Ind vs Aus: ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭದ್ರತಾ ವೈಫಲ್ಯ: ಮೈದಾನಕ್ಕೆ ನುಗ್ಗಿದ ಪ್ಯಾಲೆಸ್ಟೈನ್ ಬೆಂಬಲಿಗ!
ಅಹಮದಾಬಾದ್‌ನಲ್ಲಿ ನಡೆಯುತ್ತಿರು ಭಾರತ ಮತ್ತು ಆಸ್ಟ್ರೇಲಿಯಾ ಐಸಿಸಿ ವಿಶ್ವಕಪ್ 2023 ರ ಫೈನಲ್ ಪಂದ್ಯದ ವೇಳೆ ಭದ್ರತಾ ವೈಫಲ್ಯ ಉಂಟಾಗಿದ್ದು ಕೆಲಕಾಲ ಆತಂಕ ಉಂಟಾಗಿತ್ತು.
ಪ್ಯಾಲೆಸ್ಟೈನ್ ಮೇಲಿನ ಬಾಂಬ್ ದಾಳಿ ನಿಲ್ಲಿಸುವಂತೆ ಬರೆದಿದ್ದ ಟೀ ಶರ್ಟ್ ತೊಟ್ಟಿದ್ದ ವ್ಯಕ್ತಿಯೊಬ್ಬ ಇದಕ್ಕಿದ್ದಂತೆ ಅಂಗಳಕ್ಕೆ ಪ್ರವೇಶ ಮಾಡಿದ್ದು, ಪಿಚ್ ಸನಿಹಕ್ಕೆ ಬಂದದ್ದು ಆತಂಕಕ್ಕೆ ಕಾರಣವಾಯಿತು. ಇದರಿಂದ ಸ್ವಲ್ಪ ಹೊತ್ತು ಪಂದ್ಯವನ್ನು ನಿಲ್ಲಿಸಲಾಯಿತು.

'ಪ್ಯಾಲೆಸ್ಟೈನ್ ಮೇಲಿನ ಬಾಂಬ್ ದಾಳಿಯನ್ನುನಿಲ್ಲಿಸಿ' ಎಂದು ಬರೆದಿರುವ ಟಿ-ಶರ್ಟ್ ಧರಿಸಿದ್ದ ಅಭಿಮಾನಿಯೊಬ್ಬರು ಮತ್ತು LGBTQ+ ಸಮುದಾಯವನ್ನು ಬೆಂಬಲಿಸುತ್ತಿರುವಂತೆ ಕಾಣುತ್ತಿದ್ದರು. 13ನೇ ಓವರ್‌ನ ಅಂತ್ಯದ ವೇಳೆಗೆ ಪಿಚ್ ಅನ್ನು ಆಕ್ರಮಿಸಿದ್ದರು ಎಂದು ವರದಿಯಾಗಿದೆ.
ಆಕ್ರಮಣ ಮಾಡಿದ್ದವನ ಬಂಧನ
ಆ ಸಮಯದಲ್ಲಿ ಕ್ರೀಸ್‌ನಲ್ಲಿದ್ದ ವಿರಾಟ್ ಕೊಹ್ಲಿ, ವ್ಯಕ್ತಿ ವ್ಯಕ್ತಿ ತಮ್ಮ ಬಳಿ ತಲುಪಿದಾಗ ಸ್ವಲ್ಪ ವಿಚಲಿತರಾದಂತೆ ಕಂಡುಬಂದರು. ಶೀಘ್ರದಲ್ಲೇ ಆ ವ್ಯಕ್ತಿಯನ್ನು ತಡೆಯಲು ಭದ್ರತಾ ಸಿಬ್ಬಂದಿ ಧಾವಿಸಿದರು. ನಂತರ ಆತನನ್ನು ಮೈದಾನದ ಹೊರಗೆ ಕರೆದೊಯ್ಯಲಾಯಿತು.
ವರದಿಗಳ ಪ್ರಕಾರ, ಘಟನೆಯ ನಂತರ ಭದ್ರತಾ ಅಧಿಕಾರಿಗಳು ದಾಳಿಕೋರನನ್ನು ಬಂಧಿಸಿದ್ದಾರೆ. ಘಟನೆಯ ನಂತರ ಯಾವುದೇ ವ್ಯತ್ಯಾಸವಿಲ್ಲದೆ ಆಟ ಪುನರಾರಂಭವಾಯಿತು.
ಗಿಲ್, ಅಯ್ಯರ್ ವೈಫಲ್ಯ!
ಇನ್ನು ಫೈನಲ್ ಪಂದ್ಯದಲ್ಲಿ ಭಾರತದ ಭರವಸೆಯ ಬ್ಯಾಟರ್ ಗಳಾದ ಶುಭಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ವಿಫಲವಾದರು. ಶುಭಮನ್ ಗಿಲ್ 4 ರನ್ ಗಳಿಸಿ ಔಟಾದರೆ, ಅಯ್ಯರ್ ಕೂಡ 4 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಎಂದಿನಂತೆ ಸ್ಫೋಟಕ ಆಟವಾಡಿದ ರೋಹಿತ್ ಶರ್ಮಾ 31 ಎಸೆತಗಳಲ್ಲಿ 4 ಬೌಂಡರಿ 3 ಸಿಕ್ಸರ್ ಸಹಿತ 47 ರನ್ ಗಳಿಸಿ ಔಟಾದರು, ವಿರಾಟ್ ಕೊಹ್ಲಿ (54) ಅರ್ಧಶತಕ ಗಳಿಸಿ ಉತ್ತಮವಾಗಿ ಆಡುತ್ತಿದ್ದಾಗ ಆಸ್ಟ್ರೇಲಯಾ ನಾಯಕ ಪ್ಯಾಟ್ ಕಮಿನ್ಸ್ ಬೌಲಿಂಗ್‌ನಲ್ಲಿ ಬೌಲ್ಡ್ ಆದರು.
ಪಿಚ್ ಬ್ಯಾಟಿಂಗ್‌ಗೆ ಕಷ್ಟಕರವಾಗಿದ್ದು ಭಾರತ 270-280 ರನ್ ಕಲೆಹಾಕಿದರೂ ಆಸ್ಟ್ರೇಲಿಯಾಗೆ ಪೈಪೋಟಿ ಕೊಡಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಕೆಎಲ್ ರಾಹುಲ್ ಮತ್ತು ಜಡೇಜಾ ಸದ್ಯ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡುತ್ತಿದ್ದು, ಭಾರತ ಸವಾಲಿನ ಮೊತ್ತ ಕಲೆಹಾಕುವ ವಿಶ್ವಾಸದಲ್ಲಿದೆ.
ಭಾರತ ಮೂರನೇ ಬಾರಿ ವಿಶ್ವಕಪ್ ಗೆಲ್ಲುವ ಉತ್ಸಾಹದಲ್ಲಿದ್ದರೆ, ಆಸ್ಟ್ರೇಲಿಯಾ ಆರನೇ ಬಾರಿ ವಿಶ್ವ ಚಾಂಪಿಯನ್ನರಾಗುವ ಉತ್ಸಾಹದಲ್ಲಿದೆ. ಉಭಯ ತಂಡಗಳೂ ಬಲಿಷ್ಠವಾಗಿದ್ದು, ಗೆಲುವಿಗಾಗಿ ರೋಚಕ ಹಣಾಹಣಿ ನಡೆಯುತ್ತಿದೆ.












Click it and Unblock the Notifications