ನಮ್ದು ಒಂದೇ ತಂಡ.. ಹುದ್ದೆ ಮತ್ತು ಪಾತ್ರಗಳ ಹೆಸರು ಮಾತ್ರ ಬದಲಾಗಿವೆ: ರೋಹಿತ್ ಶರ್ಮಾ ಬಗ್ಗೆ ಎಂಐ ಕೋಚ್ ಅಚ್ಚರಿ ಹೇಳಿಕೆ

Kieron Pollard: ಇತ್ತೀಚೆಗಷ್ಟೇ ಐಪಿಎಲ್‌ನ ಮುಂಬೈ ಇಂಡಿಯನ್ಸ್‌ ತಂಡಕ್ಕೆ ರೋಹಿತ್ ಶರ್ಮಾ ಅವರನ್ನು ಮತ್ತೆ ನಾಯಕನಾಗಿ ನೇಮಕ ಮಾಡಲಾಗಿದೆ. ಇದರ ಬೆನ್ನಲ್ಲೇ ಇದೀಗ ಈ ಕುರಿತು ಎಂಐ ಮುಖ್ಯ ಕೋಚ್ ಕೀರನ್ ಪೊಲಾರ್ಡ್‌ ಅವರು ಹಿಟ್‌ಮ್ಯಾನ್‌ ಜೊತೆ ಕೈಜೋಡಿಸುವ ಕುರಿತು ನೀಡಿರುವ ಹೇಳಿಕೆ ಭಾರಿ ವೈರಲ್ ಆಗುತ್ತಿದೆ.

ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಕೀರನ್ ಪೊಲಾರ್ಡ್ ಅವರು, ಐಪಿಎಲ್ 2027ರ ಆವೃತ್ತಿಗೆ ಮತ್ತೆ ತಂಡದ ನಾಯಕತ್ವ ವಹಿಸಿಕೊಂಡಿರುವ ರೋಹಿತ್ ಶರ್ಮಾ ಅವರೊಂದಿಗೆ ಕೈಜೋಡಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಇಬ್ಬರ ನಡುವಿನ ಸುದೀರ್ಘ ಒಡನಾಟ ಮತ್ತು ಹಿಂದಿನ ಯಶಸ್ಸಿನ ಅನುಭವಗಳು, ಮುಂಬೈ ತಂಡಕ್ಕೆ ಮತ್ತೊಮ್ಮೆ ಪ್ರಶಸ್ತಿ ಗೆಲ್ಲುವ ಹಾದಿಯಲ್ಲಿ ದೊಡ್ಡ ಶಕ್ತಿಯಾಗಲಿವೆ ಎಂದು ಪೊಲಾರ್ಡ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Rohit Sharma Returns as Mumbai Indians Captain Kieron Pollard Makes Big Statement Ahead of IPL 2027

ಮುಂಬೈ ಇಂಡಿಯನ್ಸ್‌ಗೆ ಮತ್ತೆ ನಾಯಕನಾದ ರೋಹಿತ್..

2024ರಿಂದ 2026ರವರೆಗೆ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ್ದ ಹಾರ್ದಿಕ್ ಪಾಂಡ್ಯ ಅವರನ್ನು ಇತ್ತೀಚೆಗೆ ಪಂಜಾಬ್ ಕಿಂಗ್ಸ್ ತಂಡಕ್ಕೆ ಟ್ರೇಡ್ ಮಾಡಿದ ಬಳಿಕ, ರೋಹಿತ್ ಶರ್ಮಾ ಅವರನ್ನು ಮತ್ತೆ ನಾಯಕರನ್ನಾಗಿ ನೇಮಿಸುವ ನಿರ್ಧಾರವನ್ನು ಫ್ರಾಂಚೈಸಿ ಕಳೆದ ಶುಕ್ರವಾರ ಪ್ರಕಟಿಸಿತ್ತು. ವಿಶೇಷ ಅಂದ್ರೆ 2027ರ ಆವೃತ್ತಿಯು ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ 20ನೇ ವರ್ಷದ ಮಹತ್ವದ ಮೈಲಿಗಲ್ಲಾಗಿದ್ದು, ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ನಾಯಕನ ಮರಳುವಿಕೆ ತಂಡದಲ್ಲಿ ಹೊಸ ಹುರುಪು ತಂದಿದೆ.

