Virat Kohli: ವಿರಾಟ್ ಕೊಹ್ಲಿಗೆ ಬಾಬರ್ ಆಜಂ ಹೋಲಿಕೆ: ಲೈವ್‌ನಲ್ಲೇ ಕಿಡಿಕಾರಿದ ಶೋಯೆಬ್ ಅಖ್ತರ್
ಭಾನುವಾರ ನಡದ ಚಾಂಪಿಯನ್ಸ್ ಟ್ರೋಫಿ 2025ರ ಪಂದ್ಯಾವಳಿಯಲ್ಲಿ ಭಾರತ ಪಾಕಿಸ್ತಾನದ ವಿರುದ್ಧ 6 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ.ಈ ಗೆಲುವಿನ ಮೂಲಕ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಳ್ಳುವ ಜೊತೆಗೆ ಪಾಕಿಸ್ತಾನವನ್ನು ಟೂರ್ನಿಯಿಂದಲೇ ಹೊರದಬ್ಬಿದೆ. ಭಾರತದ ವಿರುದ್ಧ ಸೋತ ಬಳಿಕ ಪಾಕಿಸ್ತಾನ ಆಟಗಾರರ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
ಪಾಕಿಸ್ತಾನ್ ಮಾಜಿ ಆಟಗಾರ, ವೇಗದ ಬೌಲರ್ ಶೋಯೆಬ್ ಅಖ್ತರ್, ಪಾಕಿಸ್ತಾನ ತಂಡವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಲೈವ್ ನಲ್ಲೇ ಬಾಬರ್ ಆಜಂರನ್ನು ವಿರಾಟ್ ಕೊಹ್ಲಿ ಜೊತೆ ಹೋಲಿಕೆ ಮಾಡಿದ್ದಕ್ಕೆ ಸಿಟ್ಟಾದ ಶೋಯೆಬ್ ಅಖ್ತರ್ ಹಿಗ್ಗಾ ಮಗ್ಗಾ ಜಾಡಿಸಿದ್ದಾರೆ.

ಪಾಕಿಸ್ತಾನ ಪ್ರತಿಭಾನ್ವಿತ ತಂಡ ಎಂದು ಹೇಳಲಾಗುತ್ತದೆ ಆದರೆ ಪ್ರತಿಭಾನ್ವಿತ ಆಟಗಾರರು ರನ್ ಗಳಿಸುತ್ತಾರೆ ಮತ್ತು ವಿಕೆಟ್ ಪಡೆಯುತ್ತಾರೆ. ಇವರು ಏನನ್ನೂ ಮಾಡಲಿಲ್ಲ, ತಂಡದಲ್ಲಿ ಯಾವುದೇ ಪ್ರತಿಭೆಯನ್ನು ನಾನು ನೋಡಲಿಲ್ಲ ಎಂದ ಅವರು ಆಟಗಾರರ ಸಾಮರ್ಥ್ಯ ಮತ್ತು ಕೌಶಲ್ಯವನ್ನು ಪ್ರಶ್ನಿಸಿದರು.
ವಿರಾಟ್‌ಗೆ ಹೋಲಿಕೆ ಮಾಡಬೇಡಿ
"ನೀವು ವಿರಾಟ್ ಕೊಹ್ಲಿ ಅವರಿಗೆ ಬಾಬರ್ ಆಜಂರನ್ನು ಹೋಲಿಕೆ ಮಾಡ್ತೀರಾ? ಖುಷ್ದಿಲ್ ಶಾ ರನ್ನು ಶ್ರೇಯಸ್ ಅಯ್ಯರ್ ಗೆ ಹೋಲಿಕೆ ಮಾಡ್ತೀರಾ? ನಿಮ್ಮ ಮೊಹಮ್ಮದ್ ರಿಜ್ವಾನ್‌ರನ್ನು ರೋಹಿತ್ ಶರ್ಮಾ ಅವರ ಜೊತೆ ಹೋಲಿಕೆ ಮಾಡ್ತೀರಾ? ಕಳೆದ ಹತ್ತು ವರ್ಷಗಳಿಂದ ಈ ತಂಡವನ್ನು ಪ್ರತಿಭಾನ್ವಿತ ತಂಡ ಎಂದು ಹೇಳುತ್ತಾರೆ ಆದರೆ ಪ್ರತಿಭೆ ಎಲ್ಲಿದೆ? ಬರೀ ಮಾತನಾಡಿದ್ರೆ, ಹೋಲಿಕೆ ಮಾಡಿದ್ರೆ ಸಾಕಾ, ರನ್ ಗಳಿಸುವ ಮತ್ತು ವಿಕೆಟ್ ತೆಗೆದುಕೊಳ್ಳುವ ಮೂಲಕ ಸ್ಟಾರ್ ಆಗಬೇಕಲ್ವ? ನನಗಂತೂ ಪಾಕಿಸ್ತಾನ ತಂಡದಲ್ಲಿ ಯಾವುದೇ ಪ್ರತಿಭೆ ಕಾಣಿಸುತ್ತಿಲ್ಲ" ಎಂದು ಹೇಳಿದ್ದಾರೆ.
ಭಾರತೀಯ ಆಟಗಾರರ ಜೊತೆ ಪಾಕಿಸ್ತಾನ ಆಟಗಾರರನ್ನು ಹೋಲಿಕೆ ಮಾಡುವುದು ಅಸಾಧ್ಯ ಎಂದಿರುವ ಶೋಯೆಬ್ ಅಖ್ತರ್, ಪಾಕಿಸ್ತಾನ ಸಂಪೂರ್ಣವಾಗಿ ನಿರಾಶಾದಾಯಕ ಪ್ರದರ್ಶನ ನೀಡಿದೆ. ಇದೇನು ಮೊದಲ ಬಾರಿ ಆಗುತ್ತಿಲ್ಲವಾದ ಕಾರಣ ನಾವು ಆಶ್ಚರ್ಯಪರಬಾರದು. ಅವರಿಗೆ ಏನು ಹೇಳಬೇಕೋ ನನಗೆ ತಿಳಿಯುತ್ತಿಲ್ಲ ಎಂದು ಹೇಳಿದರು.
ಮೊಹಮ್ಮದ್ ರಿಜ್ವಾನ್ ನಾಯಕತ್ವದ ಬಗ್ಗೆ ಕೂಡ ಟೀಕೆ ವ್ಯಕ್ತಪಡಿಸಿದ್ದು, ಅದು ತಲೆ ಇಲ್ಲದ ನಾಯಕತ್ವ, ಇಂತಹ ತಂಡದ ಬಗ್ಗೆ ಮಾತನಾಡಲು ಏನೂ ಇಲ್ಲ. ಅವರಿಗೆ ಆಟದ ಬಗ್ಗೆ ಜ್ಞಾನವೇ ಇಲ್ಲ ಎಂದಿದ್ದಾರೆ.












Click it and Unblock the Notifications