RCB Final: ಮದುವೆ ಮಂಟಪದಲ್ಲೇ ಆರ್‌ಸಿಬಿ ಜೆರ್ಸಿ ಹಿಡಿದು ಶುಭಹಾರೈಸಿದ ನೇಪಾಳಿ ನವಜೋಡಿ: ಭಾರೀ ವೈರಲ್
RCB Final: ಕೆಲವೇ ಕ್ಷಣಗಳಲ್ಲಿ ಐಪಿಎಲ್ 2025 ಫೈನಲ್ ಆರಂಭ ಆಗಲಿದೆ. ಈ ಹಿನ್ನೆಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಶುಭಹಾರೈಕೆಗಳ ಸುರಿಮಳೆಯೇ ಹರಿದುಬರುತ್ತಿದೆ. ಜೊತೆಗೆ ಅಭಿಮಾನಿಗಳು ವಿಶೇಷ ರೀತಿಯಲ್ಲಿ ಅಭಿಮಾನವನ್ನು ಮೆರೆಯುತ್ತಿದ್ದಾರೆ. ಹಾಗೆಯೇ ಇದೀಗ ಮದುವೆ ಮಂಟಪದಲ್ಲೇ ನೇಪಾಳಿ ನವವಿವಾಹಿತ ಜೋಡಿಯೊಂದು ಆರ್‌ಜಿಬಿ ಜೆರ್ಸಿ ಹಿಡಿದು ಶುಭ ಕೋರಿದ್ದು, ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದುವರೆಗೂ ಆಡಿರುವ 17 ಸೀಸನ್‌ಗಳಲ್ಲೂ ಒಂದೇ ಒಂದು ಟ್ರೋಫಿಯನ್ನು ಗೆದ್ದಿಲ್ಲ. ಹಾಗಂತ ಅಭಿಮಾನಿಗಳ ಸಂಖ್ಯೆಯೇನು ಕಡಿಮೆಯಾಗಿಲ್ಲ. ಬದಲಾಗಿ ಹೆಚ್ಚಾಗುತ್ತಲೇ ಇದೆ. ಎಷ್ಟೇ ಬಾರಿ ಸೋತರೂ ನಮ್ಮ ತಂಡವನ್ನು ಬಿಟ್ಟುಕೊಡುವ ಮಾತೇ ಇಲ್ಲ ಎಂದು ಹೇಳಿಕೊಂಡು ಬರುವುದಲ್ಲದೆ, ಈ ಸಲ ಕಪ್ ನಮ್ದೆ ಎನ್ನುವ ಘೋಷಣೆ ಕೂಗುತ್ತಲೇ ಇದ್ದಾರೆ ಅಭಿಮಾನಿಗಳು. ಈ ಘೋಷವಾಕ್ಯ ಈ ಬಾರಿ ನಿಜವಾಗುವ ಎಲ್ಲಾ ಲಕ್ಷಣಗಳು ಎದ್ದು ಕಾಣುತ್ತಿವೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬರೀ ಕರ್ನಾಟಕ ಅಷ್ಟೇ ಅಲ್ಲದೆ, ದೇಶದ, ವಿದೇಶಗಳಲ್ಲಿಯೂ ಅಪಾರ ಅಭಿಮಾನಿ ಬಳಗವೇ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ಕರ್ನಾಟಕದವರಲ್ಲದಿದ್ದರೂ ನೇಪಾಳಿ ಜೋಡಿಯೊಂದು ಮದುವೆ ಮಂಟಪದಲ್ಲೇ ಆರ್‌ಸಿಬಿ ಜೆರ್ಸಿ ಹಿಡಿದು ಶುಭಹಾರೈಸಿದೆ. ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಇಂದಿನ ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ಫೈನಲ್ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಹಿನ್ನೆಲೆ ರಜತ್ ಪಾಟೀದಾರ್ ನಾಯಕತ್ವದ ಆರ್‌ಸಿಬಿ ತಂಡದ ಗೆಲುವಿಗೆ ಅಭಿಮಾನಿಗಳು ಈಗಾಗಲೇ ವಿಶೇಷ ಪೂಜೆ, ಪ್ರಾರ್ಥನೆ ಮಾಡಿಸುತ್ತಲೇ ಇದ್ದಾರೆ. ಮತ್ತೊಂದೆಡೆ ರಾಜಕೀಯ ನಾಯಕರು, ಸ್ಯಾಂಡಲ್‌ವುಡ್ ತಾರೆಯರು ಸಹ 'ಈ ಸಲ ಕಪ್ ನಮ್ದೆ' ಎಂಬ ಘೋಷವಾಕ್ಯದ ಪೋಸ್ಟ್ ಹಂಚಿಕೊಳ್ಳುವ ಮೂಲಕ ಶುಭ ಹಾರೈಸುತ್ತಿದ್ದಾರೆ.
ನೇಪಾಳಿ ನವವಿವಾಹಿತ ಜೋಡಿಯಿಂದ ಆರ್‌ಸಿಬಿಗೆ ಶುಭಹಾರೈಕೆ: ಇದರ ಬೆನ್ನಲ್ಲೇ ಆರ್‌ಸಿಬಿ ಫೈನಲ್‌ಗೇರಿದ ಖುಷಿಯಲ್ಲಿ ನೇಪಾಳದಲ್ಲಿನ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಆರ್‌ಸಿಬಿ ಜೆರ್ಸಿ ಧರಿಸಿಕೊಂಡು ದೇವರ ಬಳಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆಯನ್ನೂ ಸಹ ಸಲ್ಲಿಸುತ್ತಿದ್ದಾರೆ. ಮತ್ತೊಂದೆಡೆ ಮದುವೆ ಮಂಟಪದಲ್ಲಿ ನೇಪಾಳದ ನವವಿವಾಹಿತ ಜೋಡಿಯೊಂರು ಬೆಂಗಳೂರು ತಂಡದ ಜೆರ್ಸಿ ಹಿಡಿದು ಶುಭಹಾರೈಸಿ ಗಮನ ಸೆಳೆದಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ಹೈ ವೋಲ್ಟೇಜ್ ಫೈನಲ್ ಪಂದ್ಯ ಇಂದು ಸಂಜೆ 7:30ಕ್ಕೆ ಆರಂಭವಾಗಲಿದೆ. ಇದಕ್ಕೂ ಮುಂಚೆ 7 ಗಟೆಗೆ ಟಾಸ್ ಆಗಲಿದೆ. ಈಗಾಗಲೇ ಫೈನಲ್ ಹಿನ್ನೆಲೆ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ. ದುಬಾರಿ ದರದಲ್ಲಿ ಐಪಿಎಲ್ ಟಿಕೆಟ್‌ಗಳು ಮಾರಾಟ ಆಗಿವೆ ಎಂದು ಹೇಳಲಾಗುತ್ತಿದೆ. ಇನ್ನೂ ಈ ಕ್ರೀಡಾಂಗಣದಲ್ಲಿ 1,30,000 ಜನ ಒಂದೇ ಬಾರಿಗೆ ಪಂದ್ಯ ವೀಕ್ಷಣೆ ಮಾಡಬಹುದಾಗಿದೆ.












Click it and Unblock the Notifications