ಮತ್ತೊಂದು ಸಾಧನೆ ಮಾಡಿ ನಂ.1 ಆಯ್ತು ಆರ್‌ಸಿಬಿ; ಮುಂಬೈ ಇಂಡಿಯನ್ಸ್, ಸಿಎಸ್‌ಕೆಗೆ ಭಾರೀ ಮುಖಭಂಗ
Royal Challengers Bengaluru: ಆರ್‌ಸಿಬಿಯು 17 ವರ್ಷಗಳ ಬಳಿಕ ಮೊಟ್ಟ ಮೊದಲ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದುಕೊಂಡಿದೆ. ಇದರ ಜೊತೆಗೆ ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಹೊಸ ದಾಖಲೆ ಬರೆದಿದೆ. ಹಾಗಾದ್ರೆ ಅದೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಐಪಿಎಲ್‌ನಲ್ಲಿ ಎಲ್ಲಾ ತಂಡಗಳಿಗಿಂತಲೂ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಟೀಂ ಅಂದ್ರೆ ಅದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಾತ್ರ. ಆಡಿದ 17 ಸೀಸನ್‌ಗಳಲ್ಲೂ ಒಂದೇ ಒಂದು ಐಪಿಎಲ್ ಟ್ರೋಫಿ ಗೆದ್ದಿರಲಿಲ್ಲ. ಆದರೆ, ಈ ಬಾರಿ ಮೊಟ್ಟ ಮೊದಲ ಬಾರಿ ಫೈನಲ್‌ನಲ್ಲಿ ಗೆದ್ದು ಈ ಕೊರಗನ್ನು ಕೂಡ ನೀಗಿಸಿದೆ. ಇದರ ಬೆನ್ನಲ್ಲೇ ಇದೀಗ ಸಿಎಸ್‌ಕೆ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ಆ ದಾಖಲೆಯನ್ನು ಕೂಡ ನುಚ್ಚುನೂರು ಮಾಡಿ ನಂಬರ್ 1 ಪಟ್ಟ ಅಲಂಕರಿಸಿದೆ.

ಹೌದು.. ಐಪಿಎಲ್ 18ನೇ ಸೀಸನ್‌ನಲ್ಲಿ ಚಾಂಪಿಯನ್ ಪಟ್ಟ ಗಿಟ್ಟಿಸಿಕೊಂಡ ಆರ್‌ಸಿಬಿಯು ಬ್ರಾಂಡ್ ಮೌಲ್ಯವನ್ನು ಹೆಚ್ಚಿಸಿಕೊಂಡಿದೆ. ಅದು ಅತೀ ಹೆಚ್ಚು ಬಾರಿ ಐಪಿಎಲ್ ಟ್ರೋಫಿ ಗೆದ್ದಿರುವ ಬಲಿಷ್ಠ ತಂಡಗಳಾದ ಸಿಎಸ್‌ಕೆ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳನ್ನು ಹಿಂದಿಕ್ಕುವ ಮೂಲಕ ಅಗ್ರಸ್ಥಾನವನ್ನು ಅಲಂಕರಿಸಿದೆ.
ಬ್ರಾಂಡ್ ಮೌಲ್ಯದಲ್ಲಿ ಕಳೆದ ಬಾರಿ ಅಗ್ರಸ್ಥಾನದಲ್ಲಿ ಇದ್ದ ಸಿಎಸ್‌ಕೆ ಫ್ರಾಂಚೈಸಿಯನ್ನು ಹಿಂದಿಕ್ಕಿ ಆರ್‌ಸಿಬಿ ಅಗ್ರಸ್ಥಾನಕ್ಕೆ ಏರುವಲ್ಲಿ ಯಶಸ್ವಿ ಆಗಿದೆ. ಹೌಲಿಹಾನ್ ಲೋಕೆ ಅವರ ಇತ್ತೀಚಿನ ಬ್ರ್ಯಾಂಡ್ ಮೌಲ್ಯಮಾಪನ ಅಧ್ಯಯನದ ಪ್ರಕಾರ, ಇಂಡಿಯನ್ ಪ್ರೀಮಿಯರ್ ಲೀಗ್ 2025ರಲ್ಲಿ ಅಭೂತಪೂರ್ವ ಆರ್ಥಿಕ ಜಿಗಿತವನ್ನು ಕಂಡಿದೆ. ಈ ಸಾಧನೆಯೊಂದಿದೆ ಆರ್‌ಸಿಬಿ ಫ್ರಾಂಚೈಸಿ ಹೆಚ್ಚಿನ ಮೌಲ್ಯಯುತ ತಂಡವಾಗಿ ಹೊರಹೊಮ್ಮಿದೆ.
