ಐಪಿಎಲ್ 2026: ಪಂದ್ಯ ಗೆದ್ದರೂ 27 ಕೋಟಿ ರೂಪಾಯಿ ಸ್ಟಾರ್ ಆಟಗಾರನಿಗೆ ₹12,00,000 ದಂಡ
CSK Vs LSG IPL 2026: ಏಕನಾ ಕ್ರೀಡಾಂಗಣದಲ್ಲಿ ಶುಕ್ರವಾರ (ಮೇ 15) ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಭರ್ಜರಿ ಜಯ ದಾಖಲಿಸಿತು. ಆದರೂ ಲಕ್ನೋ ತಂಡದ ನಾಯಕ 27 ಕೋಟಿ ರೂಪಾಯಿ ಮೌಲ್ಯದ ರಿಷಭ್ ಪಂತ್‌ಗೆ ಐಪಿಎಲ್ ಆಡಳಿತ ಮಂಡಳಿ ಬಿಸಿ ಮುಟ್ಟಿಸಿದೆ. ಪಂದ್ಯದ ವೇಳೆ ನಿಧಾನಗತಿಯ ಬೌಲಿಂಗ್ ಮಾಡಿದ ಕಾರಣ ದಂಡ ವಿಧಿಸಲಾಗಿದೆ.
ಐಪಿಎಲ್ ನೀತಿ ಸಂಹಿತೆಯ ಅಡಿಯಲ್ಲಿ ನಿಗದಿತ ಸಮಯದಲ್ಲಿ ಓವರ್‌ಗಳನ್ನು ಪೂರ್ಣಗೊಳಿಸದ ಕಾರಣ ಪಂತ್‌ಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಪ್ರಸಕ್ತ ಸೀಸನ್‌ನಲ್ಲಿ ಪಂತ್ ನಾಯಕತ್ವದ ಲಕ್ನೋ ತಂಡ ಮಾಡಿದ ಮೊದಲ ತಪ್ಪು ಇದಾಗಿರುವುದರಿಂದ ಕನಿಷ್ಠ ದಂಡದ ಮೊತ್ತವನ್ನು ವಿಧಿಸಲಾಗಿದೆ ಎಂದು ಐಪಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ ಎಂದು ವರದಿಯಾಗಿದೆ.

ರಿಷಭ್ ಪಂತ್‌ಗೆ ದಂಡದ ರುಚಿ
ಕೇವಲ ರಿಷಭ್ ಪಂತ್ ಮಾತ್ರವಲ್ಲದೆ ಈ ಬಾರಿ ಎಸ್‌ಆರ್‌ಎಚ್ ಪ್ಯಾಟ್ ಕಮ್ಮಿನ್ಸ್, ಎಂಐ ಹಾರ್ದಿಕ್ ಪಾಂಡ್ಯ, ಗುಜರಾತ್ ಟೈಟಾನ್ಸ್ ಶುಭ್‌ಮನ್ ಗಿಲ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಅಕ್ಷರ್ ಪಟೇಲ್ ಅವರಂತಹ ಸ್ಟಾರ್ ನಾಯಕರಿಗೂ ಈಗಾಗಲೇ ನಿಧಾನಗತಿಯ ನಿಧಾನಗತಿಯ ಬೌಲಿಂಗ್ ಮಾಡಿದ್ದಕ್ಕೆ ದಂಡದ ರುಚಿ ತೋರಿಸಲಾಗಿದೆ.
ಸಿಎಸ್‌ಕೆ ವಿರುದ್ಧ ಎಲ್‌ಎಸ್‌ಜಿ ಭರ್ಜರಿ ಗೆಲುವು
ಏಕಾನಾ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಸಿಎಸ್‌ಕೆ ನೀಡಿದ್ದ 188 ರನ್‌ಗಳ ಗುರಿಯನ್ನು ಎಲ್‌ಎಸ್‌ಜಿ ಸುಲಭವಾಗಿ ಮುಟ್ಟುವ ಮೂಲಕ ಭರ್ಜರಿ ಜಯ ಸಾಧಿಸಿತು. ಕೇವಲ 38 ಎಸೆತಗಳಲ್ಲಿ ಸ್ಫೋಟಕ 90 ರನ್ ಸಿಡಿಸಿದ ಮಾರ್ಷ್ ತಂಡದ ಗೆಲುವಿನ ರೂವಾರಿಯಾದರು. ಇನ್ನು 20 ಎಸೆತಗಳು ಬಾಕಿ ಇರುವಂತೆಯೇ ಎಲ್‌ಎಸ್‌ಜಿ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.
