T20 World Cup: ಟೀಮ್ ಇಂಡಿಯಾಕ್ಕೆ ತಲೆ ನೋವಾದ ಆಲ್‌ರೌಂಡರ್
ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡುತ್ತಿದೆ. ಆಡಿದ ಎರಡೂ ಪಂದ್ಯಗಳನ್ನು ಗೆದ್ದ ಟೀಮ್ ಇಂಡಿಯಾ ಸೂಪರ್ 8 ಹಂತದ ಬಾಗಿಲಿಗೆ ಬಂದು ನಿಂತಿದೆ. ಭಾನುವಾರ ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ ನೀಡಿರುವ ಪ್ರದರ್ಶನ ನಿಜಕ್ಕೂ ಅಭಿಮಾನಿಗಳಿಗೆ ಮುದ ನೀಡಿದೆ.
ಟೀಮ್ ಇಂಡಿಯಾದ ಸಂಘಟಿತ ಆಟ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಆಟಗಾರರು ಸ್ಥಿರ ಪ್ರದರ್ಶನ ನೀಡಿ ಜಯದಲ್ಲಿ ತಮ್ಮದೇ ಆದ ಕಾಣಿಕೆ ನೀಡುತ್ತಿದ್ದಾರೆ. ಆದರೆ ಈ ಒಬ್ಬ ಪ್ಲೇಯರ್ ಮಾತ್ರ ರೋಹಿತ್ ಶರ್ಮಾ ತಲೆ ನೋವು ಹೆಚ್ಚಿಸಿದ್ದಾನೆ. ಈ ಪ್ಲೇಯರ್ ಆಲ್‌ರೌಂಡರ್ ರೂಪದಲ್ಲಿ ಸ್ಥಾನ ಪಡೆದರೂ ತಂಡಕ್ಕೆ ಆಧಾರವಾಗುತ್ತಿಲ್ಲ.

ಮೂವರು ಆಲ್‌ರೌಂಡರ್‌ಗಳ ಅಬ್ಬರ
ಟೀಮ್ ಇಂಡಿಯಾ ಟಿ20 ವಿಶ್ವಕಪ್‌ನಲ್ಲಿ ನಾಲ್ಕು ಜನ ಆಲ್‌ರೌಂಡರ್‌ಗಳೊಂದಿಗೆ ಆಡುತ್ತಿದೆ. ಅದರಲ್ಲೂ ಅಕ್ಷರ್ ಪಟೇಲ್ ತಮ್ಮನ್ನು ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಕಳುಹಿಸಬಹುದು ಎಂದು ಸಾರಿ ಹೇಳಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಅಕ್ಷರ್, ತಂಡಕ್ಕೆ ಆಧಾರವಾಗಿದ್ದರು. ಅಲ್ಲದೆ ಬೌಲಿಂಗ್‌ನಲ್ಲೂ ಬಿಗುವಿನ ದಾಳಿ ನಡೆಸುತ್ತಿದ್ದಾರೆ.
ರೋಹಿತ್ ಪಡೆಯ ಸ್ಟಾರ್ ಆಲ್‌ರೌಂಡರ್‌ಗಳಲ್ಲಿ ಒಬ್ಬರು ರವೀಂದ್ರ ಜಡೇಜಾ. ಇವರಿಗೆ ಈ ಎರಡು ಪಂದ್ಯಗಳಲ್ಲಿ ಅಷ್ಟು ಅವಕಾಶ ಸಿಗಲಿಲ್ಲ. ಬೌಲಿಂಗ್‌ನಲ್ಲೂ ಇವರಿಗೆ ಕಡಿಮೆ ಓವರ್ ನೀಡಲಾಯಿತು. ಆದರೆ ಇವರಿಗೆ ಟೀಮ್ ಇಂಡಿಯಾ ಯಾವುದೇ ಜವಾಬ್ದಾರಿಯನ್ನು ನೀಡಿದರೂ ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ. ಅಲ್ಲದೆ ಇವರು ಫೀಲ್ಡಿಂಗ್‌ನಲ್ಲಿ ತಮ್ಮದೇ ಛಾಪು ಮೂಡಿಸಿರುವ ಪ್ಲೇಯರ್.
