T20 World Cup: ಜೂನ್ 1ರಿಂದ ಟಿ20 ವಿಶ್ವಕಪ್ ಹಬ್ಬ: ಭಾರತ Vs ಪಾಕಿಸ್ತಾನ ಪಂದ್ಯ ಯಾವಾಗ?
ಏಕದಿನ ವಿಶ್ವಕಪ್ ಮುಗಿದ ಬಳಿಕ 2024ರಲ್ಲಿ ಟಿ20 ಕ್ರಿಕೆಟ್ ಹಬ್ಬ ಶುರುವಾಗಲಿದೆ. ಜೂನ್ 1ರಂದು ಟಿ20 ವಿಶ್ವಕಪ್ ಪಂದ್ಯಾವಳಿ ಆರಂಭವಾಗಲಿದೆ. ಜೂನ್ 1ರಂದು ನಡೆಯುವ ವಿಶ್ವಕಪ್ ಮೊದಲ ಪಂದ್ಯದಲ್ಲಿ ಆತಿಥೇಯ ಯುಎಸ್‌ಎ ಮತ್ತು ಕೆನಡಾ ಮುಖಾಮುಖಿಯಾಗಲಿವೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಬಹು ನಿರೀಕ್ಷಿತ ಪಂದ್ಯವು ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ನಡೆಯಲಿದೆ. ಭಾರತವು ಪಾಕಿಸ್ತಾನ, ಯುಎಸ್ಎ, ಕೆನಡಾ ಮತ್ತು ಐರ್ಲೆಂಡ್ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ.

ಜೂನ್ 5 ರಂದು ಭಾರತ vs ಐರ್ಲೆಂಡ್, ಜೂನ್ 9 ರಂದು ಭಾರತ vs ಪಾಕಿಸ್ತಾನ, ಜೂನ್ 12 ರಂದು ಭಾರತ vs ಯುಎಸ್‌ಎ ಮತ್ತು ಜೂನ್ 15 ರಂದು ಭಾರತ vs ಕೆನಡಾ ಪಂದ್ಯಗಳು ನಡೆಯಲಿವೆ.
ಟಿ20 ವಿಶ್ವಕಪ್ 2024 ರ ಎರಡು ಸೆಮಿಫೈನಲ್ ಪಂದ್ಯಗಳು ಜೂನ್ 26 ಮತ್ತು 27 ರಂದು ನಡೆಯಲಿದ್ದು, ಜೂನ್ 29 ರಂದು ಬಾರ್ಬಡೋಸ್‌ನಲ್ಲಿ ಫೈನಲ್ ಪಂದ್ಯ ನಡೆಯಲಿದೆ.
ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ವೆಬ್‌ಸೈಟ್ ಪ್ರಕಾರ, ಬಿ ಗುಂಪಿನಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ, ನಮೀಬಿಯಾ, ಸ್ಕಾಟ್‌ಲ್ಯಾಂಡ್ ಮತ್ತು ಓಮನ್ ತಂಡಗಳು ಇರಲಿವೆ.
ವೆಸ್ಟ್ ಇಂಡೀಸ್, ನ್ಯೂಜಿಲೆಂಡ್, ಅಫ್ಘಾನಿಸ್ತಾನ್, ಉಗಾಂಡಾ ಮತ್ತು ಪಪುವಾ ನ್ಯೂಗಿನಿಯಾ ಸಿ ಗುಂಪಿನಲ್ಲಿ ಆಡಲಿವೆ. ಡಿ ಗುಂಪಿನಲ್ಲಿ ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ, ನೆದರ್ಲ್ಯಾಂಡ್ಸ್ ಮತ್ತು ನೇಪಾಳ ತಂಡಗಳು ಇರಲಿವೆ.
55 ಪಂದ್ಯಗಳ ಕ್ರಿಕೆಟ್ ಹಬ್ಬ
2024ರ ಟಿ20 ವಿಶ್ವಕಪ್‌ನಲ್ಲಿ 55 ಪಂದ್ಯಗಳು ನಡೆಯಲಿವೆ. ವೆಸ್ಟ್ ಇಂಡೀಸ್‌ನ ಆರು ವಿವಿಧ ಸ್ಥಳಗಳಲ್ಲಿ ವಿಶ್ವಕಪ್ ಪಂದ್ಯಗಳು ನಡೆಯಲಿವೆ. ಕೆನ್ಸಿಂಗ್ಟನ್ ಓವಲ್, ಬಾರ್ಬಡೋಸ್; ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿ, ಟ್ರಿನಿಡಾಡ್; ಪ್ರಾವಿಡೆನ್ಸ್ ಸ್ಟೇಡಿಯಂ, ಗಯಾನಾ; ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣ, ಆಂಟಿಗುವಾ; ಡ್ಯಾರೆನ್ ಸ್ಯಾಮಿ ಕ್ರಿಕೆಟ್ ಮೈದಾನ, ಸೇಂಟ್ ಲೂಸಿಯಾ; ಅರ್ನೋಸ್ ವೇಲ್ ಸ್ಟೇಡಿಯಂ, ಸೇಂಟ್ ವಿನ್ಸೆಂಟ್ ಕ್ರೀಡಾಂಗಣದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಯುಎಸ್‌ಎನ ಮೂರು ಸ್ಥಳಗಳಾದ ಐಸೆನ್‌ಹೋವರ್ ಪಾರ್ಕ್, ನ್ಯೂಯಾರ್ಕ್. ಲಾಡರ್‌ಹಿಲ್, ಫ್ಲೋರಿಡಾ. ಮತ್ತು ಗ್ರ್ಯಾಂಡ್ ಪ್ರೈರೀ, ಟೆಕ್ಸಾಸ್‌ನಲ್ಲಿ ಪಂದ್ಯಗಳು ನಡೆಯಲಿವೆ.
ನ್ಯೂಯಾರ್ಕ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯ ನಡೆಯಲಿದ್ದು, ಈ ಮೂಲಕ ಅಮೆರಿಕದಲ್ಲಿಯೂ ಕ್ರಿಕೆಟ್ ಜನಪ್ರಿಯಗೊಳಿಸುತ್ತದೆ ಎಂದು ನಿರೀಕ್ಷೆ ಮಾಡಲಾಗಿದೆ.












Click it and Unblock the Notifications