Team India: ಭಾರತ ತಂಡದ ಮುಂದಿನ ನಾಯಕ ಯಾರು? ಜಯ್ ಶಾ ಕೊಟ್ರು ಸ್ಪಷ್ಟನೆ
ಭಾರತ ಟಿ20 ವಿಶ್ವಕಪ್ ಗೆದ್ದ ಸಂಭ್ರಮದಲ್ಲಿದ್ದು, 2025ರಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲುವತ್ತ ಗುರು ಇಟ್ಟಿದೆ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಾಯಕ ರೋಹಿತ್ ಶರ್ಮಾ ವಿದಾಯ ಹೇಳಿದ್ದು, ಏಕದಿನ ಮತ್ತು ಟೆಸ್ಟ್ ತಂಡದ ನಾಯಕತ್ವ ಕೂಡ ಬದಲಾವಣೆ ಆಗುತ್ತಾ ಎನ್ನುವ ಪ್ರಶ್ನೆ ಎದುರಾಗಿತ್ತು.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಎಲ್ಲಾ ಅನುಮಾನಗಳಿಗೆ ಉತ್ತರ ಕೊಟ್ಟಿದ್ದು, ರೋಹಿತ್ ಶರ್ಮಾ ಅವರೇ ಏಕದಿನ ಮತ್ತು ಟೆಸ್ಟ್ ಮಾದರಿಯಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಹೇಳಿದ್ದಾರೆ.

2025ರಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮುಗಿಯುವವರೆಗೆ ರೋಹಿತ್ ಅವರೇ ಭಾರತ ಟೆಸ್ಟ್ ಮತ್ತು ಏಕದಿನ ತಂಡದ ನಾಯಕ ಎಂದು ಜಯ್ ಶಾ ಘೋಷಿಸಿದ್ದಾರೆ.
ಜಯ್ ಶಾ ಹೇಳಿದ್ದೇನು?
ವೆಸ್ಟ್ ಇಂಡೀಸ್‌ನಲ್ಲಿ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದ ಟೀಮ್ ಇಂಡಿಯಾವನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ವೀಡಿಯೊ ಸಂದೇಶದ ಮೂಲಕ ಅಭಿನಂದಿಸಿದ್ದಾರೆ ಮತ್ತು ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುಂದಿನ ವರ್ಷದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಮತ್ತು ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಟಿ20 ವಿಶ್ವಕಪ್ ಗೆಲುವಿನ ನಂತರ ಕೋಚ್ ಸ್ಥಾನ ತ್ಯಜಿಸಿದ ರಾಹುಲ್ ದ್ರಾವಿಡ್ ಮತ್ತು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ ರೋಹಿತ್, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಅವರಿಗೆ ಗೆಲುವನ್ನು ಅರ್ಪಿಸಿದಿ ಜಯ್ ಶಾ, ಭಾರತ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.
"ಈ ಐತಿಹಾಸಿಕ ಗೆಲುವಿಗಾಗಿ ಟೀಮ್ ಇಂಡಿಯಾಕ್ಕೆ ಅನೇಕ ಅಭಿನಂದನೆಗಳು. ನಾನು ಈ ವಿಜಯವನ್ನು ಕೋಚ್ ರಾಹುಲ್ ದ್ರಾವಿಡ್, ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಅವರಿಗೆ ಅರ್ಪಿಸಲು ಬಯಸುತ್ತೇನೆ. ಕಳೆದ ಒಂದು ವರ್ಷದಲ್ಲಿ ಇದು ನಮ್ಮ ಮೂರನೇ ಫೈನಲ್" ಎಂದು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
"ಜೂನ್ 2023 ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಸೋತೆವು, ನವೆಂಬರ್ 2023 ರಲ್ಲಿ ಹತ್ತು ಸತತ ಗೆಲುವುಗಳೊಂದಿಗೆ ಸಾಕಷ್ಟು ಹೃದಯಗಳನ್ನು ಗೆದ್ದಿದ್ದೇವೆ, ಆದರೆ ಏಕದಿನ ವಿಶ್ವಕಪ್ ಗೆಲ್ಲಲು ಸಾಧ್ಯವಾಗಲಿಲ್ಲ. 2024ರ ಜೂನ್‌ನಲ್ಲಿ ನಾವು ಕಪ್ ಗೆಲ್ಲುತ್ತೇವೆ ಎಂದು ನಾನು ರಾಜ್‌ಕೋಟ್‌ನಲ್ಲಿ ಹೇಳಿದ್ದೆ, ವಿಶ್ವಕಪ್ ಅನ್ನು ಗೆಲ್ಲುತ್ತೇವೆ ಮತ್ತು ಭಾರತದ ಧ್ವಜವನ್ನು ಎತ್ತರಕ್ಕೆ ಏರಿಸುತ್ತೇವೆ ಎಂದಿದ್ದೆ ನಮ್ಮ ನಾಯಕ ಅದನ್ನು ಮಾಡಿದ್ದಾರೆ ಎಂದರು.
"ಫೈನಲ್ ಪಂದ್ಯದಲ್ಲಿ ಕೊನೆಯ ಐದು ಓವರ್‌ಗಳು ಈ ಗೆಲುವಿಗೆ ದೊಡ್ಡ ಕೊಡುಗೆ ನೀಡಿವೆ. ಈ ಕೊಡುಗೆಗಾಗಿ ನಾನು ಸೂರ್ಯಕುಮಾರ್ ಯಾದವ್, ಬುಮ್ರಾ, ಅರ್ಶ್ದೀಪ್ ಸಿಂಗ್ ಮತ್ತು ಹಾರ್ದಿಕ್ ಪಾಂಡ್ಯ ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಲು ಬಯಸುತ್ತೇನೆ" ಎಂದರು.
ನಮ್ಮ ಮುಂದಿನ ಗುರಿ 2025 ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಮತ್ತು ಚಾಂಪಿಯನ್ಸ್ ಟ್ರೋಫಿಯಾಗಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ನಾವು ಎರಡೂ ಪಂದ್ಯಾವಳಿಗಳನ್ನು ಗೆಲ್ಲುತ್ತೇವೆ ಎಂದು ನನಗೆ ನಿಜವಾಗಿಯೂ ವಿಶ್ವಾಸವಿದೆ. ಮತ್ತೊಮ್ಮೆ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ.












Click it and Unblock the Notifications