ಟೀಮ್ ಇಂಡಿಯಾದ ಉಪನಾಯಕ ಹಾರ್ದಿಕ್ ಪಾಂಡ್ಯ, ತಮ್ಮ ಮೇಲಿನ ಟೀಕೆಗಳಿಗೆ ಅಂಗಳದಲ್ಲಿ ಉತ್ತರ ನೀಡುತ್ತಿದ್ದಾರೆ. ಅಲ್ಲದೆ ಮೊನಚಾದ ದಾಳಿ ಸಂಘಟಿಸಿ ವಿಕೆಟ್ ಬೇಟೆ ನಡೆಸುತ್ತಿದ್ದಾರೆ. ಇವರು ಯಾರು ಟೀಮ್ ಇಂಡಿಯಾಕ್ಕೆ ತಲೆ ನೋವಾಗಿ ಪರಿಣಮಿಸಿಲ್ಲ. ಆದರೆ ಈ ಆಲ್‌ರೌಂಡರ್ ಟೀಮ್ ಇಂಡಿಯಾಕ್ಕೆ ತಲೆ ನೋವಾಗಿ ಪರಿಣಮಿಸಿದ್ದಾರೆ.

ಐಪಿಎಲ್‌ನಲ್ಲಿ ಕಮಾಲ್
ಇಂಡಿಯನ್ ಪ್ರೀಮಿಯರ್ ಲೀಗ್‌ನ ಆರಂಭಿಕ ಪಂದ್ಯಗಳಲ್ಲಿ ಧಮಾಕೆದಾರ ಪ್ರದರ್ಶನ ನೀಡಿ ಎಲ್ಲರೂ ಹುಬ್ಬೇರುವಂತೆ ಮಾಡಿರುವ ಪ್ಲೇಯರ್ ಶಿವಂ ದುಬೆ. ಇವರ ಆಟವನ್ನು ಕಂಡು ಬಿಸಿಸಿಐ ಮನಸೋತು, ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡಿತು. ಇವರಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಕ್ಕಿದೆ ಸಿಕ್ಕಿದ್ದು, ಇವರ ಬ್ಯಾಟಿಂಗ್ ಖದರ್ ಚೇಂಜ್ ಆಯಿತು. ಮೊದಲು ಇವರು ಬಾರಿಸಿದ ಚೆಂಡು ಪ್ರೇಕ್ಷಕರ ಗ್ಯಾಲರಿಕಡೆ ಹೋಗುತ್ತಿತ್ತು. ಆದರೆ ಸೆಲೆಕ್ಷನ್ ಆದ್ಮೇಲೆ ಇವರ ಬಾರಿಸಿದ ಚೆಂಡು ಫೀಲ್ಡರ್ ಕೈಗೆ ಹೊಗುತ್ತಿದೆ.
ಹೇಗಿದೆ ಮೇ ನಲ್ಲಿ ಪ್ರದರ್ಶನ?
