Rohit Sharma: ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಗೆ ರೋಹಿತ್ ಶರ್ಮಾ ಗೈರು? ಮೊದಲ ಎರಡು ಟೆಸ್ಟ್ ಆಡುವುದು ಅನುಮಾನ
ಬಹು ನಿರೀಕ್ಷೆಯ ಬಾರ್ಡರ್-ಗವಾಸ್ಕರ್ ಟ್ರೋಫಿ ಮೇಲೆ ವಿಶ್ವ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದಾರೆ. ಭಾರತ ಆಸ್ಟ್ರೇಲಿಯಾ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲು ಸಜ್ಜಾಗಿದ್ದು, ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಬಳಿಕ ಆಸ್ಟ್ರೇಲಿಯಾಗೆ ತೆರಳಲಿದೆ. ನವೆಂಬರ್ 22ರಿಂದ ಟೆಸ್ಟ್ ಸರಣಿಯ ಮೊದಲ ಪಂದ್ಯ ಪರ್ತ್‌ನಲ್ಲಿ ಆರಂಭವಾಗಲಿದೆ. ಆದರೆ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ನಾಯಕ ರೋಹಿತ್ ಶರ್ಮಾ ಅಲಭ್ಯರಾಗುವ ಸಾಧ್ಯತೆ ಇದೆ.
ಪಿಟಿಐ ವರದಿ ಮಾಡಿರುವ ಪ್ರಕಾರ ಯಾವುದೇ ಕಾರಣದ ಬಗ್ಗೆ ಸ್ಪಷ್ಟನೆ ಇಲ್ಲದೇ ಇದ್ದರೂ, ವೈಯಕ್ತಿಕ ಕಾರಣದಿಂದ ಮೊದಲ ಎರಡು ಪಂದ್ಯಗಳಲ್ಲಿ ರೋಹಿತ್ ಶರ್ಮಾ ಆಡುವುದು ಅನುಮಾನ ಎನ್ನಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

ಒಂದು ವೇಲೆ ಸರಣಿಯ ಆರಂಭಕ್ಕೆ ಮುನ್ನವೇ ವೈಯಕ್ತಿಕ ಸಮಸ್ಯೆಗಳನ್ನು ನಿವಾರಿಸಿಕೊಂಡರೆ ಅವರು ಐದು ಪಂದ್ಯಗಳಿಗೆ ಲಭ್ಯವಾಗುವ ಸಾಧ್ಯತೆ ಕೂಡ ಇದ್ದು, ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಬಳಿಕವೇ ಈ ಬಗ್ಗೆ ಸ್ಪಷ್ಟನೆ ಸಿಗಲಿದೆ.
ಅಭಿಮನ್ಯು ಈಶ್ವರನ್‌ಗೆ ಅವಕಾಶ?
ಒಂದು ವೇಳೆ ಮೊದಲ ಎರಡು ಪಂದ್ಯಗಳಿಗೆ ರೋಹಿತ್ ಶರ್ಮಾ ಅಲಭ್ಯರಾದರೆ ಅವರ ಬದಲಾಗಿ ಅಭಿಮನ್ಯು ಈಶ್ವರನ್ ಅವಕಾಶ ಪಡೆಯುವ ಸಾಧ್ಯತೆ ಇದೆ. ಬಂಗಾಳದ ಕ್ರಿಕೆಟಿಗ ಭಾರತ ಎ ತಂಡದಲ್ಲಿ ಅವಕಾಶ ಪಡೆದಿದ್ದು, ಆಸ್ಟ್ರೇಲಿಯಾಗೆ ಪ್ರವಾಸ ಮಾಡಲಿದ್ದಾರೆ.
ಶುಭಮನ್ ಗಿಲ್, ರಿಷಬ್ ಪಂತ್ ಅಥವಾ ಜಸ್ಪ್ರೀತ್ ಬುಮ್ರಾ ಮೊದಲ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆ ಇದೆ.
ನ್ಯೂಜಿಲೆಂಡ್ ವಿರುದ್ಧ ಟೆಸ್ಟ್‌ಗೆ ಸಿದ್ಧತೆ
ಬಾಂಗ್ಲಾದೇಶದ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿರುವ ಭಾರತ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಸಜ್ಜಾಗುತ್ತಿದೆ. ಅಕ್ಟೋಬರ್ 16ರಿಂದ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಸರಣಿಯ ಎರಡನೇ ಪಂದ್ಯ ಅಕ್ಟೋಬರ್ 24 ರಿಂದ 28ರವರೆಗೆ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಸರಣಿಯ ಕೊನೆಯ ಪಂದ್ಯ ನವೆಂಬರ್ 1 ರಿಂದ ನವೆಂಬರ್ 5ರವರೆಗೆ ನಡೆಯಲಿದೆ.
ನವೆಂಬರ್ 22ರಿಂದ ಭಾರತ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯ ನಡೆಯಲಿದ್ದು, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪುವ ದೃಷ್ಟಿಯಿಂದ ಭಾರತ ಉಳಿದ ಎಂಟು ಪಂದ್ಯಗಳಲ್ಲಿ ಕನಿಷ್ಠ ನಾಲ್ಕು ಪಂದ್ಯಗಳನ್ನು ಗೆದ್ದು, ಒಂದು ಪಂದ್ಯ ಡ್ರಾ ಮಾಡಿಕೊಳ್ಳಬೇಕಿದೆ.












Click it and Unblock the Notifications