RCB: ರಿಷಬ್ ಪಂತ್ ಬಗ್ಗೆ ಯೋಚಿಸಬೇಡಿ! ಆರ್‌ಸಿಬಿಗೆ ಮಹತ್ವದ ಸಲಹೆ ಕೊಟ್ಟ ಎಬಿ ಡಿವಿಲಿಯರ್ಸ್
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಮೆಗಾ ಹರಾಜಿಗೆ ದಿನಗಣನೆ ಶುರುವಾಗಿದೆ. ಎಲ್ಲಾ 10 ತಂಡಗಳು ಬಲಿಷ್ಠ ತಂಡವನ್ನು ಕಟ್ಟಲು ತಮ್ಮದೇ ಲೆಕ್ಕಾಚಾರ ಹಾಕಿಕೊಳ್ಳುತ್ತಿವೆ. ರಿಷಬ್ ಪಂತ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ ಈ ಬಾರಿ ಮೆಗಾ ಹರಾಜಿನ ಪ್ರಮುಖ ಆಕರ್ಷಣೆಯಾಗಿದ್ದಾರೆ. ಭಾರತೀಯ ಆಟಗಾರರ ಮೇಲೆ ಎಲ್ಲಾ ಫ್ರಾಂಚೈಸಿಗಳು ಕಣ್ಣಿಟ್ಟಿವೆ. ಆರ್ ಸಿಬಿ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ತಮ್ಮ ಮಾಜಿ ತಂಡಕ್ಕೆ ಮಹತ್ವದ ಸಲಹೆಗಳನ್ನು ಕೊಟ್ಟಿದ್ದಾರೆ.
ಈ ಬಾರಿ ಮೆಗಾ ಹರಾಜಿನಲ್ಲಿ ರಿಷಬ್ ಪಂತ್‌ಗೆ ಭಾರಿ ಬೇಡಿಕೆ ಉಂಟಾಗುವ ಸಾಧ್ಯತೆ ಇದೆ ಎಂದು ಎಬಿಡಿ ಹೇಳಿದ್ದು, ಅವರು ಐಪಿಎಲ್‌ನ ದುಬಾರಿ ಆಟಗಾರರಾಗುವ ಸಾಧ್ಯತೆ ಇದ್ದು, ಆರ್ ಸಿಬಿ ಅವರಿಗೆ ದೊಡ್ಡ ಮೊತ್ತ ಕೊಡುವುದು ಕಷ್ಟವಾಗಬಹುದು ಎಂದು ಹೇಳಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಈ ಬಾರಿ ಐಪಿಎಲ್ ಹರಾಜಿನಲ್ಲಿ ರಿಷಬ್ ಪಂತ್‌ರನ್ನು ಖರೀದಿ ಮಾಡುತ್ತದೆ ಎನ್ನುವ ವರದಿಯನ್ನು ತಳ್ಳಿ ಹಾಕಿದ್ದಾರೆ. ಮೆಗಾ ಹರಾಜಿನಲ್ಲಿ ರಿಷಬ್ ಪಂತ್‌ಗಾಗಿ ಸಾಕಷ್ಟು ಪೈಪೋಟಿ ನಡೆಯುವ ಸಾಧ್ಯತೆ ಇದ್ದು, ಅಷ್ಟೊಂದು ಮೊತ್ತ ನೀಡಿ ಆರ್ ಸಿಬಿ ಅವರನ್ನು ಖರೀದಿ ಮಾಡುವುದು ಕಷ್ಟ ಎಂದಿದ್ದಾರೆ.
