ಪ್ರತಿಕೃತಿ ಮಾತ್ರ. ಅಸಲಿ ಟ್ರೋಫಿಯ ಐಸಿಸಿ ಕಚೇರಿಯಲ್ಲಿ ಭದ್ರವಾಗಿರುತ್ತದೆ.
ವಿಜೇತ ತಂಡವು ಅಂತಿಮ ಪಂದ್ಯದ ನಂತರ ಫೋಟೊಶೂಟ್‌ಗಾಗಿ ನಿಜವಾದ ಟ್ರೋಫಿಯನ್ನು ಪಡೆಯುತ್ತದೆ. ಆದರೆ, ತಂಡವು ಬೆಳ್ಳಿಯಿಂದ ಮಾಡಿರುವ ಟ್ರೋಫಿ ಪ್ರತಿಕೃತಿಯೊಂದಿಗೆ ತವರಿಗೆ ಪ್ರಯಾಣಿಸುತ್ತದೆ, ಆದರೆ ನಿಜವಾದ ಟ್ರೋಫಿಯು ದುಬೈನಲ್ಲಿರುವ ಐಸಿಸಿ ಪ್ರಧಾನ ಕಚೇರಿಗೆ ವಾಪಸ್ ತೆಗೆದುಕೊಂಡು ಹೋಗಲಾಗುತ್ತದೆ.
ಪ್ರತಿಕೃತಿ ಟ್ರೋಫಿಯನ್ನು ವರ್ಷದ ಈವೆಂಟ್ ಲೋಗೋದೊಂದಿಗೆ ಮಾರ್ಪಾಟು ಮಾಡಲಾಗಿದೆ, ಇದು ಪಂದ್ಯಾವಳಿಯ ಪ್ರಕಾರ ವಿಶಿಷ್ಟವಾಗಿದೆ. ರೋಹಿತ್ ಪಡೆ ತಂದಿರುವ ಟ್ರೋಫಿಯನ್ನು ಮುಂಬೈನಲ್ಲಿರುವ ಬಿಸಿಸಿಐ ಕಚೇರಿಯಲ್ಲಿ ಇಡಲಾಗುತ್ತದೆ.
ವಿಶ್ವಕಪ್ ಅಸಲಿ ಸಿಕ್ಕದಿದ್ದರೇನು, ಭಾರತದ ಗೆಲುವು ಮಾತ್ರ ಅಸಲಿ. ಅಭಿಮಾನಿಗಳ ಖುಷಿಯೂ ಕೂಡ! ಭಾರತ ಟಿ20 ವಿಶ್ವಕಪ್ ಗೆದ್ದಿರುವುದು ಮಾತ್ರ ಭಾರತೀಯ ಕ್ರೀಡಾಭಿಮಾನಿಗಳ ಖುಷಿಯನ್ನು ಹಚ್ಚಿಸಿದೆ. ಭಾರತ ತಂಡದ ವಿಜಯ ಯಾತ್ರೆಯ ವೇಳೆ ನೆರೆದಿದ್ದ ಜನಸಮೂಹವೇ ಅದಕ್ಕೆ ಸಾಕ್ಷಿಯಾಗಿದೆ.
ಏನೇ ಆದರೂ ಕ್ರಿಕೆಟ್ ಎಂದರೆ ಭಾರತವನ್ನು ಮೀರಿಸುವ ಅಭಿಮಾನಿಗಳು ಮತ್ತೆಲ್ಲೂ ಸಿಗುವುದಿಲ್ಲ. ಭಾರತೀಯ ಕ್ರಿಕೆಟ್ ಆಟಗಾರರಿಗೆ ಸಿಗುವಷ್ಟು ಗೌರವ, ಜನಪ್ರಿಯತೆ ಕೂಡ ವಿಶ್ವದ ಇತರ ತಂಡಗಳ ಆಟಗಾರರಿಗೆ ಸಿಗುವುದು ಕಡಿಮೆ.












Click it and Unblock the Notifications