RCB: ಹೊಡೆದ ಎರಡೂ ಸಿಕ್ಸರ್ ಸ್ಟೇಡಿಯಂನಿಂದ ಆಚೆ! ಐಪಿಎಲ್‌ಗೆ ಮುನ್ನ ಆರ್‌ಸಿಬಿ ಬ್ಯಾಟರ್ ಎಚ್ಚರಿಕೆ
ಐಪಿಎಲ್ 2025ರ ಆವೃತ್ತಿಯ ಆರಂಭಕ್ಕೆ ಇನ್ನು 4 ದಿನ ಮಾತ್ರ ಬಾಕಿ ಉಳಿದಿದೆ. ಎರಡು ತಿಂಗಳು ಕ್ರಿಕೆಟ್ ಅಭಿಮಾನಿಗಳಿಗೆ ಚುಟುಕು ಕ್ರಿಕೆಟ್ ಸಂಭ್ರಮ, ಮನರಂಜನೆ ಸಿಗಲಿದೆ. 10 ಫ್ರಾಂಚೈಸಿಗಳು ಒಂದು ಪ್ರತಿಷ್ಠಿತ ಪ್ರಶಸ್ತಿಗಾಗಿ ಸೆಣೆಸಲು ಸಜ್ಜಾಗಿವೆ. ಎಲ್ಲಾ ತಂಡಗಳು ಈಗಾಗಲೇ ಅಭ್ಯಾಸ ಆರಂಭಿಸಿವೆ. ಸೋಮವಾರ ಆರ್ ಸಿಬಿ ತಂಡದ ಅನ್‌ಬಾಕ್ಸ್ ಕಾರ್ಯಕ್ರಮ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದೆ.
ಸಾಮಾನ್ಯವಾಗಿ ಐಪಿಎಲ್ ಪಂದ್ಯಗಳಿಗೆ ಜನ ದುಡ್ಡು ಕೊಟ್ಟು ಟಿಕೆಟ್ ಖರೀದಿ ಮಾಡಿ ಸ್ಟೇಡಿಯಂಗೆ ಹೋಗ್ತಾರೆ. ಆದರೆ ಆರ್ ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮಕ್ಕೂ ಟಿಕೆಟ್ ಇದ್ದರೂ ಕೂಡ ಇಡೀ ಮೈದಾನ ಭರ್ತಿಯಾಗಿದ್ದು ತಂಡದ ಜನಪ್ರಿಯತೆಗೆ ಸಾಕ್ಷಿಯಾಗಿದೆ. ದುಡ್ಡು ಕೊಟ್ಟು ಬಂದ ಅಭಿಮಾನಿಗಳಿಗೂ ಭರಪೂರ ಮನರಂಜನೆ ಸಿಕ್ಕಿದೆ.

ಸಿಕ್ಸರ್ ಹೊಡೆಯುವ ಸ್ಪರ್ಧೆ
ಅನ್‌ಬಾಕ್ಸ್ ಕಾರ್ಯಕ್ರಮದಲ್ಲಿ ಹಲವು ಟಾಸ್ಕ್‌ಗಳನ್ನು ಇಡಲಾಗಿತ್ತು. ಆಟಗಾರರ ಅಭ್ಯಾಸ, ಬೌಲಿಂಗ್ ಅಭ್ಯಾಸ, ಸಿಕ್ಸರ್ ಹೊಡೆಯುವ ಸ್ಪರ್ಧೆಗಳು ಗಮನ ಸೆಳೆದವು. ಸಿಕ್ಸರ್ ಬಾರಿಸುವ ಸ್ಪರ್ಧೆಯಲ್ಲಿ ಟಿಮ್ ಡೇವಿಡ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಮನೋಜ್ ಭಾಂಡಗೆ ಲಿಯಾಮ್ ಲಿವಿಂಗ್ ಸ್ಟೋನ್ ಸೇರಿದಂತೆ ಅನೇಕ ಆಟಗಾರರು ಪಾಲ್ಗೊಂಡಿದ್ದರು. ಇವರೆಲ್ಲಾ ಭರ್ಜರಿ ಸಿಕ್ಸರ್ ಬಾರಿಸುವ ಮೂಲಕ ಗಮನ ಸೆಳೆದರು. ಆದರೆ ಸ್ಫೋಟಕ ಆಲ್‌ರೌಂಡರ್ ರೊಮಾರಿಯೋ ಶೆಫರ್ಡ್ ಹೊಡೆದ ಸಿಕ್ಸರ್ ಗಳು ನೆರೆದಿದ್ದವರನ್ನು ದಂಗಾಗುವಂತೆ ಮಾಡಿದವು.
