Shikhar Dhawan: ನಿವೃತ್ತಿ ಘೋಷಿಸಿದ ಭಾರತ ಕ್ರಿಕೆಟ್ ತಂಡದ ಗಬ್ಬರ್ ಶಿಖರ್ ಧವನ್; ಐಪಿಎಲ್‌ನಲ್ಲಿ ಆಡುತ್ತಾರ?
ಭಾರತ ಕ್ರಿಕೆಟ್ ತಂಡದ ಗಬ್ಬರ್ ಎಂದೇ ಹೆಸರಾಗಿರುವ ಶಿಖರ್ ಧವನ್ ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. 2022ರಲ್ಲಿ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಲ್ಲಿ ಶಿಖರ್ ಧವನ್ ಕೊನೆಯದಾಗಿ ಭಾರತ ತಂಡಕ್ಕಾಗಿ ಆಡಿದ್ದರು. ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್‌ನಲ್ಲಿ ಆಡುವ ಇಚ್ಛೆ ಹೊಂದಿದ್ದರು, ತಂಡಕ್ಕೆ ಆಯ್ಕೆ ಮಾಡಿರಲಿಲ್ಲ. ಐಪಿಎಲ್‌ನಲ್ಲಿ ಮಾತ್ರ ಆಡುತ್ತಿದ್ದ ಶಿಖರ್ ಧವನ್ ಶನಿವಾರ ಸುದೀರ್ಘ ವಿಡಿಯೋ ಹಂಚಿಕೊಂಡಿದ್ದು, ನಿವೃತ್ತಿ ಘೋಷಣೆ ಮಾಡಿದ್ದಾರೆ. ತನಗೆ ಬೆಂಬಲ ನೀಡಿದ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ವೃತ್ತಿ ಜೀವನದ ಆರಂಭದಿಂದ ಇದುವರೆಗೂ ಅಪಾರ ಬೆಂಬಲ ಮತ್ತು ಪ್ರೀತಿ ಕೊಟ್ಟ ಅಭಿಮಾನಿಗಳಿಗೆ ವಿಶೇಷವಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ. 38 ವರ್ಷದ ಆಟಗಾರ, ಏಕದಿನ ಮಾದರಿಯಲ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ.

ಅಭಿಮಾನಿಗಳಿಗೆ ಹೇಳಿದ್ದೇನು?
ಹಂಚಿಕೊಂಡಿರುವ ವಿಡಿಯೋದಲ್ಲಿ ಮಾತನಾಡಿರುವ ಅವರು, "ಭಾರತಕ್ಕಾಗಿ ಆಡಬೇಕು ಎನ್ನುವ ಗುರಿಯನ್ನು ಇಟ್ಟುಕೊಂಡಿದ್ದೆ ನಾನು ಅದನ್ನು ಸಾಧಿಸಿದೆ. ಇದನ್ನು ಸಾಧ್ಯವಾಗಿಸಿದ್ದಕ್ಕೆ ಬಹಳಷ್ಟು ಜನರಿಗೆ ಧನ್ಯವಾದ ತಿಳಿಸುತ್ತೇನೆ. ನನ್ನ ಕುಟುಂಬ, ಬಾಲ್ಯದ ಕೋಚ್ ತಾರಕ್ ಸಿನ್ಹಾ ಮತ್ತು ಮದನ್ ಶರ್ಮಾ ಅವರ ಮಾರ್ಗದರ್ಶನ ನನಗೆ ಸಹಾಯ ಮಾಡಿದೆ. ಭಾರತ ತಂಡ ನನಗೆ ಮತ್ತೊಂದು ಕುಟುಂಬವಿದ್ದಂತೆ, ಅದು ನನಗೆ ಸಾಕಷ್ಟು ಬೆಂಬಲ ಕೊಟ್ಟಿದೆ. ಕಥೆಯಲ್ಲಿ ಮುಂದೆ ಸಾಗಲು ಪುಟಗಳನ್ನು ತಿರುವಿ ಹಾಕಬೇಕು. ನಾನು ಕೂಡ ಅದನ್ನೇ ಮಾಡುತ್ತಿದ್ದೇನೆ. ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಿದ್ದೇನೆ" ಎಂದು ಹೇಳಿದ್ದಾರೆ.
