Ind vs Aus: ದುಬೈನಲ್ಲಿ ಆಡುತ್ತಿರುವುದು ಭಾರತಕ್ಕೆ ಅನುಕೂಲ! ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಹೇಳಿದ್ದೇನು?
ಮಾರ್ಚ್ 4, ಮಂಗಳವಾರ ದುಬೈನಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಸೆಮಿಫೈನಲ್‌ನಲ್ಲಿ ಭಾರತ ಆಸ್ಟ್ರೇಲಿಯಾ ಮುಖಾಮುಖಿಯಾಗಲಿವೆ. ಲೀಗ್ ಹಂತದಲ್ಲಿ ಎರಡೂ ತಂಡಗಳು ಸೋಲು ಕಂಡಿಲ್ಲ, ಆಸ್ಟ್ರೇಲಿಯಾ ಆಡಿದ ಮೂರು ಪಂದ್ಯಗಳಲ್ಲಿ ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿದ್ದರೆ, ಒಂದು ಪಂದ್ಯ ಮಳೆಯಿಂದ ರದ್ದಾಗಿದ್ದು, ಮತ್ತೊಂದು ಪಂದ್ಯ ಅರ್ಧಕ್ಕೆ ನಿಂತಿದ್ದರಿಂದ ಒಂದೊಂದು ಅಂಕವನ್ನು ಹಂಚಿಕೊಂಡಿತ್ತು.
ಪ್ಯಾಟ್ ಕಮ್ಮಿನ್ಸ್ ಅನುಪಸ್ಥಿತಿಯಲ್ಲಿ ಹಿರಿಯ ಅನುಭವಿ ಆಟಗಾರ ಸ್ಟೀವ್ ಸ್ಮಿತ್ ತಂಡವನ್ನು ಮುನ್ನಡೆಸುತ್ತಿದ್ದಾರೆ. 2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಸೋತು ಅವಮಾನ ಅನುಭವಿಸಿದ್ದ ಭಾರತಕ್ಕೆ ಈಗ ಸೇಡು ತೀರಿಸಿಕೊಳ್ಳುವ ಅವಕಾಶ ಸಿಕ್ಕಿದೆ. ಪಂದ್ಯಕ್ಕೆ ಮುನ್ನಾ ದಿನ ಆಸ್ಟ್ರೇ;ಇಯಾ ನಾಯಕ ಸ್ಟೀವ್ ಸ್ಮಿತ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದು, ದುಬೈನಲ್ಲಿ ಪಂದ್ಯ ನಡೆಯುತ್ತಿರುವುದು ಭಾರತ ತಂಡಕ್ಕೆ ಅನುಕೂಲವಾಗಿದೆಯಾ ಎನ್ನುವ ಬಗ್ಗೆ ಕೂಡ ಪ್ರತಿಕ್ರಿಯೆ ನೀಡಿದರು.

ಸ್ಟೀವ್ ಸ್ಮಿತ್ ಹೇಳಿದ್ದೇನು?
ಪಂದ್ಯವನ್ನು ಗೆಲ್ಲಲು ಮಾಡಿರುವ ಯೋಜನೆ ಮತ್ತು ಪಿಚ್ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಭಾರತವು ಲೀಗ್ ಹಂತದ ಮೂರು ಪಂದ್ಯಗಳನ್ನು ದುಬೈನಲ್ಲಿ ಆಡಿದ್ದು ಅನುಕೂಲವಾಗಿದೆ ಎಂದು ಹಲವರು ಹೇಳಿದ್ದಾರೆ. ಈ ಬಗ್ಗೆ ಸ್ಟೀವ್ ಸ್ಮಿತ್ ಮಾತನಾಡಿದ್ದು, ನಿಜವಾಗಿ ಹೇಳಬೇಕೆಂದರೆ ನನಗೆ ಯಾವುದೇ ಅನುಮಾನಗಳಿಲ್ಲ. ನಾವು ಉತ್ತಮ ಪ್ರದರ್ಶನ ನೀಡಬಹುದೆಂದು ಆಶಿಸಿದ್ದೇನೆ. ಭಾರತ ಲೀಗ್ ಹಂತದ ಎಲ್ಲಾ ಪಂದ್ಯಗಳನ್ನು ಇಲ್ಲಿ ಆಡಿದೆ ಅವರಿಗೆ ಇಲ್ಲಿನ ಪರಿಸ್ಥಿತಿ ಬಗ್ಗೆ ಚೆನ್ನಾಗಿ ತಿಳಿದಿದೆ, ಇದು ಅವರಿಗೆ ಅನುಕೂಲವಾ ಎನ್ನುವ ಬಗ್ಗೆ ನನಗೆ ಗೊತ್ತಿಲ್ಲ ಎಂದರು.
