Shreyanka Patil: ಮನಸ್ಸು ಮುರಿದಿದೆ ಎಂದ ಶ್ರೇಯಾಂಕಾ ಪಾಟೀಲ್
ಮಹಿಳಾ ಪ್ರೀಮಿಯರ್ ಲೀಗ್ 2025ರ ಆವೃತ್ತಿಗೆ ಇಂದಿನಿಂದ ಚಾಲನೆ ಸಿಕ್ಕಿದೆ. ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗುಜರಾತ್ ಜೈಂಟ್ಸ್ ಮುಖಾಮುಖಿಯಾಗಿವೆ. ಹಾಲಿ ಚಾಂಪಿಯನ್ ಆಗಿರುವ ಆರ್ ಸಿಬಿ ತಂಡದಲ್ಲಿ ಮೊದಲ ಪಂದ್ಯದಲ್ಲೇ ಕಳೆದ ಬಾರಿಗಿಂತ ಹಲವು ಬದಲಾವಣೆ ಮಾಡಲಾಗಿದೆ.
ಸೋಫಿ ಡಿವೈನ್ ಕ್ರಿಕೆಟ್‌ನಿಂದ ಬ್ರೇಕ್ ತೆಗೆದುಕೊಂಡಿದ್ದರೆ, ಆಶಾ ಶೋಭನಾ ಕೊನೆಯ ಕ್ಷಣದಲ್ಲಿ ಗಾಯದ ಕಾರಣದಿಂದ ಹೊರಗುಳಿದಿದ್ದಾರೆ. 2024ರ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಹೆಚ್ಚು ವಿಕೆಟ್ ಗಳಿಸಿ ಪರ್ಪಲ್ ಕ್ಯಾಪ್ ಪಡೆದಿದ್ದ ಶ್ರೇಯಾಂಕಾ ಪಾಟೀಲ್ ಮೊದಲ ಪಂದ್ಯದಿಂದ ಹೊರಗುಳಿದಿದ್ದಾರೆ.

ಶ್ರೇಯಾಂಕಾ ಪಾಟೀಲ್ ಮೊದಲ ಪಂದ್ಯದಿಂದ ಹೊರಗುಳಿದಿದ್ದು, ಅವರು ಮತ್ತಷ್ಟು ಪಂದ್ಯಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಶ್ರೇಯಾಂಕಾ ಗಾಯದಿಂದ ಬಳಲುತ್ತಿದ್ದು ಅವರು ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ.
ಮನಸ್ಸು ಮುರಿದಿದೆ ಎಂದ ಶ್ರೇಯಾಂಕಾ
ಮೊದಲ ಪಂದ್ಯದಲ್ಲಿ ಹೊರಗುಳಿದ ಬೆನ್ನಲ್ಲೇ ಶ್ರೇಯಾಂಕಾ ಪಾಟೀಲ್ ಟ್ವೀಟ್ ಮಾಡಿದ್ದು, ಮನಸ್ಸು ಮುರಿದಿದೆ ಆದರೆ ಮತ್ತೆ ಹಾರುತ್ತೇನೆ ಎಂದು ಹೇಳಿದ್ದು ಉಯ್ಯಾಲೆಯಲ್ಲಿ ಕುಳಿತಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ.
ಶ್ರೇಯಾಂಕಾ ಪಾಟೀಲ್ ಅವರ ಪೋಸ್ಟ್‌ಗೆ ಅಭಿಮಾನಿಗಳು ಕಮೆಂಟ್ ಮಾಡಿದ್ದು ಬೇಗನೆ ಹುಷಾರಾಗಿ ಎಂದು ಹಾರೈಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಕೂಡ ಇದೇ ಫೋಟೊ ಹಂಚಿಕೊಂಡಿದ್ದು, 1.5 ಲಕ್ಷ ಲೈಕ್ಸ್ ಪಡೆದುಕೊಂಡಿದೆ. ಇನ್‌ಸ್ಟಾಗ್ರಾಂನಲ್ಲೂ ನೂರಾರು ಅಭಿಮಾನಿಗಳು ಕಾಮೆಂಟ್ ಮಾಡಿದ್ದು ಬೇಗ ಗುಣಮುಖರಾಗಿ ಎಂದು ಹಾರೈಸಿದ್ದಾರೆ.
ವರದಿಯ ಪ್ರಕಾರ ಶ್ರೇಯಾಂಕಾ ಪಾಟೀಲ್ ಮಹಿಳಾ ಪ್ರೀಮಿಯರ್ ಲೀಗ್ 2025ರ ಆವೃತ್ತಿಯಿಂದಲೇ ಹೊರಬಿದ್ದಿದ್ದಾರೆ. ಮೊಣಕಾಲು ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ಟೂರ್ನಿಯಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದಾರೆ. ಶ್ರೇಯಾಂಕಾ ಬದಲಾಗಿ ಸ್ನೇಹ್ ರಾಣಾ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.
ದಾಖಲೆಯ ಗೆಲುವು ಸಾಧಿಸಿದ ಆರ್ ಸಿಬಿ
ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಕೂಡ ಆರ್ ಸಿಬಿ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಗುಜರಾತ್ ಜೈಂಟ್ಸ್ ನೀಡಿದ 202 ರನ್‌ಗಳ ಬೃಹತ್ ಗುರಿಯನ್ನು ಇನ್ನೂ 9 ಎಸೆತಗಳು ಬಾಕಿ ಇರುವಂತೆಯೇ ಬೆನ್ನಟ್ಟುವ ಮೂಲಕ ಭರ್ಜರಿ ಗೆಲುವಿನ ಮೂಲಕ ಶುಭಾರಂಭ ಮಾಡಿದೆ. ಈ ಮೂಲಕ ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ 200ಕ್ಕಿಂತ ಹೆಚ್ಚು ರನ್ ಚೇಸ್ ಮಾಡಿದ ಮೊದಲ ತಂಡ ಎನಿಸಿಕೊಂಡಿದೆ.
ಎಲ್ಲಿಸ್ ಪೆರ್‍ರಿ ಭರ್ಜರಿ ಅರ್ಧಶತಕ ಸಿಡಿಸಿ ತಂಡಕ್ಕೆ ನೆರವಾದರೆ ಕನಿಕಾ ಅಹುಜಾ ಮತ್ತು ರಿಚಾ ಘೋಷ್ ಸ್ಫೋಟಕ ಬ್ಯಾಟಿಂಗ್ ಮಾಡುವ ಮೂಲಕ ಆರ್ ಸಿಬಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಆರ್ ಸಿಬಿ ಪ್ಲೇಯಿಂಗ್ ಇಲೆವೆನ್
ಸ್ಮೃತಿ ಮಂಧಾನ (ನಾಯಕಿ), ಡೇನಿಯಲ್ ವ್ಯಾಟ್-ಹಾಡ್ಜ್, ಎಲ್ಲಿಸ್ ಪೆರ್ರಿ, ರಾಘ್ವಿ ಬಿಸ್ಟ್, ರಿಚಾ ಘೋಷ್ (ವಿಕೆಟ್ ಕೀಪರ್), ಕನಿಕಾ ಅಹುಜಾ, ಜಾರ್ಜಿಯಾ ವೇರ್ಹಮ್, ಕಿಮ್ ಗಾರ್ತ್, ಪ್ರೇಮಾ ರಾವತ್, ಜೋಶಿತಾ ವಿ ಜೆ, ರೇಣುಕಾ ಠಾಕೂರ್ ಸಿಂಗ್.












Click it and Unblock the Notifications