Shubman Gill: 2023ರ ಐಪಿಎಲ್‌ನಲ್ಲಿ ಶುಭ್ಮನ್ ಗಿಲ್ ರನ್ ಭವಿಷ್ಯ ನುಡಿದ ಆರ್‌ಸಿಬಿ ಮಾಜಿ ಆಟಗಾರ
ಶುಕ್ರವಾರ, ಮಾರ್ಚ್ 31ರಂದು ಅಹಮದಾಬಾದ್‌ನಲ್ಲಿ ನಡೆದ 2023ರ ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್)ನ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಭರ್ಜರಿ ಗೆಲುವು ದಾಖಲಿಸಿ ಶುಭಾರಂಭ ಮಾಡಿದರು.
ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 178 ರನ್ ಗಳಿಸಿತು. ಆರಂಭಿಕ ಬ್ಯಾಟರ್ ರುತುರಾಜ್ ಗಾಯಕ್ವಾಡ್ 50 ಎಸೆತಗಳಲ್ಲಿ 92 ರನ್ ಬಾರಿಸಿ ತಂಡದ ಮೊತ್ತ 170ರ ಗಡಿ ದಾಟುವಲ್ಲಿ ನೆರವಾದರು. ಚೆನ್ನೈ ಸೂಪರ್ ಕಿಂಗ್ಸ್ ನೀಡಿದ್ದ 179 ರನ್‌ಗಳ ಗುರಿ ಬೆನ್ನಟ್ಟಿದ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡ 19.2 ಓವರ್‌ಗಳಲ್ಲಿ ಇನ್ನೂ 5 ವಿಕೆಟ್‌ಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು ಮತ್ತು ಪಂದ್ಯಾವಳಿಯ ಮೊದಲ ಜಯ ದಾಖಲಿಸಿತು.

ಗುಜರಾತ್ ಟೈಟನ್ಸ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಶುಭ್ಮನ್ ಗಿಲ್ ಟಿ20 ಲೀಗ್‌ನ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧ ಭರ್ಜರಿ ಅರ್ಧಶತಕ ಬಾರಿಸಿ ಐಪಿಎಲ್‌ನಲ್ಲಿಯೂ ತಮ್ಮ ಭಾರತ ತಂಡದ ಫಾರ್ಮ್ ಅನ್ನು ಮುಂದುವರೆಸಿದರು. ಶುಭ್ಮನ್ ಗಿಲ್ ಕೇವಲ 36 ಎಸೆತಗಳಲ್ಲಿ ತಲಾ 6 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ನೆರವಿನಿಂದ 63 ರನ್ ಗಳಿಸಿದರು.
ಎಂಎಸ್ ಧೋನಿ ನಾಯಕತ್ವದ ಸಿಎಸ್‌ಕೆ ತಂಡವನ್ನು ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ತಂಡ ಸೋಲಿಸುವ ಮುನ್ನ ಶುಭ್ಮನ್ ಗಿಲ್ ಅವರು 175ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ್ದು ಅತ್ಯುತ್ತಮವಾಗಿತ್ತು. ಇದೇ ವೇಳೆ ಭಾರತದ ಮಾಜಿ ವಿಕೆಟ್‌ಕೀಪರ್- ಬ್ಯಾಟರ್ ಪಾರ್ಥಿವ್ ಪಟೇಲ್ ಅವರು ಶುಭ್ಮನ್ ಗಿಲ್ ಬ್ಯಾಟಿಂಗ್ ಶೈಲಿಯನ್ನು ಶ್ಲಾಘಿಸಿದ್ದಲ್ಲದೇ, 2023ರ ಐಪಿಎಲ್ ಋತುವಿನಲ್ಲಿ ಶುಭ್ಮನ್ ಗಿಲ್ 600ಕ್ಕೂ ಹೆಚ್ಚು ರನ್ ಗಳಿಸಬಹುದು ಎಂದು ಭವಿಷ್ಯ ನುಡಿದಿದ್ದಾರೆ.

