RCB vs GT: ರಾಯಚೂರಿನಲ್ಲಿ ಚಿನ್ನಸ್ವಾಮಿ ಸ್ಟೇಡಿಯಂ ಮಾಡಿಸಿ ಎಂದ ವಿಲ್ ಜ್ಯಾಕ್ಸ್; ಕಾರಣವೇನು?
ವಿಲ್ ಜ್ಯಾಕ್ಸ್ ಸದ್ಯ ಆರ್‌ಸಿಬಿಯ ಹೊಸ ಸ್ಫೋಟಕ ಬ್ಯಾಟರ್. ವಿಶ್ವದ ವಿವಿಧ ಲೀಗ್‌ಗಳಲ್ಲಿ ಅಬ್ಬರಿಸಿದ್ದ ಇಂಗ್ಲೆಂಡ್‌ನ ಈ ಸ್ಫೋಟಕ ಬ್ಯಾಟರ್ ಐಪಿಎಲ್‌ನಲ್ಲಿ ಕೂಡ ತಾವೆಂತ ಆಟಗಾರ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ 41 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಆರ್ ಸಿಬಿಗೆ ಭರ್ಜರಿ ಗೆಲುವು ತಂದುಕೊಟ್ಟಿದ್ದರು.
ಈಗ ವಿಲ್ ಜ್ಯಾಕ್ಸ್ ರಾಯಚೂರಿನಲ್ಲಿ ಚಿನ್ನಸ್ವಾಮಿ ಸ್ಟೇಡಿಯಂ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಅರೆ, ವಿಲ್ ಜ್ಯಾಕ್ಸ್‌ಗೆ ರಾಯಚೂರು ಹೇಗೆ ಗೊತ್ತು, ಅಷ್ಟಕ್ಕೂ ರಾಯಚೂರಿನಲ್ಲಿ ಯಾಕೆ ಚಿನ್ನಸ್ವಾಮಿ ಸ್ಟೇಡಿಯಂ ಬೇಕು ಎಂದುಕೊಳ್ಳುತ್ತೀರಾ? ಇಲ್ಲಿದೆ ಉತ್ತರ.

ಡ್ಯಾನಿಶ್ ಸೇಠ್ ಜೊತೆಗಿನ ಮಾತುಕತೆಯಲ್ಲಿ ವಿಲ್ ಜ್ಯಾಕ್ಸ್ ಹಲವು ತಮಾಷೆಯ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಡ್ಯಾನಿಶ್ ಸೇಠ್ ವಿಲ್ ಜ್ಯಾಕ್ಸ್‌ಗೆ ನೀವ್ಯಾಕೆ ಅಷ್ಟೊಂದು ಸಿಕ್ಸರ್ ಸಿಡಿಸಿದಿರಿ ಎಂದು ಕೇಳಿದ್ದಕ್ಕೆ, ಬಿಸಿಲು ಹೆಚ್ಚಾಗಿತ್ತು ಎಂದು ಉತ್ತರ ನೀಡಿದ್ದಾರೆ.
ಅದನ್ನು ಕೇಳಿದ ಡ್ಯಾನಿಶ್ ಸೇಠ್ ಹಾಗಿದ್ದರೆ ಬೆಂಗಳೂರಿನಲ್ಲಿರುವ ಚಿನ್ನಸ್ವಾಮಿ ಕ್ರೀಡಾಂಗಣವನ್ನು ರಾಯಚೂರಿನಲ್ಲಿ ನಿರ್ಮಾಣ ಮಾಡಬೇಕು ಎಂದರು. ಹಾಗಂತ ಸಂಬಂಧಪಟ್ಟವರಿಗೆ ಮನವಿ ಮಾಡುವಂತೆ ಕೇಳಿದರು, ವಿಲ್ ಜ್ಯಾಕ್ಸ್ ರಾಯಚೂರಿನಲ್ಲಿ ಚಿನ್ನಸ್ವಾಮಿ ಸ್ಟೇಡಿಯಂ ಮಾಡಿ ಎಂದು ಮನವಿ ಮಾಡಿದರು.
ರಾಯಚೂರಿನಲ್ಲಿ ಕೂಡ ಹೆಚ್ಚು ಬಿಸಿಲು ಇರುವ ಕಾರಣ, ಅಲ್ಲೂ ಸಿಕ್ಸರ್ ಸಿಡಿಸಲು ಸುಲಭ ಎನ್ನುವ ಅರ್ಥದಲ್ಲಿ ಡ್ಯಾನಿಶ್ ಸೇಠ್ ವಿಲ್ ಜ್ಯಾಕ್ಸ್ ಬಳಿ ಈ ಮನವಿ ಮಾಡಿಸಿದರು. ಆದರೆ ಇದು ತಮಾಷೆಗಾಗಿ ಮಾತ್ರ.