ಪಂದ್ಯದ ನಂತರ ಮಾತನಾಡಿದ ಎಲ್‌ಎಸ್‌ಜಿ ನಾಯಕ ರಿಷಭ್ ಪಂತ್ ಗೆಲುವಿನ ಬಗ್ಗೆ ಸಂತಸ ವ್ಯಕ್ತಪಡಿಸಿದರು. "ನಾನು ಬ್ಯಾಟಿಂಗ್‌ಗೆ ಬರಲು ಸಿದ್ಧನಾಗಿದ್ದೆ. ಆದರೆ ಹೆಚ್ಚು ಅವಕಾಶ ಸಿಗದ ಆಟಗಾರರಿಗೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಒಂದು ವೇದಿಕೆ ಕಲ್ಪಿಸಿಕೊಡಬೇಕೆಂದು ಈ ನಿರ್ಧಾರ ತೆಗೆದುಕೊಂಡೆ. ಹೊಸ ಆಟಗಾರರನ್ನು ಪರೀಕ್ಷಿಸುವ ಉದ್ದೇಶ ನನ್ನದಾಗಿತ್ತು," ಎಂದು ಸ್ಪಷ್ಟಪಡಿಸಿದರು. ಈಗಾಗಲೇ ಅಧಿಕೃತವಾಗಿ ಟೂರ್ನಿಯಿಂದ ಹೊರಬಿದ್ದರೂ ಸಹ ಎಲ್‌ಎಸ್‌ಜಿ ಗೌರವಕ್ಕಾಗಿ ಸತತ ಗೆಲುವುಗಳನ್ನು ಕಾಣುತ್ತಿದ್ದು, ಉಳಿದ ಎರಡೂ ಪಂದ್ಯಗಳಲ್ಲೂ ಗೆಲ್ಲಲೇಬೇಕೆನ್ನುವ ಹಠ ತೊಟ್ಟು ನಿಂತಿದೆ.
ಲಕ್ನೋ ಸೂಪರ್ ಜೈಂಟ್ಸ್ ತಂಡವು ರಿಷಭ್ ಪಂತ್ ಅವರನ್ನು 27 ಕೋಟಿ ರೂಪಾಯಿಗೆ ಖರೀದಿ ಮಾಡಿದೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಮೊತ್ತಕ್ಕೆ ಖರೀದಿ ಮಾಡಲಾಗೊದೆ ಆಟಗಾರ ಎನಿಸಿಕೊಂಡಿದ್ದಾರೆ. ಆದರೆ ಅವರ ನಾಯಕತ್ವದಲ್ಲಿ ಈ ಸೀಸನ್ ಆರಂಭದಿಂದಲೂ ಎಲ್‌ಎಸ್‌ಜಿ ಸತತ ಸೋಲುಗಳನ್ನು ಕಂಡಿದೆ. ಆದರೆ ಇದೀಗ ಟೂರ್ನಿಯಿಂದ ಹೊರಬಿದ್ದಿದ್ದು, ಈ ವೇಳೆಯೇ ಸತತ ಗೆಲುವು ಸಾಧಿಸುತ್ತ ಬಂದಿದೆ. ಇನ್ನೂ ರಿಷಭ್ ಪಂತ್ ಅವರನ್ನು ಮುಂಬರುವ ಐಪಿಎಲ್ ಸೀಸನ್‌ನಿಂದ ನಾಯಕತ್ವ ಸ್ಥಾನದಿಂದ ಕೈಬಿಡುವ ಸಾಧ್ಯತೆಯಿದೆ ಎನ್ನುವ ಮಾಹಿತಿಯೂ ಇದೆ.
ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡ ನಾಯಕ ರಿಷಭ್ ಪಂತ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆಯೇ ಮೊದಲು ಬ್ಯಾಟ್ ಬೀಸಿದ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 187 ರನ್‌ಗಳನ್ನು ಕಲೆಹಾಕಿತು. ಎಲ್‌ಎಸ್‌ಜಿ 188 ರನ್‌ಗಳ ಗುರಿಯನ್ನ 16.4 ಓವರ್‌ಗಳಿಗೆ ಮುಗಿಸಿ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಸಿಎಸ್‌ಕೆ ಪ್ಲೇ-ಆಫ್ ಹಾದಿಗೆ ಮುಳುವಾಯಿತು.












Click it and Unblock the Notifications