ರೋಹಿತ್ ಶರ್ಮಾ ಬಗ್ಗೆ ಪೊಲಾರ್ಡ್‌ ಮಹತ್ವದ ಮಾಹಿತಿ

ಭಾನುವಾರ ಮುಂಬೈ ಇಂಡಿಯನ್ಸ್ ತನ್ನ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಮಾತನಾಡಿದ ಪೊಲಾರ್ಡ್, 'ಕಾಲಕ್ರಮೇಣ ನಾವು ಹಂಚಿಕೊಂಡ ಅನುಭವಗಳು, ಏಳುಬೀಳುಗಳು ನಮಗೆ ಮುಂದಿನ ದಿನಗಳಲ್ಲಿ ಉತ್ತಮವಾಗಿ ನೆರವಾಗಲಿವೆ. ನನ್ನ ವೃತ್ತಿ ಜೀವನದುದ್ದಕ್ಕೂ ರೋಹಿತ್ ಮುಂಬೈನ ನಾಯಕರಾಗಿದ್ದರು. ಅವರು 2013ರಲ್ಲಿ ಸಾರಥ್ಯ ವಹಿಸಿದಾಗಿನಿಂದ ನಾವಿಬ್ಬರೂ ಒಟ್ಟಾಗಿ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದೇವೆ,' ಎಂದು ಸ್ಮರಿಸಿದರು.

ಮುಂದುವರೆದು ಮಾತನಾಡಿದ ಅವರು, 'ನಮ್ಮ ಹುದ್ದೆ ಮತ್ತು ಪಾತ್ರಗಳ ಹೆಸರು ಮಾತ್ರ ಬದಲಾಗಿವೆ. ಆದರೆ ಅದೇ ಉತ್ಸಾಹ, ಹುಮ್ಮಸ್ಸು ಮತ್ತು ಸಂಭ್ರಮದೊಂದಿಗೆ ಗೆಲುವು ಸಾಧಿಸುವ ಸಾಮಾನ್ಯ ಗುರಿ ಹಾಗೆಯೇ ಇದೆ. ನನ್ನ ಮಟ್ಟಿಗೆ ಹೇಳುವುದಾದರೆ ಈ ದೃಷ್ಟಿಕೋನದಲ್ಲಿ ಯಾವ ಬದಲಾವಣೆಯೂ ಇಲ್ಲ. ಅವರು ಗೆರೆಯ ಆ ಕಡೆಯಲ್ಲಿದ್ದರೆ, ನಾನು ಗೆರೆಯ ಈ ಕಡೆ ಇರುತ್ತೇನೆ ಅಷ್ಟೇ. ಆದರೆ ನಾವು ಜೊತೆಯಾಗಿ ಆಡಿದಾಗ ಕಂಡ ಯಶಸ್ಸನ್ನು ಪುನರಾವರ್ತಿಸುವ ಮನೋಭಾವ ಮತ್ತು ಗುರಿ ಒಂದೇ ಆಗಿರುತ್ತದೆ,' ಎಂದು ಹೇಳಿದರು.