"ಗುಜರಾತ್ ಟೈಟನ್ಸ್ ತಂಡ ಗುರಿ ಬೆನ್ನಟ್ಟಿದ ರೀತಿಯನ್ನು ನೋಡಿದರೆ, ಮೊದಲ ಆರು ಓವರ್‌ಗಳನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲು ವೃದ್ಧಿಮಾನ್ ಸಹಾ ಅನುಮತಿ ಪಡೆದಿರುವುದನ್ನು ನಾವು ನೋಡಬಹುದು. ಈ ವಿಕೆಟ್‌ನಲ್ಲಿ ಗುರಿಯು ಸಮನಾಗಿರುತ್ತದೆ, ಆದ್ದರಿಂದ ಬಲವಾದ ಆರಂಭವು ಅತ್ಯಗತ್ಯ," ಎಂದು ಮಾಜಿ ಕ್ರಿಕೆಟಿಗ ಪಾರ್ಥಿವ್ ಪಟೇಲ್ ಜಿಯೋ ಸಿನಿಮಾಗೆ ತಿಳಿಸಿದರು.
"ಗುಜರಾತ್ ಟೈಟನ್ಸ್ ಮೊದಲ ಗೆಲುವು ಪಡೆದುಕೊಂಡು ಕಳೆದ ವರ್ಷದ ಆವೇಗವನ್ನು ಉಳಿಸಿಕೊಂಡಿದೆ ಎಂದು ನಾನು ಭಾವಿಸುತ್ತೇನೆ. ಶುಭ್ಮನ್ ಗಿಲ್ ತಮಗೆ ತಿಳಿದಿರುವುದನ್ನು ಮಾಡಿದ್ದಾರೆ ಮತ್ತು ಅವರ ಅಂತಾರಾಷ್ಟ್ರೀಯ ಫಾರ್ಮ್ ಅನ್ನು ಐಪಿಎಲ್‌ಗೂ ಸಾಗಿಸಿದ್ದಾರೆ. ಈ ಋತುವಿನಲ್ಲಿ ಶುಭ್ಮನ್ ಗಿಲ್ 600 ರನ್‌ಗಳನ್ನು ಗಳಿಸುವುದನ್ನು ನಾವು ನೋಡಬಹುದು," ಎಂದರು
ಇದೇ ವೇಳೆ, ಶುಭ್ಮನ್ ಗಿಲ್ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮತ್ತೊಬ್ಬ ಭಾರತೀಯ ದಿಗ್ಗಜ ಅನಿಲ್ ಕುಂಬ್ಳೆ ಕಣ್ಣಿಗೆ ಬಿದ್ದಿದ್ದು, ಶುಭ್ಮನ್ ಗಿಲ್ ಆಟವಾಡಿದ ರೀತಿ ಭಾರತೀಯ ಕ್ರಿಕೆಟ್‌ಗೆ ಉತ್ತಮ ಸಂಕೇತ ಎಂದು ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, 'ಕೊನೆಯಲ್ಲಿ ಗಿಲ್ ಔಟ್ ಆದ ರೀತಿ ನನಗೆ ಸಂತೋಷಪಡಿಸಲಿಲ್ಲ' ಎಂದು ಹೇಳಿದರು ಮತ್ತು ಮುಂದಿನ ಪಂದ್ಯದಲ್ಲಿ ಶುಭ್ಮನ್ ಗಿಲ್ ಇದೇ ರೀತಿ ಆಡಿದರೆ, ತಂಡಕ್ಕಾಗಿ ಪಂದ್ಯ ಗೆಲ್ಲಿಸಲು ಬಯಸುತ್ತೇನೆ ಎಂದರು.
"ಈ ರೀತಿಯ ಆಟ ಯುವ ಆಟಗಾರ ಶುಭ್ಮನ್ ಗಿಲ್‌ಗೆ ಉತ್ತಮ ಸಂಕೇತವಾಗಿದೆ. ಅವರು ಏಕದಿನ ಕ್ರಿಕೆಟ್‌ನಲ್ಲಿ ಹೇಗೆ40, 50 ರನ್‌ಗಳನ್ನು 100 ಮತ್ತು 200 ರನ್‌ಗಳವರೆಗೆ ಕೊಂಡೊಯ್ಯಬಹುದು ಎಂಬುದರ ಕುರಿತು ನಾವು ಪಂದ್ಯ ಪೂರ್ವ ಮಾತುಕತೆ ಚರ್ಚಿಸಿದ್ದೇವೆ. ಭಾರತೀಯ ಕ್ರಿಕೆಟ್ ಮತ್ತು ಶುಭ್ಮನ್ ಗಿಲ್ ಅಂತಹ ಆಟವನ್ನು ಪ್ರಾರಂಭಿಸಲು ಇದು ಉತ್ತಮ ಸೂಚನೆಯಾಗುತ್ತದೆ ಎಂದು ನನಗೆ ಖಾತ್ರಿಯಿದೆ," ಎಂದು ಮಾಜಿ ಸ್ಪಿನ್ನರ್ ಸನಿಲ್ ಕುಂಬ್ಳೆ ತಿಳಿಸಿದರು.












Click it and Unblock the Notifications