Shubman Gill: ಆಸ್ಟ್ರೇಲಿಯಾ ವಿರುದ್ಧ ಪಂದ್ಯಕ್ಕೆ ಮುನ್ನವೇ ಭಾರತ ತಂಡಕ್ಕೆ ಆಘಾತ!
ಆಸ್ಟ್ರೇಲಿಯಾ ವಿರುದ್ಧದ ಏಕದಿನ ವಿಶ್ವಕಪ್ ಪಂದ್ಯಕ್ಕೆ ಮುನ್ನವೇ ಭಾರತ ತಂಡಕ್ಕೆ ಆಘಾತ ಎದುರಾಗಿದೆ. ಭಾರತ ತಂಡದ ಇನ್ ಫಾರ್ಮ್ ಬ್ಯಾಟರ್ ಶುಭಮನ್ ಗಿಲ್ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ.
ಶುಭಮನ್ ಗಿಲ್ ಡೆಂಗ್ಯೂ ಜ್ವರದಿಂದ ಬಳಲುತ್ತಿರುವುದು ದೃಢವಾಗಿದೆ. ಭಾನುವಾರ (ಅಕ್ಟೋಬರ್ 8) ಆಸ್ಟ್ರೇಲಿಯಾ ವಿರುದ್ಧದ ಭಾರತದ ಮೊದಲ ವಿಶ್ವಕಪ್ ಪಂದ್ಯದಲ್ಲಿ ಅವರು ಕಣಕ್ಕಿಳಿಯುವುದು ಅನುಮಾನವಾಗಿದೆ. ಭಾರತಕ್ಕೆ ಗಿಲ್ ಅನುಪಸ್ಥಿತಿ ಕಾಡುವುದು ಸ್ಪಷ್ಟವಾಗಿದೆ.

ದೈನಿಕ್ ಜಾಗರಣ್ ವರದಿ ಮಾಡಿರುವ, ಗುರುವಾರ ತರಬೇತಿ ಅವಧಿಯಲ್ಲಿ ಶುಭಮನ್ ಗಿಲ್ ಡೆಂಗ್ಯೂನಿಂದ ಬಳಲುತ್ತಿದ್ದರು. ಭಾರತವು ಶುಕ್ರವಾರ ಮತ್ತೊಂದು ತರಬೇತಿ ಅವಧಿಯನ್ನು ಹೊಂದಿದ್ದು, ಶುಭಮನ್ ಗಿಲ್ ಅಭ್ಯಾಸದಲ್ಲಿ ಭಾಗವಹಿಸುವುದಿಲ್ಲ.
ಆರಂಭಿಕರಾಗಿ ಇಶಾನ್ ಕಿಶನ್ ಕಣಕ್ಕೆ
ಶುಭಮನ್ ಗಿಲ್ ಮೊದಲ ಪಂದ್ಯದಿಂದ ಹೊರಗುಳಿದರೆ ಎಡಗೈ ಬ್ಯಾಟರ್ ಇಶಾನ್ ಕಿಶನ್ ನಾಯಕ ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಗಿಲ್ ಅನುಪಸ್ಥಿತಿಯಲ್ಲಿ ಇಶಾನ್ ಕಿಶನ್ ಅವರಿಗೆ ಆರಂಭಿಕರಾಗಿ ಆಡಲು ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಅವಕಾಶ ನೀಡುವ ಸಾಧ್ಯತೆ ಇದೆ.
ಕೆಎಲ್ ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ಅವರು 4ನೇ ಕ್ರಮಾಂಕದಲ್ಲಿ ಮುಂದುವರೆಯಲಿದ್ದಾರೆ. ಎಡಗೈ ಬ್ಯಾಟರ್ ಇಶಾನ್ ಕಿಶನ್ ಆರಂಭಿಕ ಆಟಗಾರನಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಆರಂಭಿಕನಾಗಿ ಕಣಕ್ಕಿಳಿದಾಗ 40 ಕ್ಕಿಂತ ಸರಾಸರಿ ಹೊಂದಿದ್ದಾರೆ.
ಕಠಿಣ ಅಭ್ಯಾಸ ಮಾಡುತ್ತಿರುವ ಭಾರತ ತಂಡ
ಭಾರತದ ಎರಡೂ ಅಭ್ಯಾಸ ಪಂದ್ಯಗಳು ಮಳೆಯಿಂದ ರದ್ದಾದ ನಂತರ ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕಾಗಿ ಭಾರತ ತಂಡ ಕಠಿಣ ಅಭ್ಯಾಸ ಮಾಡುತ್ತಿದೆ. ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ರೋಹಿತ್ ಶರ್ಮಾ ಕಠಿಣ ಅಭ್ಯಾಸ ಮಾಡುತ್ತಿದ್ದಾರೆ.
ಎರಡನೇ ಅಭ್ಯಾಸ ಪಂದ್ಯವನ್ನು ತಪ್ಪಿಸಿಕೊಂಡು ಮುಂಬೈಗೆ ತೆರಳಿದ್ದ ವಿರಾಟ್ ಕೊಹ್ಲಿ ನಿಗದಿಗಿಂತ ಹೆಚ್ಚಿನ ಸಮಯ ಬ್ಯಾಟಿಂಗ್ ಅಭ್ಯಾಸ ಮಾಡಿದ್ದು, ಆಸ್ಟ್ರೇಲಿಯಾ ವಿರುದ್ಧ ದೊಡ್ಡ ಮೊತ್ತ ಗಳಿಸುವ ವಿಶ್ವಾಸದಲ್ಲಿದ್ದಾರೆ.
ಅಕ್ಟೋಬರ್ 8ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಭಾರತ-ಆಸ್ಟ್ರೇಲಿಯಾ ಮುಖಾಮುಖಿಯಾಗಲಿವೆ. ಮಧ್ಯಾಹ್ನ 2 ಗಂಟೆಗೆ ಪಂದ್ಯ ಆರಂಭವಾಗಲಿದೆ. ಚೆನ್ನೈ ಪಿಚ್ ಸ್ಪಿನ್ನರ್ ಗಳಿಗೆ ನೆರವಾಗುವ ಸಾಧ್ಯತೆ ಇರುವುದರಿಂದ ಭಾರತ ಮೂವರು ಸ್ಪಿನ್ನರ್ ಗಳನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ.












Click it and Unblock the Notifications