ಬೆಂಗಳೂರಿನಲ್ಲಿದ್ದಾರೆ ವಿಲ್ ಜ್ಯಾಕ್ಸ್ ಗೆಳತಿ
ವಿಲ್ ಜ್ಯಾಕ್ಸ್ ಗೆಳತಿ ಕೂಡ ಸದ್ಯ ಭಾರತದಲ್ಲಿದ್ದು, ಜ್ಯಾಕ್ಸ್ ಜೊತೆಗೆ ಪ್ರಯಾಣ ಮಾಡುತ್ತಿದ್ದಾರೆ. ಆರ್ ಸಿಬಿ ಮುಂದಿನ ಪಂದ್ಯವನ್ನು ಬೆಂಗಳೂರಿನಲ್ಲಿ ಆಡುತ್ತಿದ್ದು, ವಿಲ್ ಜ್ಯಾಕ್ಸ್ ಗೆಳತಿ ಅನಾ ಬ್ರುಮ್‌ವೆಲ್ ಮೈದಾನದಲ್ಲಿ ಹಾಜರಿದ್ದು, ಗೆಳೆಯನಿಗೆ ಬೆಂಬಲ ನೀಡುತ್ತಿದ್ದಾರೆ.
ಆರ್ ಸಿಬಿ ಬಗ್ಗೆ ಅಭಿಮಾನ
ವಿಲ್ ಜ್ಯಾಕ್ಸ್‌ಗೆ ಆರ್ ಸಿಬಿ ಮೇಲೆ ವಿಶೇಷ ಅಭಿಮಾನ ಶುರುವಾಗಿದೆ. ವಿಶೇಷವಾಗಿ ಅಷ್ಟು ಪಂದ್ಯಗಳನ್ನು ಸೋತರೂ ಅಭಿಮಾನಿಗಳು ನೀಡುತ್ತಿರುವ ಬೆಂಬಲ ನೋಡಿ ಮನಸೋತಿದ್ದಾರೆ. ಯಾವುದೇ ಕ್ರೀಡಾಂಗಣದಲ್ಲಿ ಆಡಿದರೂ ಅದು ತವರಿನ ಪಂದ್ಯವೇ ಅನಿಸುತ್ತದೆ, ಯಾಕೆಂದರೆ ಯಾವದೇ ಮೈದಾನದಲ್ಲೂ ಅರ್ಧದಷ್ಟು ಪ್ರೇಕ್ಷಕರು ಆರ್ ಸಿಬಿ ತಂಡಕ್ಕೆ ಬೆಂಬಲ ನೀಡುತ್ತಾರೆ ಎಂದಿದ್ದಾರೆ.
ವಿಶೇಷ ದಾಖಲೆ
ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ 41 ಎಸೆತಗಳಲ್ಲೇ ಶತಕ ಸಿಡಿಸಿದ ವಿಲ್ ಜ್ಯಾಕ್ಸ್ ಹೊಸ ದಾಖಲೆ ಬರೆದರು. ಆರ್ ಸಿಬಿ ಪರ ಎರಡನೇ ಶತಕ ಸಿಡಿಸಿದ್ದು ಒಂದಾದರೆ, ಮೊದಲ 50 ರನ್‌ಗಳನ್ನು 31 ಎಸೆತಗಳಲ್ಲಿ ಪೂರ್ಣಗೊಳಿಸಿದರೆ, 50 ರಿಂದ 100 ರನ್ ಗಳಿಸಲು ಕೇವಲ 10 ಎಸೆತ ತೆಗೆದುಕೊಂಡರು. ಕ್ರಿಸ್ ಗೇಲ್ ಅವರ ದಾಖಲೆಯನ್ನು ಮುರಿದು, ಹೊಸ ದಾಖಲೆ ಬರೆದರು.
ಐಪಿಎಲ್‌ನಲ್ಲಿ ಅಬ್ಬರಿಸಿದ ಬಳಿಕ ವಿಲ್ ಜ್ಯಾಕ್ಸ್ ಟಿ20 ವಿಶ್ವಕಪ್‌ನಲ್ಲಿ ಮಿಂಚಲು ಸಜ್ಜಾಗಲಿದ್ದಾರೆ. ಜೂನ್ 2 ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್ ಪಂದ್ಯಾವಳಿಗೆ ಇಂಗ್ಲೆಂಡ್ ತಂಡಕ್ಕೆ ಇಂಗ್ಲೆಂಡ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಇಂದು (ಶನಿವಾರ) ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ ಸಿಬಿ ಮತ್ತೊಮ್ಮೆ ಗುಜರಾತ್ ಟೈಟಾನ್ಸ್ ಅನ್ನು ಎದುರಿಸಲಿದ್ದು, ವಿಲ್ ಜ್ಯಾಕ್ಸ್ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. ಎರಡೂ ತಂಡಗಳಿಗೂ ಇದು ಮಾಡು ಇಲ್ಲವೆ ಮಡಿ ಪಂದ್ಯವಾಗಿದೆ.












Click it and Unblock the Notifications