ರೊಮಾರಿಯೋ ಶೆಫರ್ಡ್ ಬಾರಿಸಿದ ಮೊದಲ ಸಿಕ್ಸರ್ ಚಿನ್ನಸ್ವಾಮಿ ಸ್ಟೇಡಿಯಂನಿಂದ ಆಚೆ ಹೋಯಿತು. ಬಳಿಕ ಇತರ ಆಟಗಾರರು ಸಿಕ್ಸರ್ ಬಾರಿಸಿದರು, ನೆರೆದಿದ್ದ ಅಭಿಮಾನಿಗಳು ರೊಮಾರಿಯೋ ಶೆಫರ್ಡ್‌ಗೆ ಮತ್ತೊಂದು ಅವಕಾಶ ನೀಡುವಂತೆ ಕಿರುಚಿದರು, ಬಳಿಕ ಬಂದ ರೊಮಾರಿಯೋ ಶೆಫರ್ಡ್ ಎರಡನೇ ಸಿಕ್ಸರ್ ಬಾರಿಸಿದರು ಇದು ಕೂಡ ಕ್ರೀಡಾಂಗಣದಿಂದ ಹೊರಗಡೆ ಹೋಯಿತು.
ವೆಸ್ಟ್ ಇಂಡೀಸ್ ಸ್ಫೋಟಕ ಆಲ್‌ರೌಂಡರ್
ರೊಮಾರಿಯೋ ಶೆಫರ್ಡ್ ವೆಸ್ಟ್ ಇಂಡೀಸ್ ತಂಡದ ಸ್ಫೋಟಕ ಆಲ್‌ರೌಂಡರ್. ಕಳೆದ ವರ್ಷ ಅವರು ಮುಂಬೈ ಇಂಡಿಯನ್ಸ್ ತಂಡಕ್ಕಾಗಿ ಆಡಿದ್ದರು. 164 ಟಿ20 ಪಂದ್ಯಗಳಲ್ಲಿ 147 ಇನ್ನಿಂಗ್ಸ್‌ಗಳಲ್ಲಿ 158 ವಿಕೆಟ್ ಪಡೆದುಕೊಂಡಿದ್ದಾರೆ. 117 ಇನ್ನಿಂಗ್ಸ್‌ಗಳಲ್ಲಿ 1656 ರನ್ ಗಳಿಸಿದ್ದಾರೆ. 148.52 ಅವರ ಸ್ಟ್ರೈಕ್‌ರೇಟ್ ಆಗಿದೆ.
ಟಿಮ್ ಡೇವಿಡ್, ಲಿಯಾಮ್ ಲಿವಿಂಗ್‌ಸ್ಟೋನ್ ತಂಡದ ಮೊದಲ ಆಯ್ಕೆಯಾಗಿದ್ದು ಒಂದು ವೇಳೆ ಅವರಿಂದ ಉತ್ತಮ ಪ್ರದರ್ಶನ ಬರದೇ ಇದ್ದರೆ ರೊಮಾರಿಯೋ ಶೆಫರ್ಡ್ ಅವರಿಗೆ ತಂಡದಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ.
ಮಾರ್ಚ್ 22ರಂದು ನಡೆಯುವ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಆರ್ ಸಿಬಿ ಹಾಲಿ ಚಾಂಪಿಯನ್ ಕೆಕೆಆರ್ ವಿರುದ್ಧ ಸೆಣೆಸಲಿದ್ದು, ಯಾವ ಪ್ಲೇಯಿಂಗ್ ಇಲೆವೆನ್ ಜೊತೆ ಕಣಕ್ಕಿಳಿಯಲಿದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಹೊಸ ನಾಯಕ ರಜತ್ ಪಟಿದಾರ್ ತಂಡವನ್ನು ಹೇಗೆ ಮುನ್ನಡೆಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.












Click it and Unblock the Notifications