RCB: ಐಪಿಎಲ್ ಇತಿಹಾಸದಲ್ಲಿ ಯಾವ ತಂಡವೂ ಮಾಡಿರದ ಸಾಧನೆ ಮಾಡಿದ ಆರ್‌ಸಿಬಿ
ಐಪಿಎಲ್ 2025ರ ಆವೃತ್ತಿಯಲ್ಲಿ ಆರ್‌ಸಿಬಿ ಸಖತ್ ಫಾರ್ಮ್‌ನಲ್ಲಿದೆ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್‌ನಲ್ಲಿ ಒಂದು ತಂಡವಾಗಿ ಆಡುತ್ತಿರುವ ಆರ್ ಸಿಬಿ ಸದ್ಯ ಟೇಬಲ್ ಟಾಪರ್. ಇನ್ನು ಎರಡು ಪಂದ್ಯ ಗೆದ್ದರೂ ಆರ್ ಸಿಬಿ ಪ್ಲೇಆಫ್ ಸ್ಥಾನ ಖಚಿತವಾಗಲಿದೆ. ತವರಿನಲ್ಲಿ ಮೂರು ಪಂದ್ಯಗಳಲ್ಲಿ ಎಡವಿದರೂ, ತವರಿನ ಹೊರಗೆ ಆರ್ ಸಿಬಿಯನ್ನು ತಡೆಯಲು ಯಾರಿಗೂ ಆಗಿಲ್ಲ, ಇದೇ ಕಾರಣಕ್ಕೆ ಐಪಿಎಲ್ ಇತಿಹಾಸದಲ್ಲಿ ಯಾವ ತಂಡವೂ ಮಾಡದ ದಾಖಲೆ ಮಾಡಿದೆ.
ಐಪಿಎಲ್ ಇತಿಹಾಸದಲ್ಲಿ ಲೀಗ್ ಹಂತದಲ್ಲಿ ತವರಿನ ಹೊರಗೆ ಸತತವಾಗಿ ಆರು ಪಂದ್ಯಗಳನ್ನು ಗೆದ್ದ ಮೊದಲ ತಂಡ ಎನಿಸಿಕೊಂಡಿದೆ. ಭಾನುವಾರ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಗೆಲುವಿನ ಮೂಲಕ ಈ ದಾಖಲೆ ಮಾಡಿತು. 163 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆರ್ ಸಿಬಿ ಆರಂಭದಲ್ಲೇ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾಗ ವಿರಾಟ್ ಕೊಹ್ಲಿ ಮತ್ತು ಕೃನಾಲ್ ಪಾಂಡ್ಯ ಭರ್ಜರಿ ಅರ್ಧಶತಕ ಗಳಿಸುವ ಮೂಲಕ ಆರ್ ಸಿಬಿಗೆ ಗೆಲುವು ತಂದುಕೊಟ್ಟರು.

ಆರ್‌ಸಿಬಿ 18 ನೇ ಆವೃತ್ತಿಯ ಟಿ20 ಲೀಗ್‌ನಲ್ಲಿ ತಮ್ಮ ಸತತ 6 ನೇ ಜಯವನ್ನು ದಾಖಲಿಸಿತು, ಲೀಗ್ ಇತಿಹಾಸದಲ್ಲಿ ಹೀಗೆ ಮಾಡಿದ ಮೊದಲ ತಂಡವಾಯಿತು. ತವರಿನಲ್ಲಿ ಆಡಿದ 4 ಪಂದ್ಯಗಳಲ್ಲಿ ಒಂದು ಪಂದ್ಯವನ್ನು ಮಾತ್ರ ಗೆದ್ದಿರುವ ಆರ್ ಸಿಬಿ ಹೊರಗೆ ಆಡಿರುವ ಎಲ್ಲಾ ಪಂದ್ಯಗಳನ್ನೂ ಗೆದ್ದಿದೆ. ತವರಿನ ಹೊರಗೆ ಇನ್ನೊಂದು ಪಂದ್ಯ ಆಡಲಿದ್ದು ಅದನ್ನೂ ಗೆದ್ದರೆ ಅದು ಮತ್ತೊಂದು ದಾಖಲೆಯಾಗಲಿದೆ. ಮೇ 9ರಂದು ಲಕ್ನೋದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆಡಲಿದ್ದು ಇದು ಆರ್ ಸಿಬಿಯ ಕೊನೆಯ ತವರಿನ ಹೊರಗಿನ ಪಂದ್ಯವಾಗಲಿದೆ. ಇದಕ್ಕೂ ಮುನ್ನ ಬೆಂಗಳೂರಿನಲ್ಲಿ ಮೇ 3ರಂದು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.












Click it and Unblock the Notifications