ಪಾಕ್ ವಿರುದ್ಧ ಭಾರತ ಗೆಲುವಿಗೆ ಕಾರಣರಾದ ಆರ್‌ಸಿಬಿ ಟಗರುಪುಟ್ಟಿ, ಕನ್ನಡತಿ ಶ್ರೇಯಾಂಕಾ ಪಾಟೀಲ್
Shreyanka Patil: ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ಭಾನುವಾರ (ಜೂನ್ 15) ನಡೆದ ಐಸಿಸಿ ಮಹಿಳಾ ಟಿ20 ವಿಶ್ವಕಪ್ 2026ರ ಲೀಗ್ ಪಂದ್ಯದಲ್ಲಿ ಪಾಕ್ ವಿರುದ್ಧ ಟೀಮ್ ಇಂಡಿಯಾ ರೋಚಕ ಜಯ ಸಾಧಿಸಿತು. ಪಾಕಿಸ್ತಾನ ವಿರುದ್ಧದ ಈ ಹೈ-ವೋಲ್ಟೇಜ್ ಸಮರದಲ್ಲಿ ಭಾರತ ತಂಡ ಕೇವಲ ಬ್ಯಾಟಿಂಗ್‌ನಲ್ಲಿ ಮಾತ್ರವಲ್ಲದೆ, ಫೀಲ್ಡಿಂಗ್‌ನಲ್ಲೂ ಚಾಣಾಕ್ಷತನ ಮೆರೆದಿದೆ. ಇದಕ್ಕೆ ಕನ್ನಡತಿ ಶ್ರೇಯಾಂಕಾ ಪಾಟೀಲ್ ಪಕ್ಷಿಯಂತೆ ಜಿಗಿದು ಹಿಡಿದ ಅದ್ಭುತ ಕ್ಯಾಚ್ ಪ್ರಮುಖ ಸಾಕ್ಷಿಯಾಗಿದೆ. ಈಗ ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.
ಭಾರತ ನೀಡಿದ್ದ 171 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನ ತಂಡಕ್ಕೆ ಭಾರತೀಯ ಬೌಲರ್‌ಗಳು ಆರಂಭದಲ್ಲೇ ಕಡಿವಾಣ ಹಾಕಿದ್ದರು. ಪಾಕಿಸ್ತಾನದ ರಮೀನಾ ಶಾಮಿಮ್ ಪಾಯಿಂಟ್ ಕ್ಷೇತ್ರದಲ್ಲಿ ಗ್ಯಾಪ್‌ನಲ್ಲಿ ಬಿಗ್ ಶಾಟ್ ಮಾಡಲು ಹೋದರು. ಆದರೆ ಅದೇ ಜಾಗದಲ್ಲಿದ್ದ ಶ್ರೇಯಾಂಕಾ ಪಾಟೀಲ್ ಅದ್ಭುತ ಫೀಲ್ಡಿಂಗ್ ಮಾಡಿ ಕ್ಯಾಚ್ ಹಿಡಿದು ರಮೀನಾ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಈ ಮೂಲಕ ಶ್ರೇಯಾಂಕಾ ಪಂದ್ಯದ ಚಿತ್ರಣವನ್ನೇ ಬದಲಿಸಿದರು.

ರಮೀನಾ ಶಾಮಿಮ್‌ಗೆ ಶಾಕ್ ಕೊಟ್ಟ ಕನ್ನಡತಿ
ಶ್ರೀ ಚರಣಿ ಎಸೆದ ಎಸೆತವನ್ನು ಪಾಕ್ ಬ್ಯಾಟರ್ ರಮೀನಾ ಶಾಮಿಮ್ ಮಿಡ್-ವಿಕೆಟ್ ವಲಯದಲ್ಲಿ ಬೌಂಡರಿಗಟ್ಟಲು ಯತ್ನಿಸಿದರು. ಆದರೆ ಅಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಫ್-ಸ್ಪಿನ್ನರ್ ಹಾಗೂ ಅದ್ಭುತ ಫೀಲ್ಡರ್ ಶ್ರೇಯಾಂಕಾ ಪಾಟೀಲ್ ಗಾಳಿಯಲ್ಲಿ ಹಕ್ಕಿಯಂತೆ ಜಿಗಿದು ಚೆಂಡನ್ನು ತಮ್ಮ ಕೈಗಳೊಳಗೆ ಲಾಕ್ ಮಾಡಿಕೊಂಡರು. ಈ ಅದ್ಭುತ ಫೀಲ್ಡಿಂಗ್ ವೀಕ್ಷಕರು ಹಾಗೂ ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳನ್ನು ಅಚ್ಚರಿಗೊಳಿಸಿತು.
ಬೌಲರ್ ಶ್ರೀ ಚರಣಿಗೆ ಮೂರನೇ ವಿಕೆಟ್ ಸಂಭ್ರಮ
ಶ್ರೇಯಾಂಕಾ ಪಾಟೀಲ್ ಹಿಡಿದ ಈ ಸೂಪರ್ ಕ್ಯಾಚ್‌ನಿಂದಾಗಿ ಶ್ರೀ ಚರಣಿ ಪಂದ್ಯದಲ್ಲಿ ತಮ್ಮ ಮೂರನೇ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ವಿಶ್ವಕಪ್‌ನಂತಹ ದೊಡ್ಡ ವೇದಿಕೆಯಲ್ಲಿ ಸಿಕ್ಕ ಈ ಯಶಸ್ಸು ಶ್ರೀ ಚರಣಿ ಅವರ ಆತ್ಮವಿಶ್ವಾಸವನ್ನು ದುಪ್ಪಟ್ಟುಗೊಳಿಸಿತು. ಹಿರಿಯ ಆಟಗಾರ್ತಿಯರ ಅನುಪಸ್ಥಿತಿಯ ಯುವ ಬೌಲರ್ ಮತ್ತು ಫೀಲ್ಡರ್ ತೋರಿದ ಈ ಅದ್ಭುತ ಹೊಂದಾಣಿಕೆಯು ಭಾರತೀಯ ಮಹಿಳಾ ಕ್ರಿಕೆಟ್‌ನ ಉಜ್ವಲ ಭವಿಷ್ಯಕ್ಕೆ ಕನ್ನಡಿ ಹಿಡಿದಿದೆ.