"ನನ್ನ ದೇಶಕ್ಕಾಗಿ ಸಾಕಷ್ಟು ಕ್ರಿಕೆಟ್ ಆಡಿದ್ದೇನೆ ಎನ್ನುವ ತೃಪ್ತಿ ಇದೆ. ಈ ಅವಕಾಶ ನೀಡಿದ್ದಕ್ಕಾಗಿ ಬಿಸಿಸಿಐ, ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ಮತ್ತು ಪ್ರೀತಿ ಮತ್ತು ಬೆಂಬಲ ನೀಡಿದ್ದಕ್ಕಾಗಿ ನನ್ನ ಎಲ್ಲಾ ಅಭಿಮಾನಿಗಳಿಗೆ ನಾನು ಕೃತಜ್ಞನಾಗಿದ್ದೇನೆ. ಮತ್ತೆ ದೇಶಕ್ಕಾಗಿ ಆಡುವುದಿಲ್ಲ ಎಂದು ದುಃಖಿಸಬೇಡಿ, ದೇಶಕ್ಕಾಗಿ ಆಡಿದ್ದಕ್ಕೆ ಯಾವಾಗಲೂ ನನಗೆ ಸಂತೋಷವಾಗುತ್ತದೆ, ದೇಶಕ್ಕಾಗಿ ಆಡುವುದು ದೊಡ್ಡ ಸಾಧನೆಯಾಗಿದೆ" ಎಂದು ಹೇಳಿದ್ದಾರೆ.
2010ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ
ದೆಹಲಿ ಮೂಲದವರಾದ ಶಿಖರ್ ಧವನ್ 2010ರಲ್ಲಿ ಭಾರತ ತಂಡಕ್ಕೆ ಅಂತಾರಾಷ್ಟ್ರೀಯ ಏಕದಿನ ಪಂದ್ಯವನ್ನಾಡುವ ಮೂಲಕ ಪದಾರ್ಪಣೆ ಮಾಡಿದರು. ಮೊದಲ ಪಂದ್ಯದಲ್ಲೇ ಎರಡು ಎಸೆತಗಳಲ್ಲಿ ಡಕೌಟ್ ಆಗಿದ್ದರು. ನಂತರ 2013ರಲ್ಲಿ ತಂಡಕ್ಕೆ ಮರಳಿದ ಅವರು ಮೂರು ಮಾದರಿಯಲ್ಲಿ ಅವಕಾಶ ಪಡೆದುಕೊಂಡರು.
2013ರಲ್ಲಿ ಮೊದಲ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯ ಆಡಿದ ಅವರು ಮೊದಲ ಪಂದ್ಯದಲ್ಲೇ 85 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ದಾಖಲೆ ಬರೆದರು. 2013 ಮತ್ತು 2017 ರ ಚಾಂಪಿಯನ್ಸ್ ಟ್ರೋಫಿಯ ಸತತ ಎರಡು ಆವೃತ್ತಿಗಳಲ್ಲಿ ಅತಿ ಹೆಚ್ಚು ರನ್ ಗಳಿಸುವ ಮೂಲಕ 'ಗೋಲ್ಡನ್ ಬ್ಯಾಟ್' ಗೆದ್ದಿದ್ದಾರೆ. ಏಕದಿನ ಮಾದರಿಯ ಐಸಿಸಿ ಪಂದ್ಯಾವಳಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ಅವರನ್ನು 'ಮಿಸ್ಟರ್ ಐಸಿಸಿ' ಎಂದು ಕರೆಯಲಾಗುತ್ತದೆ.
2015ರ ಏಕದಿನ ವಿಶ್ವಕಪ್‌ನಲ್ಲಿ ಭಾರತದ ಪರಾತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು. ಭಾರತಕ್ಕಾಗಿ 167 ಏಕದಿನ ಪಂದ್ಯಗಳನ್ನು ಆಡಿದ್ದು, 44.11 ರ ಸರಾಸರಿಯಲ್ಲಿ 91.35 ಸ್ಟ್ರೈಕ್ ರೇಟ್‌ನಲ್ಲಿ 6793 ರನ್ ಗಳಿಸಿದ್ದಾರೆ. 68 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 27.92 ಸರಾಸರಿಯಲ್ಲಿ 1759 ರನ್ ಗಳಿಸಿದ್ದಾರೆ. 34 ಟೆಸ್ಟ್ ಪಂದ್ಯಗಳಲ್ಲಿ, ಧವನ್ ಏಳು ಶತಕ ಮತ್ತು ಐದು ಅರ್ಧಶತಕಗಳೊಂದಿಗೆ 40.61 ಸರಾಸರಿಯಲ್ಲಿ 2315 ರನ್ ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದ್ದರೂ, ಅವರು ಐಪಿಎಲ್‌ನಲ್ಲಿ ಮುಂದುವರೆಯಲಿದ್ದಾರೆ.












Click it and Unblock the Notifications