Smriti Mandhana: ಸ್ಮೃತಿ ಮಂಧಾನ ಆರ್‌ಸಿಬಿ ತೊರೆದು ಎಲ್‌ಎಸ್‌ಜಿ ಸೇರಿದ್ರಾ? ಅಸಲಿ ಸತ್ಯ ಏನು?
Smriti Mandhana: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡದ ನಾಯಕಿ ಸ್ಮೃತಿ ಮಂಧಾನ ಅವರು ಇದೀಗ ಎಲ್‌ಎಸ್‌ಜಿ ರೀತಿಯದ್ದೇ ಜೆರ್ಸಿ ಧರಿಸಿ ಗಮನ ಸೆಳೆದಿದ್ದಾರೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಹಾಗಾದ್ರೆ ಇದರ ಹಿಂದಿನ ಅಸಲಿ ಸತ್ಯ ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಕಣ್ಣಾಡಿಸಿ.
ಆರ್‌ಸಿಬಿ ಮಹಿಳಾ ತಂಡವು ಕಳೆದ ಬಾರಿ ಸ್ಮೃತಿ ನಾಯಕತ್ವದಲ್ಲಿ ಡಬ್ಲ್ಯೂಪಿಎಲ್ ಟ್ರೋಫಿ ಎತ್ತಿಹಿಡಿತ್ತು. ಆದರೆ ಇದೀಗ ತಂಡದ ಸ್ಟಾರ್ ಆರಂಭಿಕ ಆಟಗಾರ್ತಿ ಮಂಧಾನ ಎಲ್‌ಎಸ್‌ಜಿ ತಂಡದ ಜೆರ್ಸಿ ಧರಿಸಿದ್ದು, ಈ ಫೋಟೋ ವೈರಲ್ ಆಗುತ್ತಿದ್ದಂತೆ ಅವರು ನಿಜ್ವಾಗ್ಲೂ ಲಕ್ನೋ ಸೇರಿದ್ರಾ ಎನ್ನುವ ಪ್ರಶ್ನೆಗಳು ಎದ್ದಿವೆ. ಆದರೆ ಡಬ್ಲ್ಯೂಪಿಎಲ್‌ನಲ್ಲಿ ಈ ತಂಡವೇ ಇಲ್ಲ.

ಡಬ್ಲ್ಯೂಪಿಎಲ್‌ನಲ್ಲಿರುವ ತಂಡಗಳು
ಡಬ್ಲ್ಯೂಪಿಎಲ್‌ನಲ್ಲಿ ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಜೈಂಟ್ಸ್, ಯುಪಿ ವಾರಿಯರ್ಸ್ ತಂಡಗಳು ಮಾತ್ರ ಇವೆ. ಲಕ್ನೋ ಸೂಪರ್ ಜೈಂಟ್ಸ್ ತಂಡ ಇರುವುದು ಐಪಿಎಲ್‌ನಲ್ಲಿ. ಹಾಗಾದ್ರೆ ಸ್ಮೃತಿ ಅವರು ಧರಿಸಿರುವ ಜೆರ್ಸಿ ಯಾವ ತಂಡದ್ದು ಎನ್ನುವ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ.
ಲಕ್ನೋ ಜೆರ್ಸಿಯಲ್ಲಿ ಕಾಣಿಸಿಕೊಂಡ ಆರ್‌ಸಿಬಿ ನಾಯಕಿ
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಹಾಗೂ ಆರ್‌ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ಅವರ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಐಪಿಎಲ್‌ನ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಹೋಲುವ ಜೆರ್ಸಿ ಧರಿಸಿ ಅವರು ಪೋಸ್ ನೀಡಿದ್ದು, ಇದನ್ನು ಕಂಡ ಅಭಿಮಾನಿಗಳು ಗೊಂದಲಕ್ಕೆ ಒಳಗಾಗಿದ್ದರು. ಆದರೆ ಈ ವೈರಲ್ ಫೋಟೋದ ಹಿಂದಿನ ನಿಜವಾದ ಕಥೆಯೇ ಬೇರೆಯೇ ಇದೆ.
ಅಸಲಿ ಸತ್ಯ ಏನು?
ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಲಕ್ನೋ ಫ್ರಾಂಚೈಸಿಯ ಯಾವುದೇ ತಂಡವಿಲ್ಲ. ವಾಸ್ತವದಲ್ಲಿ ಸ್ಮೃತಿ ಮಂಧಾನ ಧರಿಸಿರುವುದು ಲಕ್ನೋ ತಂಡದ ಜೆರ್ಸಿಯಲ್ಲ. ಇಂಗ್ಲೆಂಡ್‌ನಲ್ಲಿ ನಡೆಯುವ 'ದಿ ಹಂಡ್ರೆಡ್' ಟೂರ್ನಿಯಲ್ಲಿ ಅವರು 'ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್' ತಂಡದ ಪರವಾಗಿ ಕಣಕ್ಕಿಳಿಯುತ್ತಿದ್ದಾರೆ.
ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಎಸ್‌ಎ20 ಲೀಗ್‌ನಲ್ಲಿ 'ಡರ್ಬನ್ ಸೂಪರ್ ಜೈಂಟ್ಸ್' ತಂಡದ ಮಾಲೀಕತ್ವ ಹೊಂದಿರುವ ಸಂಜೀವ್ ಗೋಯೆಂಕಾ ನೇತೃತ್ವದ ಆರ್‌ಪಿಎಸ್‌ಜಿ ಗ್ರೂಪ್, ಮ್ಯಾಂಚೆಸ್ಟರ್ ಫ್ರಾಂಚೈಸಿಯ ಶೇಕಡಾ 70ರಷ್ಟು ಪಾಲನ್ನು ಖರೀದಿ ಮಾಡಿದೆ.
ಹಿಂದೆ ಮ್ಯಾಂಚೆಸ್ಟರ್ ಒರಿಜಿನಲ್ಸ್ ಹೆಸರಿನಲ್ಲಿದ್ದ ಈ ತಂಡ ಸಂಪೂರ್ಣವಾಗಿ ಲಂಕಾಷೈರ್ ಕ್ರಿಕೆಟ್ ಕ್ಲಬ್ ವಶದಲ್ಲಿತ್ತು. 2025ರ ಸೀಸನ್ ಬಳಿಕ ಆರ್‌ಪಿಎಸ್‌ಜಿ ಗ್ರೂಪ್ ಮುಖ್ಯ ಪಾಲುದಾರನಾಗಿ ಬಂದ ಹಿನ್ನೆಲೆಯಲ್ಲಿ ಈ ತಂಡದ ಜೆರ್ಸಿ ಹಾಗೂ ವಿನ್ಯಾಸವು ಲಕ್ನೋ ಸೂಪರ್ ಜೈಂಟ್ಸ್ ತಂಡದ ಶೈಲಿಯಲ್ಲೇ ರೂಪುಗೊಂಡಿದೆ.
ತಂಡದಲ್ಲಿ ಯಾರೆಲ್ಲಾ ಇದ್ದಾರೆ?
ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ತಂಡಕ್ಕೆ ಆಸ್ಟ್ರೇಲಿಯಾದ ದಂತಕಥೆ ಮೆಗ್ ಲ್ಯಾನಿಂಗ್ ನಾಯಕಿಯಾಗಿದ್ದು, ಭಾರತದ ಸ್ಮೃತಿ ಮಂಧಾನ ಮತ್ತು ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್ ಪ್ರಮುಖ ಆಟಗಾರ್ತಿಯರಾಗಿದ್ದಾರೆ. ಜೊತೆಗೆ ಸೋಫಿ ಎಕ್ಲೆಸ್ಟೋನ್, ಕ್ಯಾಥರಿನ್ ಬ್ರೇಸ್ ಹಾಗೂ ಪೇಜ್ ಸ್ಕೂಲ್‌ಫೀಲ್ಡ್ ಅವರಂತಹ ದಿಗ್ಗಜ ಆಟಗಾರ್ತಿಯರು ಕೂಡ ಈ ತಂಡದಲ್ಲಿದ್ದಾರೆ.
ಕೇವಲ ಆರ್‌ಪಿಎಸ್‌ಜಿ ಗ್ರೂಪ್ ಮಾತ್ರವಲ್ಲದೆ, ಐಪಿಎಲ್‌ನ ಇತರ ಪ್ರಮುಖ ಫ್ರಾಂಚೈಸಿಗಳೂ ಇಂಗ್ಲೆಂಡ್‌ನ ಈ ಹಂಡ್ರೆಡ್ ಟೂರ್ನಿಯಲ್ಲಿ ಹೂಡಿಕೆ ಮಾಡಿವೆ. ಮುಂಬೈ ಇಂಡಿಯನ್ಸ್ 'ಎಂಐ ಲಂಡನ್' ತಂಡದ ಮಾಲೀಕತ್ವ ವಹಿಸಿಕೊಂಡಿದೆ. ಸನ್‌ರೈಸರ್ಸ್ ಹೈದರಾಬಾದ್ 'ಸನ್‌ರೈಸರ್ಸ್ ಲೀಡ್ಸ್' ತಂಡವನ್ನು ತನ್ನದಾಗಿಸಿಕೊಂಡಿದೆ. ಈ ತಂಡದ ಪರ ಭಾರತದ ಆಲ್ರೌಂಡರ್ ದೀಪ್ತಿ ಶರ್ಮಾ ಅವರು ಆಡುತ್ತಿದ್ದಾರೆ. ಒಟ್ಟಿನಲ್ಲಿ ಬ್ರ್ಯಾಂಡ್ ಹಾಗೂ ಮಾಲೀಕರ ಶೈಲಿ ಒಂದೇ ಆಗಿರುವುದರಿಂದ ಸ್ಮೃತಿ ಮಂಧಾನ ಲಕ್ನೋ ಜೆರ್ಸಿಯಲ್ಲಿ ಕಾಣಿಸಿಕೊಂಡಂತೆ ಭಾಸವಾಗಿದೆಯೇ ಹೊರತು, ಅವರು ಆರ್‌ಸಿಬಿ ತಂಡವನ್ನು ತೊರೆದಿಲ್ಲ ಎಂಬುದು ಸ್ಪಷ್ಟವಾಗಿ ತಿಳಿದುಬಂದಿದೆ.


Click it and Unblock the Notifications