ಪಿಚ್ ತುಂಬಾ ಒಣಗಿದೆ, ನಾನು ಮೈದಾನದ ಸಿಬ್ಬಂದಿ ಜೊತೆ ಮಾತನಾಡಿದ್ದೇನೆ. ಇಲ್ಲಿ ಈಗಾಗಲೇ ಹಲವು ಪಂದ್ಯಗಳು ನಡೆದಿವೆ. ಭಾರತ ಇಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಎರಡೂ ತಂಡಗಳ ನಡುವೆ ಉತ್ತಮ ಸ್ಪರ್ಧೆ ಇರಲಿದೆ, ನಾನು ಅದಕ್ಕಾಗಿ ಎದುರು ನೋಡುತ್ತಿದ್ದೇನೆ ಎಂದು ಹೇಳಿದರು.
ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ನಾಲ್ವರು ಸ್ಪಿನ್ನರ್ ಗಳೊಂದಿಗೆ ಕಣಕ್ಕಿಳಿದಿತ್ತು. ವರುಣ್ ಚಕ್ರವರ್ತಿ, ಕುಲದೀಪ್ ಯಾದವ್, ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಉತ್ತಮ ಪ್ರದರ್ಶನ ನೀಡುತ್ತಿದ್ದು, ದುಬೈ ಪಿಚ್‌ನಲ್ಲಿ ಎದುರಾಳಿಗಳಿಗೆ ಕಂಟಕವಾಗಲಿದ್ದಾರೆ. ಆಸ್ಟ್ರೇಲಿಯಾದ ಬ್ಯಾಟರ್ ಗಳು ಸ್ಪಿನ್ ವಿರುದ್ಧ ಉತ್ತಮ ಪ್ರದರ್ಶನ ನೀಡಬೇಕು ಎಂದು ಸ್ಮಿತ್ ಬಯಸಿದ್ದಾರೆ.
"ಪಿಚ್ ಸ್ಪಿನ್ನರ್ ಗಳಿಗೆ ಸಹಕಾರಿಯಾಗಲಿದೆ. ಟಾಸ್ ಗೆದ್ದರೆ ಮೊದಲು ಬ್ಯಾಟಿಂಗ್ ಮಾಡಬೇಕೆ ಅಥವಾ ಬೌಲಿಂಗ್ ಮಾಡಬೇಕೆ ಎನ್ನುವುದನ್ನು ನಿರ್ಧರಿಸಬೇಕು. ಮಧ್ಯಮ ಓವರ್ ಗಳಲ್ಲಿ ಸ್ಪಿನ್ನರ್ ವಿರುದ್ಧ ಉತ್ತಮವಾಗಿ ಆಡಿದರೆ ಗೆಲುವು ಸುಲಭವಾಗುತ್ತದೆ. ತನ್ವೀರ್ ಸಂಘ, ಮ್ಯಾಕ್ಸ್‌ವೆಲ್ ಕೂಡ ಉತ್ತಮವಾಗಿ ಸ್ಪಿನ್ ಬೌಲಿಂಗ್ ಮಾಡಬಲ್ಲರು, ಟ್ರಾವಿಸ್ ಹೆಡ್, ಮಾರ್ನಸ್ ಮತ್ತು ಕೂಪರ್ ಕಾನೊಲಿ ಕೂಡ ಬೌಲಿಂಗ್ ಮಾಡುತ್ತಾರೆ ಎಂದರು.












Click it and Unblock the Notifications