RCB Vs KKR; ಕೆಜಿಎಫ್ Vs ಆರ್‌ಆರ್‌ಆರ್ ಕದನದಲ್ಲಿ ಗೆಲ್ಲೋದ್ಯಾರು?
ಪಂಜಾಬ್ ಕಿಂಗ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಮತ್ತೊಂದು ತವರಿನ ಪಂದ್ಯಕ್ಕೆ ಸಜ್ಜಾಗಿದೆ. ಶುಕ್ರವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಬಲಿಷ್ಠ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವನ್ನು ಎದುರಿಸಲಿದೆ.
ಉದ್ಘಾಟನಾ ಪಂದ್ಯದಲ್ಲಿ ಸೋತ ಬಳಿಕ ತವರಿನ ಅಂಗಳದಲ್ಲಿ ವಾಪಸ್ ಮಾಡಿದ ಆರ್‌ಸಿಬಿ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ 4 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತ್ತು. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡಿತ್ತು.

ಮತ್ತೊಂದೆಡೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ತವರಿನಲ್ಲಿ ಆಡಿದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ 4 ರನ್‌ಗಳ ರೋಚಕ ಗೆಲುವು ಸಾಧಿಸಿದ್ದು, ಎರಡನೇ ಪಂದ್ಯವನ್ನಾಡಲು ಸಜ್ಜಾಗಿದೆ.
ಕೆಜಿಎಫ್ Vs ಆರ್‌ಆರ್‌ಆರ್
ಇದನ್ನು ಕೆಜಿಎಫ್ ಮತ್ತು ಆರ್‌ಆರ್‌ಆರ್ ನಡುವಿನ ಕದನ ಎಂದೇ ಬಿಂಬಿಸಲಾಗುತ್ತದೆ. ಆರ್‌ಸಿಬಿ ಪರವಾಗಿ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಫಾಫ್ ಡುಪ್ಲೆಸಿಸ್ ಸ್ಟಾರ್ ಆಟಗಾರರಾದರೆ, ಕೆಕೆಆರ್ ಪರವಾಗಿ ಮೊದಲ ಪಂದ್ಯದಲ್ಲಿ ಮಿಂಚಿದ್ದ ರಸೆಲ್, ರಿಂಕು ಸಿಂಗ್ ಮತ್ತು ರಮಣ್‌ದೀಪ್ ಸಿಂಗ್ ಪ್ರಮುಖ ಬ್ಯಾಟಿಂಗ್ ಅಸ್ತ್ರವಾಗಿದ್ದಾರೆ.
ಹೆಡ್ ಟು ಹೆಡ್ ಹೇಗಿದೆ?
ಆರ್ ಸಿಬಿ ಮತ್ತು ಕೆಕೆಆರ್ ಐಪಿಎಲ್‌ನಲ್ಲಿ ಈವರೆಗೂ 32 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು ಕೆಕೆಆರ್ ತಂಡ 18 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಆರ್ ಸಿಬಿ 14 ಪಂದ್ಯಗಳಲ್ಲಿ ಮಾತ್ರ ಗೆದ್ದಿದೆ. 2023ರ ಐಪಿಎಲ್‌ನಲ್ಲಿ ಕೆಕೆಆರ್ ಆರ್ ಸಿಬಿ ವಿರುದ್ಧ ಆಡಿದ ಎರಡೂ ಪಂದ್ಯಗಳಲ್ಲಿ ಗೆದ್ದು ಬೀಗಿದೆ.
ಆಂಡ್ರೆ ರಸೆಲ್, ರಿಂಕು ಸಿಂಗ್, ಶ್ರೇಯಸ್ ಅಯ್ಯರ್, ಫಿಲ್ ಸಾಲ್ಟ್ ಕೆಕೆಆರ್ ತಂಡದ ಪ್ರಮುಖ ಅಸ್ತ್ರವಾಗಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಮಿಚೆಲ್ ಸ್ಟಾರ್ಕ್, ಸ್ಪಿನ್ನರ್ ಸುನಿಲ್ ನರೇನ್, ವೇಗಿ ಹರ್ಷಿತ್ ರಾಣಾ ಮೇಲೆ ಹೆಚ್ಚಾಗಿ ಅವಲಂಬನೆಯಾಗಿದೆ.
ಕೆಜಿಎಫ್ ಆಡಲೇಬೇಕು
ಕೆಕೆಆರ್ ತಂಡ ಬಲಿಷ್ಠವಾಗಿದೆ. ಆರ್‌ಸಿಬಿ ತಂಡದ ಅಗ್ರ ಕ್ರಮಾಂಕದ ಬ್ಯಾಟರ್ ಗಳು ಸ್ಫೋಟಕ ಇನ್ನಿಂಗ್ಸ್ ಆಡಿ ಬೃಹತ್ ಮೊತ್ತ ಕಲೆಹಾಕಿದರೆ ಅಥವಾ ಆರ್‌ಸಿಬಿ ಬೌಲಿಂಗ್ ಪಡೆ ಕೆಕೆಆರ್ ತಂಡವನ್ನು ಕಡಿಮೆ ರನ್‌ಗಳಿಗೆ ಕಟ್ಟಿಹಾಕಿದರೆ ಮಾತ್ರ ಆರ್ ಸಿಬಿ ಗೆಲುವು ಸುಲಭವಾಗಲಿದೆ.
ಉಭಯ ತಂಡಗಳ ಸಂಭಾವ್ಯ ಆಡುವ ಬಳಗ
ಆರ್‌ಸಿಬಿ: ಫಾಫ್ ಡು ಪ್ಲೆಸಿಸ್ (ನಾಯಕ). ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮೆರಾನ್ ಗ್ರೀನ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಮಯಾಂಕ್ ದಾಗರ್, ಮೊಹಮ್ಮದ್ ಸಿರಾಜ್, ಯಶ್ ದಯಾಳ್, ಅಲ್ಜಾರಿ ಜೋಸೆಫ್/ಲಾಕಿ ಫರ್ಗ್ಯುಸನ್.
ಕೆಕೆಆರ್: ಫಿಲ್ ಸಾಲ್ಟ್, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ನಿತೀಶ್ ರಾಣಾ, ಆಂಡ್ರೆ ರಸೆಲ್, ರಿಂಕು ಸಿಂಗ್, ರಮಣದೀಪ್ ಸಿಂಗ್, ಸುನಿಲ್ ನರೇನ್, ಮಿಚೆಲ್ ಸ್ಟಾರ್ಕ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ.












Click it and Unblock the Notifications