ಈ ವರ್ಷದ ಮೇ ತಿಂಗಳಿನಿಂದ ಟಿ20ಯಲ್ಲಿ ಶಿವಂ ಅವರ ಪ್ರದರ್ಶನ ತೀರಾ ಕಳಪೆಯಾಗಿದೆ. ಕಳೆದ ಎಂಟು ಇನ್ನಿಂಗ್ಸ್‌ಗಳಲ್ಲಿ ಇವರ ಬ್ಯಾಟ್‌ನಿಂದ ಬಿಗ್ ಇನಿಂಗ್ಸ್ ಬಂದಿಲ್ಲ. ಮೇ 2024 ರಿಂದ, ಶಿವಂ ಟಿ20ಯಲ್ಲಿ 0, 0, 21, 18, 07, 14, 0*, 03 ಗಳಿಸಿದ್ದಾರೆ. ಶಿವಂ ಒಟ್ಟು ಎಂಟು ಪಂದ್ಯಗಳಲ್ಲಿ ಕೇವಲ 63 ರನ್ ಗಳಿಸಿದ್ದಾರೆ. ಭಾರತ ತಂಡವು ಶಿವಂ ಅವರಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದೆ, ಆದರೆ ಇಲ್ಲಿಯವರೆಗೆ ಅವರು ನಿರೀಕ್ಷೆಗೆ ತಕ್ಕಂತೆ ಆಡಲು ಸಾಧ್ಯವಾಗಲಿಲ್ಲ.

ಪಾಕ್ ವಿರುದ್ಧವೂ ವಿಫಲ
ಪಾಕಿಸ್ತಾನದ ವಿರುದ್ಧ ಭಾರತ ತಂಡ ಬ್ಯಾಟಿಂಗ್ ಮಾಡುವಾಗ ಸ್ಥಿತಿ ಉತ್ತಮವಾಗಿರಲಿಲ್ಲ. ಇದು ಶಿವಂ ದುಬೆಗೆ ತನ್ನನ್ನು ತಾನು ಸಾಬೀತು ಪಡಿಸಿಕೊಳ್ಳಲು ಉತ್ತಮ ಅವಕಾಶ ವಾಗಿತ್ತು. ಆದರೆ ಈ ಅವಕಾಶವನ್ನೂ ಸಹ ಶಿವಂ ಕೈ ಚೆಲ್ಲಿದರು. ಶಿವಂ ಅವರದೇ ಎಸೆತದಲ್ಲಿ ನಸೀಮ್ ಶಾಗೆ ಕ್ಯಾಚ್ ನೀಡಿದರು. ಶಿವಂ ಮತ್ತೊಮ್ಮೆ ಪ್ರಭಾವ ಬೀರಲು ವಿಫಲರಾದರು. ಅಲ್ಲದೆ ಫೀಲ್ಡಿಂಗ್‌ನಲ್ಲೂ ಕ್ಯಾಚ್ ಡ್ರಾಪ್ ಮಾಡಿ ಕೆಂಗಣ್ಣಿಗೆ ಗುರಿಯಾದರು.
ಇದಕ್ಕೂ ಮುನ್ನ ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯದಲ್ಲೂ ಶಿವಂ ಬ್ಯಾಟಿಂಗ್ ಪ್ರದರ್ಶನ ನೀಡಲು ವಿಫಲರಾಗಿದ್ದರು. ಐರ್ಲೆಂಡ್ ವಿರುದ್ಧದ ತಂಡದ ಮೊದಲ ಪಂದ್ಯದಲ್ಲಿ ಶಿವಂ ಅವರಿಗೆ ಬ್ಯಾಟಿಂಗ್ ಅವಕಾಶ ಸಿಗಲಿಲ್ಲ.
ಈ ಅಂಕಿ ಅಂಶಗಳನ್ನು ನೋಡ್ತಾ ಇದ್ದರೆ ಶಿವಂ ದುಬೆಗೆ ಮುಂದಿನ ಪಂದ್ಯಗಳಲ್ಲಿ ಆಡುವ ಅವಕಾಶ ಕೈ ತಪ್ಪುವ ಸಾಧ್ಯತೆ ದಟ್ಟವಾಗಿದೆ. ಈಗ ಇವರ ಬದಲಿಗೆ ಯಾರು ತಂಡದಲ್ಲಿ ಸ್ಥಾನ ಪಡೆಯುತ್ತಾರೆ ಎಂಬುದೇ ಕುತೂಹಲ ಮೂಡಿಸಿದೆ.












Click it and Unblock the Notifications