WTC Points Table: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪಿದ ದಕ್ಷಿಣ ಆಫ್ರಿಕಾ; ಭಾರತಕ್ಕೆ ಇರೋದು ಒಂದೇ ದಾರಿ
2025ರ ಜೂನ್ 11 ರಿಂದ ಆರಂಭವಾಗಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ದಕ್ಷಿಣ ಆಫ್ರಿಕಾ ಟಿಕೆಟ್ ಬುಕ್ ಮಾಡಿಕೊಂಡಿದೆ! ಸೆಂಚುರಿಯನ್‌ನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 2 ವಿಕೆಟ್‌ಗಳ ರೋಚಕ ಗೆಲುವು ಸಾಧಿಸುವ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಸ್ಥಾನ ಖಚಿತಪಡಿಸಿಕೊಂಡಿತು. ದಕ್ಷಿಣ ಆಫ್ರಿಕಾದ ಈ ಗೆಲುವಿನ ಜೊತೆಗೆ ಮೆಲ್ಬೋರ್ನ್‌ನಲ್ಲಿ ನಡೆಯುತ್ತಿರುವ ಭಾರತ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಪಂದ್ಯ ಮತ್ತಷ್ಟು ರೋಚಕತೆ ಪಡೆದುಕೊಂಡಿದೆ.
ದಕ್ಷಿಣ ಆಫ್ರಿಕಾ ಇದೇ ಮೊದಲ ಬಾರಿಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪಿ ಇತಿಹಾಸ ನಿರ್ಮಿಸಿತು. ಗೆಲ್ಲಲೇಬೇಕಿದ್ದ ಪಂದ್ಯದಲ್ಲಿ ಹೋರಾಟ ನೀಡಿದ ದಕ್ಷಿಣ ಆಫ್ರಿಕಾ ರೋಚಕ ಗೆಲುವು ತನ್ನದಾಗಿಸಿಕೊಂಡಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಗೆಲುವಿಗೆ 148 ರನ್‌ಗಳ ಅಗತ್ಯವಿದ್ದಾಗ 99 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡಿದ್ದ ದಕ್ಷಿಣ ಆಫ್ರಿಕಾಗೆ ಸೋಲಿನ ಭೀತಿ ಎದುರಾಗಿತ್ತು ಆದರೆ ಕಗಿಸೋ ರಬಾಡ ಮತ್ತು ಮಾರ್ಕೊ ಯಾನ್ಸೆನ್ 51 ರನ್‌ಗಳ ಅಜೇಯ ಜೊತೆಯಾಟದ ಮೂಲಕ ಪಂದ್ಯವನ್ನು ಗೆಲ್ಲಿಸಿಕೊಂಡರು.

ಕಗಿಸೋ ರಬಾಡ 26 ಎಸೆತಗಳಲ್ಲಿ ಅಜೇಯ 31 ರನ್ ಗಳಿಸಿ ಮಿಂಚಿದರೆ, ಮಾರ್ಕೋ ಯಾನ್ಸನ್ 24 ಎಸೆತಗಳಲ್ಲಿ ಅಜೇಯ 16 ರನ್ ಗಳಿಸಿ ವಿಕೆಟ್ ಬೀಳದಂತೆ ನೋಡಿಕೊಂಡರು. ಪಾಕಿಸ್ತಾನದ ಮೊಹಮ್ಮದ್ ಅಬ್ಬಾಸ್ ಎರಡನೇ ಇನ್ನಿಂಗ್ಸ್‌ನಲ್ಲಿ ಆರು ವಿಕೆಟ್ ಪಡೆದು ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದರೂ ಈ ರಬಾಡ-ಯಾನ್ಸೆನ್ ಜೋಡಿ ಪಾಕಿಸ್ತಾನದ ಗೆಲುವನ್ನು ಕಸಿದುಕೊಂಡಿತು.
ಭಾರತದ ಮುಂದಿನ ಹಾದಿ ಏನು?
ಪಾಕಿಸ್ತಾನದ ವಿರುದ್ಧದ ಗೆಲುವಿನ ಮೂಲಕ ದಕ್ಷಿಣ ಆಫ್ರಿಕಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ 66.670 ಪಿಸಿಟಿಯೊಂದಿಗೆ ಅಗ್ರಸ್ಥಾನದೊಂದಿಗೆ ಫೈನಲ್‌ಗೆ ಅರ್ಹತೆ ಪಡೆದಿದೆ. ಈವರೆಗೂ ಆಡಿರುವ 11 ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ 7 ಪಂದ್ಯಗಳನ್ನು ಗೆದ್ದಿದ್ದರೆ ಮೂರು ಪಂದ್ಯಗಳಲ್ಲಿ ಮಾತ್ರ ಸೋತಿದ್ದು ಒಂದು ಟೆಸ್ಟ ಡ್ರಾನಲ್ಲಿ ಅಂತ್ಯವಾಗಿದೆ.
