RCB vs LSG: ಎಲ್‌ಎಸ್‌ಜಿ ವಿರುದ್ಧ ಆಡ್ತಾರಾ ಜೋಶ್ ಹೇಜಲ್‌ವುಡ್, ಫಿಲ್ ಸಾಲ್ಟ್? ದಿನೇಶ್ ಕಾರ್ತಿಕ್ ಮಹತ್ವದ ಹೇಳಿಕೆ
ಐಪಿಎಲ್ 2025ರ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು ಪ್ಲೇಆಫ್ ರೇಸ್‌ನಲ್ಲಿ ಮುಂಚೂಣಿಯಲ್ಲಿದೆ. ಮುಂದಿನ ಮೂರು ಪಂದ್ಯಗಳಲ್ಲಿ ಒಂದು ಪಂದ್ಯ ಗೆದ್ದರೂ ಆರ್ ಸಿಬಿ ಪ್ಲೇಆಫ್ ಸ್ಥಾನ ಖಚಿತವಾಗಲಿದೆ. ಮೇ 9ರಂದು ಶುಕ್ರವಾರ ನಡೆಯುವ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ತಂಡವನ್ನು ಎದುರಿಸಲಿದೆ.
ಮೇ 3ರಂದು ನಡೆದ ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಫಿಲ್ ಸಾಲ್ಟ್ ಜೊತೆಗೆ ಜೋಶ್ ಹೇಜಲ್‌ವುಡ್ ಕೂಡ ಅಲಭ್ಯರಾಗಿದ್ದರು. ಜೋಶ್ ಹೇಜಲ್‌ವುಡ್ ಬದಲಾಗಿ ಲುಂಗಿ ಎಂಗಿಡಿ ಅವಕಾಶ ಪಡೆದಿದ್ದರು. ಆರ್ ಸಿಬಿಗಾಗಿ ಆಡಿದ ಮೊದಲ ಪಂದ್ಯದಲ್ಲೇ 3 ವಿಕೆಟ್ ಪಡೆಯುವ ಮೂಲಕ ಮಿಂಚಿದ್ದರು. ಫಿಲ್ ಸಾಲ್ಟ್ ಬದಲಾಗಿ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ಪಡೆದ ಜೇಕಬ್ ಬೆಥೆಲ್ ಸಿಎಸ್‌ಕೆ ವಿರುದ್ಧ ಅರ್ಧಶತಕ ಗಳಿಸುವ ಮೂಲಕ ಸಾಲ್ಟ್ ಇಲ್ಲ ಎನ್ನುವ ಕೊರತೆ ನೀಗಿಸಿದ್ದರು.

ಜೋಶ್ ಹೇಜಲ್‌ವುಡ್ ಆರ್ ಸಿಬಿಯ ಪ್ರಮುಖ ಅಸ್ತ್ರ ಎನ್ನುವುದರಲ್ಲಿ ಎರಡು ಮಾತಿಲ್ಲ. ಮಾರಕ ಬೌಲಿಂಗ್ ಮೂಲಕ ಅವರು ಹಲವು ಪಂದ್ಯಗಳಲ್ಲಿ ಆರ್ ಸಿಬಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅವರು ಗಾಯಗೊಂಡಿರುವುದು ಸದ್ಯ ಅಭಿಮಾನಿಗಳಿಗೆ ಆತಂಕ ಮೂಡಿಸಿದೆ. ಆರ್ ಸಿಬಿಯ ಮುಂದಿನ ಪಂದ್ಯಗಳು ಮಹತ್ವವಾಗಿರುವ ಕಾರಣ ಅವರ ಲಭ್ಯತೆ ತಂಡಕ್ಕೆ ಮುಖ್ಯವಾಗಿದೆ.
ದಿನೇಶ್ ಕಾರ್ತಿಕ್ ಹೇಳಿದ್ದೇನು?
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ಬಳಿಕ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಶೇನ್ ವ್ಯಾಟ್ಸನ್ ಅವರೊಂದಿಗೆ ಮಾತನಾಡಿದ ಆರ್‌ಸಿಬಿ ಮೆಂಟರ್ ದಿನೇಶ್ ಕಾರ್ತಿಕ್, ಎಲ್‌ಎಸ್‌ಜಿ ವಿರುದ್ಧದ ಐಪಿಎಲ್ 2025 ಪಂದ್ಯಕ್ಕೂ ಮುನ್ನ ಜೋಶ್ ಹ್ಯಾಜಲ್‌ವುಡ್ ಮತ್ತು ಫಿಲ್ ಸಾಲ್ಟ್ ತಂಡಕ್ಕೆ ಮರಳುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಜೋಶ್ ಹ್ಯಾಜಲ್‌ವುಡ್ ಆರ್‌ಸಿಬಿಯ ಪ್ರಮುಖ ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಐಪಿಎಲ್ 2025 ಋತುವಿನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. , 10 ಪಂದ್ಯಗಳಿಂದ 17.27 ಸರಾಸರಿಯಲ್ಲಿ 18 ವಿಕೆಟ್ ಪಡೆದಿದ್ದಾರೆ. ಭುಜದ ನೋವಿನಿಂದಾಗಿ ಅವರು ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಆಡಲಿಲ್ಲ.
ಫಿಲ್ ಸಾಲ್ಟ್ ಈ ತಿಂಗಳ ಆರಂಭದಲ್ಲಿ ಜ್ವರದಿಂದ ಬಳಲುತ್ತಿದ್ದರು. ಅವರು ಇನ್ನೂ ಚೇತರಿಕೆಯ ಪ್ರಕ್ರಿಯೆಯಲ್ಲಿದ್ದಾರೆ. ಈ ಆವೃತ್ತಿಯಲ್ಲಿ ಒಂಬತ್ತು ಇನ್ನಿಂಗ್ಸ್‌ಗಳಲ್ಲಿ 170 ರ ಅದ್ಭುತ ಬ್ಯಾಟಿಂಗ್ ಸ್ಟ್ರೈಕ್ ರೇಟ್‌ನಲ್ಲಿ 239 ರನ್‌ಗಳನ್ನು ಗಳಿಸಿದ್ದಾರೆ. ಅವರು ಕೂಡ ಎಲ್‌ಎಸ್‌ಜಿ ವಿರುದ್ಧದ ಪಂದ್ಯಕ್ಕೆ ಮುನ್ನ ಫಿಟ್ ಆಗುವ ಸಾಧ್ಯತೆ ಇದೆ.












Click it and Unblock the Notifications