ಐಪಿಎಲ್ನ ವ್ಯವಹಾರ ಮೌಲ್ಯ ಮಾಪನವು ವರ್ಷದಿಂದ ವರ್ಷಕ್ಕೆ ಶೇಕಡ 12.9ರಷ್ಟು ಹೆಚ್ಚಾಗಿ $18.5 ಬಿಲಿಯನ್ ತಲುಪಿದೆ. ಈ ಮೂಲಕ ಐಪಿಎಲ್ ವಿಶ್ವದ ಅತ್ಯಂತ ಮೌಲ್ಯಯುತ ಕ್ರೀಡಾ ಲೀಗ್‌ಗಳಲ್ಲಿ ತನ್ನ ಸ್ಥಾನವನ್ನು ಭದ್ರ ಮಾಡಿಕೊಳ್ಳುವಲ್ಲಿ ಯಶಸ್ವಿ ಆಗಿದೆ ಎಂದು ಹೌಲಿಹಾನ್ ಲೋಕೆ ಅವರ ಬ್ರಾಂಡ್ ಮೌಲ್ಯಮಾಪನ ಅಧ್ಯಯನ ತಿಳಿಸಿದೆ.
ಅಲ್ಲದೆ, ವೀಕ್ಷಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲಿದೆ. ಅಲ್ಲದೆ, ಹೆಚ್ಚುತ್ತಿರುವ ಜಾಹೀರಾತು ಆದಾಯ ಮತ್ತು ದೊಡ್ಡ ಮಟ್ಟದ ಹೂಡಿಕೆಯಿಂದ ಐಪಿಎಲ್ ಸ್ವತಂತ್ರ ಬ್ರಾಂಡ್ ಮೌಲ್ಯವು ಶೇಕಡ 13.8ರಷ್ಟು ಹೆಚ್ಚಾಗಿ $3.9 ಬಿಲಿಯನ್ ತಲುಪಿದೆ. ಆರ್‌ಸಿಬಿ ಫ್ರಾಂಚೈಸಿಯ ಬ್ರ್ಯಾಂಡ್ ಮೌಲ್ಯವು 2024ರಲ್ಲಿ $227 ಮಿಲಿಯನ್ ಇತ್ತು. ಈ ಬಾರಿ $269 ಮಿಲಿಯನ್‌ಗೆ ಏರಿಕೆಯಾಗಿದೆ ಎಂದು ವರದಿಯಾಗಿದೆ. ಈ ಮೂಲಕ ಆರ್‌ಸಿಬಿ ಬ್ರಾಂಡ್ ಮೌಲ್ಯದಲ್ಲಿ ಅಗ್ರಸ್ಥಾನ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ.
ಐಪಿಎಲ್ ತಂಡಗಳ ಬ್ರ್ಯಾಂಡ್ ಮೌಲ್ಯ; ಆರ್‌ಸಿಬಿಯೇ ನಂ.1
* ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) - 269 ಮಿಲಿಯನ್ ಡಾಲರ್
* ಮುಂಬೈ ಇಂಡಿಯನ್ಸ್ (MI) - 242 ಮಿಲಿಯನ್ ಡಾಲರ್
* ಚೆನ್ನೈ ಸೂಪರ್ ಕಿಂಗ್ಸ್ (CSK) - 235 ಮಿಲಿಯನ್ ಡಾಲರ್
* ಕೊಲ್ಕತ್ತಾ ನೈಟ್ ರೈಡರ್ಸ್ (KKR) - 227 ಮಿಲಿಯನ್ ಡಾಲರ್
* ಸನ್ರೈಸರ್ಸ್ ಹೈದರಾಬಾದ್ (SRH) - 154 ಮಿಲಿಯನ್ ಡಾಲರ್
* ಡೆಲ್ಲಿ ಕ್ಯಾಪಿಟಲ್ಸ್ (DC) - 152 ಮಿಲಿಯನ್ ಡಾಲರ್
* ರಾಜಸ್ಥಾನ್ ರಾಯಲ್ಸ್ (RR) - 146 ಮಿಲಿಯನ್ ಡಾಲರ್
* ಗುಜರಾತ್ ಟೈಟಾನ್ಸ್ (GT) - 142 ಮಿಲಿಯನ್ ಡಾಲರ್
* ಪಂಜಾಬ್ ಕಿಂಗ್ಸ್ (PBKS) - 141 ಮಿಲಿಯನ್ ಡಾಲರ್
* ಲಕ್ನೋ ಸೂಪರ್ ಜೈಂಟ್ಸ್ (LSG) - 122 ಮಿಲಿಯನ್ ಡಾಲರ್
ಒಟ್ಟಿನಲ್ಲಿ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊಟ್ಟ ಮೊದಲ ಐಪಿಎಲ್ ಟ್ರೋಫಿ ಗೆಲುವಿನ ಮೂಲಕ ತನ್ನ ಬ್ರಾಂಡ್ ವ್ಯಾಲ್ಯೂ ಅನ್ನು ಹೆಚ್ಚಿಸಿಕೊಂಡಿದೆ. ಈ ಮೂಲಕ ಅತೀ ಹೆಚ್ಚು ಐಪಿಎಲ್ ಟ್ರೋಫಿಗಳನ್ನು ಗೆದ್ದಿರುವ ಮುಂಬೈ ಇಂಡಿಯನ್ಸ್, ಸಿಎಸ್‌ಕೆಯನ್ನೇ ಹಿಂದಿಕ್ಕುವ ಮೂಲಕ ಈ ಸಾಧನೆ ಮಾಡಿದೆ.












Click it and Unblock the Notifications