IPL 2025: ದುಬಾರಿ ಮೊತ್ತಕ್ಕೆ ಹರಾಜಾಗುವ ಆಟಗಾರ ಇವರೇ!
ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಮೆಗಾ ಹರಾಜಿಗೆ ಮುಹೂರ್ತ ನಿಗದಿಯಾಗಿದೆ. ನವೆಂಬರ್ 24, 25 ರಂದು ಜೆಡ್ಡಾದಲ್ಲಿ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. 1,500 ಕ್ಕೂ ಹೆಚ್ಚು ಆಟಗಾರರು ಈ ಬಾರಿ ಮೆಗಾ ಹರಾಜಿನಲ್ಲಿ ಭಾಗವಹಿಸಿಲು ನೋಂದಾಯಿಸಿಕೊಂಡಿದ್ದಾರೆ. 1,100 ಕ್ಕೂ ಹೆಚ್ಚು ಭಾರತೀಯ ಕ್ರಿಕೆಟಿಗರು ಹರಾಜಿನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಹಲವು ಪ್ರಮುಖ ಆಟಗಾರರು ಫ್ರಾಂಚೈಸಿಯಿಂದ ಹೊರಬಂದಿದ್ದು, ಹರಾಜಿನಲ್ಲಿ ಕಾಣಿಸಿಕೊಳ್ಳುತ್ತಿದ್ದು ದೊಡ್ಡ ಮೊತ್ತಕ್ಕೆ ಹರಾಜಾಗುವ ವಿಶ್ವಾಸದಲ್ಲಿದ್ದಾರೆ.
ಭಾರತ ತಂಡದ ಸ್ಟಾರ್ ಕ್ರಿಕೆಟಿಗರಾದ ರಿಷಬ್ ಪಂತ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಮೊಹಮ್ಮದ್ ಸಿರಾಜ್ ಈ ಬಾರಿ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವ ಪ್ರಮುಖ ಭಾರತೀಯ ಆಟಗಾರರಾಗಿದ್ದಾರೆ. ಇಷ್ಟು ಆಟಗಾರರು ಕೋಟಿ ಕೋಟಿ ಹಣ ಪಡೆಯುವ ವಿಶ್ವಾಸದಲ್ಲಿದ್ದಾರೆ. ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಮೆಗಾ ಹರಾಜಿನಲ್ಲಿ ಅತಿ ಹೆಚ್ಚಿನ ಹಣ ಪಡೆಯುವ ಆಟಗಾರನ ಬಗ್ಗೆ ಭವಿಷ್ಯ ನುಡಿದಿದ್ದಾರೆ.

ರಿಷಬ್ ಪಂತ್ ದುಬಾರಿ ಆಟಗಾರ
ಆಕಾಶ್ ಚೋಪ್ರಾ ಹೇಳಿಕೆ ಪ್ರಕಾರ, ರಿಷಬ್ ಪಂತ್ ಈ ಬಾರಿ ಮೆಗಾ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಹರಾಜಾಗುವ ಸಾಧ್ಯತೆ ಇದೆ. ಐಪಿಎಲ್ ಇತಿಹಾಸದಲ್ಲೇ ಪಂತ್ ದುಬಾರಿ ಆಟಗಾರನಾಗುವ ಸಾಧ್ಯತೆ ಇದೆ ಎಂದು ಭವಿಷ್ಯ ನುಡಿದಿದ್ದಾರೆ. ಪಂತ್ ಈ ಬಾರಿ ಮೆಗಾ ಹರಾಜಿನಲ್ಲಿ 25-26 ಕೋಟಿ ರೂಪಾಯಿಗೆ ಮಾರಾಟವಾಗಬಹುದು ಎಂದು ಅವರು ಹೇಳಿದ್ದಾರೆ.
2024ರ ಐಪಿಎಲ್ ಹರಾಜಿನಲ್ಲಿ 24.75 ಕೋಟಿ ರೂಪಾಯಿ ಪಡೆದಿದ್ದ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಐಪಿಎಲ್ ಇತಿಹಾಸದ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ. ಈ ಬಾರಿ ರಿಷಬ್ ಪಂತ್ ಈ ದಾಖಲೆಯನ್ನು ಮುರಿದು ದುಬಾರಿ ಆಟಗಾರನಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
2024ರ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿದ್ದ ರಿಷಬ್ ಪಂತ್ ಈ ಬಾರಿ ತಂಡದಿಂದ ದೂರವಾಗಿದ್ದಾರೆ. ನಾಯಕತ್ವ, ಸಂಭಾವನೆ ವಿಚಾರದಲ್ಲಿ ಪಂತ್ ಮತ್ತು ಫ್ರಾಂಚೈಸಿ ನಡುವೆ ಉಂಟಾದ ಮನಸ್ತಾಪವೇ ಅವರು ಹೊರಬರಲು ಕಾರಣ ಎನ್ನಲಾಗಿದೆ. ಪಂತ್‌ಗೆ ಮುನ್ನ ತಂಡದ ಕೋಚ್ ಆಗಿದ್ದ ರಿಕಿ ಪಾಂಟಿಂಗ್ ಕೂಡ ಹೊರಬಂದಿದ್ದು, ಈಗ ಪಂಜಾಬ್ ಕಿಂಗ್ಸ್ ತಂಡದ ಕೋಚ್ ಆಗಿ ನೇಮಕವಾಗಿದ್ದಾರೆ.
ಕೆಲವು ಅಂದಾಜುಗಳ ಪ್ರಕಾರ, ರಿಕಿ ಪಾಂಟಿಂಗ್ ಜೊತೆ ಪಂತ್ ಉತ್ತಮ ಬಾಂಧವ್ಯ ಹೊಂದಿದ್ದು, ಪಂಜಾಬ್ ಕಿಂಗ್ಸ್‌ಗೆ ಸೇರುವ ಸಾಧ್ಯತೆ ಹೆಚ್ಚಾಗಿದೆ. ರಿಷಬ್ ಪಂತ್ 2 ಕೋಟಿ ರೂಪಾಯಿ ಮೂಲ ಬೆಲೆ ಹೊಂದಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಆಕಾಶ್ ಚೋಪ್ರಾ, ಭಾರತೀಯ ವಿಕೆಟ್ ಕೀಪರ್ ಬ್ಯಾಟರ್ ರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲು ಹಲವು ತಂಡಗಳು ಪೈಪೋಟಿ ನಡೆಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖ್ಯವಾಗಿ ಪಂತ್‌ಗಾಗಿ ಹೋರಾಟ ಮಾಡಬಹುದು ಎಂದು ಅಂದಾಜಿಸಿದ್ದಾರೆ.
ಪಂಜಾಬ್ ಕಿಂಗ್ಸ್ ಮೆಗಾ ಹರಾಜಿಗಾಗಿ 110 ಕೋಟಿ ರೂಪಾಯಿ ಪರ್ಸ್ ಹೊಂದಿದ್ದರೆ, ಆರ್ ಸಿಬಿ 83 ಕೋಟಿ ರೂಪಾಯಿ ಪರ್ಸ್ ಹೊಂದಿದೆ. ಇಬ್ಬರ ನಡುವೆ ಪೈಪೋಟಿ ಉಂಟಾಗಲಿದ್ದು ದಾಖಲೆ ಬೆಲೆಗೆ ಪಂತ್ ಹರಾಜಾಗುವ ಸಾಧ್ಯತೆ ಇದೆ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.












Click it and Unblock the Notifications