ರೋಹಿತ್ ನಾಯಕತ್ವದ ಸುವರ್ಣಯುಗ ಮತ್ತು ಅಂಕಿಅಂಶಗಳು

2011ರಲ್ಲಿ ಮುಂಬೈ ಇಂಡಿಯನ್ಸ್‌ ತಂಡ ಸೇರಿದ ರೋಹಿತ್ ಶರ್ಮಾ, 2013ರ ಆವೃತ್ತಿಯ ಮಧ್ಯಭಾಗದಲ್ಲಿ ರಿಕಿ ಪಾಂಟಿಂಗ್ ಅವರಿಂದ ನಾಯಕತ್ವದ ಹೊಣೆ ವಹಿಸಿಕೊಂಡರು. ಅದೇ ಆವೃತ್ತಿಯಲ್ಲಿ ಈಡನ್ ಗಾರ್ಡನ್ಸ್‌ನಲ್ಲಿ ಐಪಿಎಲ್ ಟ್ರೋಫಿ ಎತ್ತಿ ಹಿಡಿದ ತಂಡ, ಕೆಲವೇ ತಿಂಗಳಲ್ಲಿ ಚಾಂಪಿಯನ್ಸ್ ಲೀಗ್ ಟಿ-20 ಪ್ರಶಸ್ತಿಯನ್ನೂ ಗೆದ್ದಿತು. ನಂತರ 2015, 2017, 2019 ಮತ್ತು 2020ರಲ್ಲಿ ಮುಂಬೈ ಚಾಂಪಿಯನ್ ಪಟ್ಟಕ್ಕೇರಿತು. ಜೊತೆಗೆ ಐದು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದ ಎಂ.ಎಸ್.ಧೋನಿ ಅವರ ದಾಖಲೆಯನ್ನು ರೋಹಿತ್ ಸರಿಗಟ್ಟಿದರು.

ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್‌ ತಂಡ ತಲುಪಿದ ಐದೂ ಫೈನಲ್ ಪಂದ್ಯಗಳಲ್ಲಿ ಜಯ ಸಾಧಿಸಿದ ಅಜೇಯ ದಾಖಲೆ ಹೊಂದಿದೆ. ಐಪಿಎಲ್ ಮತ್ತು ಚಾಂಪಿಯನ್ಸ್ ಲೀಗ್ ಟಿ20 ಸೇರಿದಂತೆ ಒಟ್ಟು 163 ಪಂದ್ಯಗಳಲ್ಲಿ ರೋಹಿತ್ ತಂಡವನ್ನು ಮುನ್ನಡೆಸಿದ್ದು, ಅದರಲ್ಲಿ 91 ಗೆಲುವು, 68 ಸೋಲು ಮತ್ತು 4 ಟೈ ಪಂದ್ಯಗಳು ಸೇರಿವೆ.

2021 ಮತ್ತು 2022ರಲ್ಲಿ ತಂಡ ಪ್ಲೇಆಫ್ ತಲುಪಲು ವಿಫಲವಾದರೂ, 2023ರಲ್ಲಿ ಕ್ವಾಲಿಫೈಯರ್ 2 ಹಂತದವರೆಗೆ ಸಾಗಿತ್ತು. ಆ ಎಲ್ಲಾ ಯಶಸ್ಸುಗಳಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಮತ್ತು ಬೌಲಿಂಗ್ ಮೂಲಕ ಪೊಲಾರ್ಡ್ ಪ್ರಮುಖ ಪಾತ್ರ ವಹಿಸಿದ್ದರು. ಒಟ್ಟಿನಲ್ಲಿ ಹೇಳುವುದಾದರೆ ಆಟಗಾರ-ನಾಯಕ ಜೋಡಿಯಾಗಿದ್ದ ರೋಹಿತ್ ಮತ್ತು ಪೊಲಾರ್ಡ್, ಇದೀಗ ನಾಯಕ-ಮುಖ್ಯ ಕೋಚ್ ಜೋಡಿಯಾಗಿ ಮುಂಬೈ ಇಂಡಿಯನ್ಸ್ ತಂಡ ಟ್ರೋಫಿ ಗೆಲುವಿನತ್ತ ಕೊಂಡೊಯ್ಯುವ ಸಿದ್ಧತೆಯಲ್ಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+