ಸಾಮಾಜಿಕ ಜಾಲತಾಣದಲ್ಲಿ ಶ್ರೇಯಾಂಕಾ ಕ್ಯಾಚ್ ವೈರಲ್
ಶ್ರೇಯಾಂಕಾ ಅವರು ಹಿಡಿದ ಈ ಅದ್ಭುತ ಕ್ಯಾಚ್ ಅನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಸೇರಿದಂತೆ ವಿಶ್ವದ ಹಲವು ಕ್ರಿಕೆಟ್ ದಿಗ್ಗಜರು ಕೊಂಡಾಡಿದ್ದಾರೆ. 'ಮೈದಾನದಲ್ಲಿ ಮೂಡಿಬಂದ ಮತ್ತೊಂದು ಅದ್ಭುತ ಸಾಹಸ,' ಎಂದು ಬರೆದುಕೊಂಡು ಈ ಫೀಲ್ಡಿಂಗ್ ವಿಡಿಯೋವನ್ನು ಟ್ವಿಟರ್ ತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಮಹಿಳಾ ಕ್ರಿಕೆಟ್‌ನ ಫೀಲ್ಡಿಂಗ್ ಗುಣಮಟ್ಟವು ಪುರುಷರ ಕ್ರಿಕೆಟ್‌ಗೆ ಸರಿಸಮನಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುತ್ತಿರುವುದಕ್ಕೆ ಈ ಕ್ಯಾಚ್ ಅತ್ಯುತ್ತಮ ಸಾಕ್ಷಿಯಾಗಿದೆ ಎಂದು ಅಭಿಮಾನಿಗಳು ಪ್ರಶಂಸಿಸುತ್ತಿದ್ದಾರೆ.
ಪಂದ್ಯದ ಗತಿಯನ್ನು ಬದಲಿಸಿದ ಕ್ಷಣ
ಪಾಕಿಸ್ತಾನ ತಂಡವು ಚೇಸಿಂಗ್ ವೇಳೆ ಒಂದು ಹಂತದಲ್ಲಿ ಮರಳಿ ಪಂದ್ಯಕ್ಕೆ ಬರುವ ಮುನ್ಸೂಚನೆ ನೀಡಿತ್ತು. ಆದರೆ ಶ್ರೀ ಚರಣಿ ಅವರ ವಿಕೆಟ್ ಟೇಕಿಂಗ್ ಸಾಮರ್ಥ್ಯ ಮತ್ತು ಶ್ರೇಯಾಂಕಾ ಅವರ ಆಶ್ಚರ್ಯಕರ ಕ್ಯಾಚ್ ಎದುರಾಳಿಗಳ ಆಸೆಗೆ ತಣ್ಣೀರೆರಚಿತು. ಈ ವಿಕೆಟ್ ಪತನದ ಬೆನ್ನಲ್ಲೇ ಪಾಕ್ ಬ್ಯಾಟಿಂಗ್ ಕ್ರಮಾಂಕ ಸಂಪೂರ್ಣವಾಗಿ ಕುಸಿತ ಕಂಡಿತು. ಒಟ್ಟಾರೆಯಾಗಿ ಹೇಳುವುದಾದರೆ ಬ್ಯಾಟಿಂಗ್‌ನಲ್ಲಿ ಉಪನಾಯಕಿ ಸ್ಮೃತಿ ಮಂಧಾನ (68), ನಾಯಕಿ ಹರ್ಮನ್‌ಪ್ರೀತ್ ಕೌರ್ (36) ಮತ್ತು ರಿಚಾ ಘೋಷ್ (34) ಅಬ್ಬರಿಸಿದರೆ, ಬೌಲಿಂಗ್‌ನಲ್ಲಿ 5 ವಿಕೆಟ್ ಪಡೆದ ದೀಪ್ತಿ ಶರ್ಮಾ ಹಾಗೂ ಯುವ ಬೌಲರ್ ಶ್ರೀ ಚರಣಿ ವಿಕೆಟ್ ಪಡೆದು ಮಿಂಚಿದರು. ಫೀಲ್ಡಿಂಗ್‌ನಲ್ಲಿ ಕನ್ನಡತಿ ಶ್ರೇಯಾಂಕಾ ಪಾಟೀಲ್ ಅವರ ಅದ್ಭುತ ಪ್ರದರ್ಶನದ ನೆರವಿನಿಂದ ಭಾರತ ತಂಡ ಪಾಕಿಸ್ತಾನ ವಿರುದ್ಧ 64 ರನ್‌ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿ ವಿಶ್ವಕಪ್ ಅಭಿಯಾನವನ್ನು ಅದ್ಧೂರಿಯಾಗಿ ಆರಂಭಿಸಿದೆ.












Click it and Unblock the Notifications