ಪಂಜಾಬ್ ಕಿಂಗ್ಸ್‌ಗೆ ಪಂತ್
ರಿಷಬ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾಜಿ ಮುಖ್ಯ ಕೋಚ್ ಆಗಿದ್ದ ರಿಕಿ ಪಾಂಟಿಂಗ್ ಅವರ ಜೊತೆ ಹೋಗಬಹುದು ಎಂದಿದ್ದಾರೆ. ರಿಕಿ ಪಾಂಟಿಂಗ್ ಸದ್ಯ ಪಂಜಾಬ್ ಕಿಂಗ್ಸ್ ತಂಡದ ಮುಖ್ಯ ಕೋಚ್ ಆಗಿದ್ದು, ಪಂತ್ ಪಂಜಾಬ್ ಕಿಂಗ್ಸ್ ಪಾಲಾಗುವ ಸಾಧ್ಯತೆ ಇದೆ ಎಂದು ಹೇಳಿದರು. ಪಂಜಾಬ್ ಕಿಂಗ್ಸ್ ಬಳಿಕ 110.5 ಕೋಟಿ ರೂಪಾಯಿಗಳ ಪರ್ಸ್ ಹೊಂದಿದ್ದು, ಅವರು ಪಂತ್‌ಗಾಗಿ ದುಬಾರಿ ಹಣವನ್ನು ನೀಡಲು ಸಿದ್ಧರಿದ್ದಾರೆ ಎಂದರು.
ಆರ್ ಸಿಬಿ ರಿಷಬ್ ಪಂತ್‌ರನ್ನು ಖರೀದಿ ಮಾಡುವುದು ಅಸಂಭವವಾಗಿದೆ ಎಂದು ನಾನು ಭಾವಿಸುತ್ತೇನೆ. ಪಂತ್‌ಗಾಗಿ ಎಲ್ಲಾ ತಂಡಗಳು ಪೈಪೋಟಿ ನಡೆಸುವ ಸಾಧ್ಯತೆ ಇದೆ. ನನ್ನ ಪ್ರಕಾರ ಪಂಜಾಬ್ ಕಿಂಗ್ಸ್ ರಿಷಬ್ ಪಂತ್‌ಗಾಗಿ ಎಷ್ಟು ದುಬಾರಿಯಾದರೂ ಹೋಗುತ್ತದೆ. ಪಂಜಾಬ್ ಕಿಂಗ್ಸ್ ತಂಡಕ್ಕೆ ಸೇರುವ ಸಾಧ್ಯತೆ ಹೆಚ್ಚಾಗಿದೆ ಎಂದು ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ತಿಳಿಸಿದ್ದಾರೆ.
ಪಂತ್ ಹೊರತುಪಡಿಸಿ ಕೆಎಲ್ ರಾಹುಲ್ ಕೂಡ ದೊಡ್ಡ ಮೊತ್ತಕ್ಕೆ ಹರಾಜಾಗುವ ಸಾಧ್ಯತೆ ಇದೆ ಎಂದು ಹೇಳಿದರು. ಆರ್‌ಸಿಬಿ ಕೆಎಲ್ ರಾಹುಲ್‌ರನ್ನು ಖರೀದಿ ಮಾಡಲು ಪ್ರಯತ್ನಿಸಬೇಕು ಎಂದು ಸಲಹೆ ಕೊಟ್ಟರು. ಮುಖ್ಯವಾಗಿ ಗುಣಮಟ್ಟ ಬೌಲರ್ ಗಳು ಮತ್ತು ಸ್ಥಳೀಯ ಆಟಗಾರರನ್ನು ಖರೀದಿ ಮಾಡಲು ಆರ್ ಸಿಬಿ ಯೋಜಿಸಬೇಕು ಎಂದು ಹೇಳಿದ್ದಾರೆ.
ಆರ್ ಸಿಬಿಗೆ ಬೌಲಿಂಗ್ ಎಂದಿಗೂ ಸಮಸ್ಯೆಯಾಗಿದೆ. ವಿಶ್ವ ದರ್ಜೆಯ ಸ್ಪಿನ್ನರ್ ಗಳು ಮತ್ತು ಕೆಲವು ಸ್ಥಳೀಯ ಆಟಗಾರರು ತಂಡದಲ್ಲಿರಬೇಕು ಎಂದು ನಾನು ಬಯಸುತ್ತೇನೆ. ಕೆಲವು ಬೆಂಗಳೂರಿನ ಆಟಗಾರರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.












Click it and Unblock the Notifications