ದಕ್ಷಿಣ ಆಫ್ರಿಕಾ ಫೈನಲ್‌ಗೆ ಅರ್ಹತೆ ಪಡೆಯುವ ಜೊತೆಗೆ ಭಾರತದ ಫೈನಲ್ ಹಾದಿ ಮತ್ತಷ್ಟು ಕಠಿಣವಾಗಿದೆ. ಈ ಸೈಕಲ್‌ನಲ್ಲಿ ಇನ್ನು ಎರಡು ಟೆಸ್ಟ್ ಪಂದ್ಯಗಳು ಮಾತ್ರ ಉಳಿದಿದ್ದು, ಎರಡರಲ್ಲೂ ಗೆದ್ದರೆ ಮಾತ್ರ ಫೈನಲ್‌ಗೆ ಅರ್ಹತೆ ಪಡೆಯಲಿದೆ. ಮೆಲ್ಬೋರ್ನ್ ಟೆಸ್ಟ್ ಈಗ ನಿರ್ಣಾಯಕವಾಗಿದ್ದು ಭಾರತ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
ಒಂದು ವೇಳೆ ಭಾರತ ಮೆಲ್ಬೋರ್ನ್ ಟೆಸ್ಟ್‌ನಲ್ಲಿ ಸೋತರೆ ಅಥವಾ ಡ್ರಾನಲ್ಲಿ ಅಂತ್ಯವಾದರೆ ಮುಂದಿನ ದಾರಿ ಮತ್ತಷ್ಟು ಕಠಿಣವಾಗಲಿದೆ. ಆಗ ಮುಂದಿನ ತಿಂಗಳು ನಡೆಯಲಿರುವ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ನಡುವಿನ ಟೆಸ್ಟ್ ಸರಣಿ ಫಲಿತಾಂಶ ಭಾರತದ ಫೈನಲ್ ಅವಕಾಶವನ್ನು ನಿರ್ಣಯಿಸಲಿದೆ.
ಭಾರತದ ಫೈನಲ್ ಲೆಕ್ಕಾಚಾರ
ಈಗ ನಡೆಯುತ್ತಿರುವ ಮೆಲ್ಬೋರ್ನ್ ಟೆಸ್ಟ್ ಮತ್ತು ಸಿಡ್ನಿ ಟೆಸ್ಟ್‌ಗಳನ್ನು ಗೆದ್ದರೆ ಭಾರತ ಯಾವ ತಂಡದ ಮೇಲೂ ಅವಲಂಬನೆಯಾಗದೆ ಫೈನಲ್ ಟಿಕೆಟ್ ಪಡೆಯಲಿದೆ.
ಒಂದು ವೇಳೆ ಭಾರತ ಈ ಪಂದ್ಯ ಸೋತು ಸಿಡ್ನಿ ಟೆಸ್ಟ್ ಗೆದ್ದರೆ, ಶ್ರೀಲಂಕಾ ಆಸ್ಟ್ರೇಲಿಯಾ ವಿರುದ್ಧ ಸೋಲಿಗೆ ಕಾಯಬೇಕಾಗುತ್ತದೆ. ಒಂದು ವೇಳೆ ಆಸ್ಟ್ರೇಲಿಯಾ ಶ್ರೀಲಂಕಾ ವಿರುದ್ಧ ಸರಣಿ ಗೆದ್ದರೆ ಭಾರತದ ಫೈನಲ್ ಕನಸು ಭಗ್ನವಾಗಲಿದೆ.
ಭಾರತ ಏನಾದರೂ ಮೆಲ್ಬೋರ್ನ್ ಟೆಸ್ಟ್ ಜೊತೆಗೆ ಸಿಡ್ನಿಯಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯದಲ್ಲಿ ಸೋತರೆ ಬಾರ್ಡರ್ ಗವಾಸ್ಕರ್ ಟ್ರೋಫಿ ಜೊತೆಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಅವಕಾಶ ಕೂಡ ಕೈತಪ್ಪಲಿದೆ.












Click it and Unblock the Notifications