RCB: ಈ ಮೂವರು ಮುಂಬೈ ಇಂಡಿಯನ್ಸ್ ಆಟಗಾರರ ಮೇಲೆ ಕಣ್ಣಿಟ್ಟಿದೆ ಆರ್‌ಸಿಬಿ
ಐಪಿಎಲ್ ಮೆಗಾ ಹರಾಜಿಗೆ ಇನ್ನೂ ಕೆಲವು ತಿಂಗಳು ಮಾತ್ರ ಬಾಕಿ ಇದೆ. ಶೀಘ್ರದಲ್ಲೇ ತಂಡಗಳು ಕೂಡ ಬಿಡುಗಡೆ ಮಾಡಿದ, ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಲಿವೆ. ಪ್ರಮುಖ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲು ವಿವಿಧ ಫ್ರಾಂಚೈಸಿಗಳು ಯೋಜಿಸುತ್ತಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಪ್ರಮುಖ ಆಟಗಾರರ ಮೇಲೆ ಕಣ್ಣಿಟ್ಟಿದೆ.
ಮೊದಲ ಟ್ರೋಫಿ ಗೆಲ್ಲಲು ಹೆಣಗಾಡುತ್ತಿರುವ ಆರ್ ಸಿಬಿ ಈ ಬಾರಿ ಬಲಿಷ್ಠ ತಂಡವನ್ನು ಕಟ್ಟುವ ಯೋಜನೆಯಲ್ಲಿದೆ. ದಿನೇಶ್ ಕಾರ್ತಿಕ್ ತಂಡದ ಮೆಂಟರ್ ಮತ್ತು ಬ್ಯಾಟಿಂಗ್ ಕೋಚ್ ಆಗಿ ನೇಮಕವಾಗಿದ್ದು, ಹರಾಜಿನ ವಿಚಾರದಲ್ಲಿ ಅವರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ.

ಅದರಲ್ಲೂ ವಿವಿಧ ಫ್ರಾಂಚೈಸಿಗಳಲ್ಲಿ ಪ್ರಮುಖ ಆಟಗಾರರು ತಂಡದಿಂದ ಹೊರಬರುವ ಸೂಚನೆ ಕೊಟ್ಟಿದ್ದು, ಆರ್ ಸಿಬಿ ಅಂತಹ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲು ಯೋಜಿಸುತ್ತಿದೆ. ಅದರಲ್ಲೂ ಮುಂಬೈ ಇಂಡಿಯನ್ಸ್ ತಂಡದ ಈ ಮೂವರು ಆಟಗಾರರ ಮೇಲೆ ಹೆಚ್ಚಿನ ಗಮನ ಇರಿಸಿದೆ.
ರೋಹಿತ್ ಶರ್ಮಾ
ಐಪಿಎಲ್‌ನ ಇತಿಹಾಸದಲ್ಲಿ ಯಶಸ್ವಿ ನಾಯಕರಲ್ಲಿ ರೋಹಿತ್ ಶರ್ಮಾ ಪ್ರಮುಖವಾಗಿದ್ದಾರೆ. ಅವರ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ 5 ಬಾರಿ ಚಾಂಪಿಯನ್ ಆಗಿದೆ, ಆದರೆ 2024ರ ಐಪಿಎಲ್‌ಗೆ ಮುನ್ನ ಅವರನ್ನು ನಾಯಕನ ಸ್ಥಾನದಿಂದ ಕೆಳಗಿಳಿಸಿದ್ದು, ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವ ವಹಿಸಲಾಗಿದೆ. ಇದು ರೋಹಿತ್ ಶರ್ಮಾ ಅವರಿಗೂ ಬೇಸರ ತರಿಸಿದ್ದು, ಈ ಬಾರಿ ಅವರು ತಂಡದಿಂದ ಹೊರ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.
ಒಂದು ವೇಳೆ ರೋಹಿತ್ ಶರ್ಮಾ ಹರಾಜಿಗೆ ಬಂದರೆ ಆರ್ ಸಿಬಿ ಅವರಿಗೆ ಬಿಡ್ ಮಾಡುವ ಸಾಧ್ಯತೆ ಇದೆ. ವಿರಾಟ್ ಕೊಹ್ಲಿ ಇರುವುದರಿಂದ ರೋಹಿತ್ ಶರ್ಮಾ ಕೂಡ ತಂಡ ಸೇರಿದರೆ ತಂಡದ ಬ್ರಾಂಡ್ ವ್ಯಾಲ್ಯೂ ಕೂಡ ಹೆಚ್ಚಾಗಲಿದೆ. ರೋಹಿತ್ ಅವರಿಗೆ ನಾಯಕತ್ವ ನೀಡುವ ಅವಕಾಶ ಕೂಡ ಇದೆ.
ಸೂರ್ಯಕುಮಾರ್ ಯಾದವ್
ಮುಂಬೈ ಇಂಡಿಯನ್ಸ್ ತಂಡದ ಸ್ಫೊಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಕೂಡ ತಂಡವನ್ನು ತೊರೆಯುವ ಸಾಧ್ಯತೆ ಇದೆ. ಆರ್ ಸಿಬಿ ತಂಡವು ನಾಯಕನಿಗೆ ಹುಡುಕಾಟ ನಡೆಸುತ್ತಿದ್ದು, ಸೂರ್ಯಕುಮಾರ್ ಅವರಿಗೆ ನಾಯಕತ್ವದ ಆಫರ್ ಕೂಡ ಕೊಡಬಹುದು. ಮಧ್ಯಮ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟರ್ ಆಗಿರುವ ಅವರು, ಇತ್ತೀಚೆಗೆ ಭಾರತ ಟಿ20 ತಂಡಕ್ಕೆ ಕೂಡ ನಾಯಕರಾಗಿದ್ದಾರೆ. ಒಂದು ವೇಳೆ ಸೂರ್ಯಕುಮಾರ್ ಯಾದವ್ ಮೆಗಹರಾಜಿನಲ್ಲಿ ನೋಂದಾಯಿಸಿಕೊಂಡರೆ ಹಲವು ತಂಡಗಳು ಅವರಿಗಾಗಿ ಪೈಪೋಟಿ ನಡೆಸಬಹುದು.
ಹಾರ್ದಿಕ್ ಪಾಂಡ್ಯ
ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ವಹಿಸಿಕೊಂಡ ಬಳಿಕ ತಂಡದ ಪ್ರದರ್ಶನ ಉತ್ತಮವಾಗಿರಲಿಲ್ಲ. 2024ರ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ 10ನೇ ಸ್ಥಾನಕ್ಕೆ ಕುಸಿದಿತ್ತು, ಫ್ರಾಂಚೈಸಿ ಏನಾದರೂ ಪಾಂಡ್ಯ ಅವರನ್ನು ನಾಯಕತ್ವದಿಂದ ಕೆಳಗಿಳಿಸಲು ಯೋಜಿಸಿದರೆ, ಅವರು ತಂಡವನ್ನು ಬದಲಾಯಿಸಲು ಚಿಂತಿಸಬಹುದು. ಆಲ್‌ರೌಂಡರ್ ಆಗಿರುವ ಪಾಂಡ್ಯ, ಆರ್ ಸಿಬಿ ನಾಯಕನ ಜವಾಬ್ದಾರಿ ಕೂಡ ವಹಿಸಿಕೊಳ್ಳಬಹುದು.












Click it and Unblock the Notifications