Dinesh Karthik: ಸನ್‌ರೈಸರ್ಸ್ ವಿರುದ್ಧ ಕಣಕ್ಕಿಳಿಯಲು ಸಜ್ಜಾದ ಆರ್ಸಿಬಿ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್!
2024ರ ಐಪಿಎಲ್ ಬಳಿಕ ನಿವೃತ್ತಿ ಘೋಷಣೆ ಮಾಡಿದ್ದ ಆರ್ ಸಿಬಿ ಬ್ಯಾಟರ್ ದಿನೇಶ್ ಕಾರ್ತಿಕ್ 2025ರ ಐಪಿಎಲ್‌ನಲ್ಲಿ ತಂಡದ ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಆರ್ ಸಿಬಿ ತಂಡದ ಫಿನಿಷರ್ ಆಗಿ ಅಬ್ಬರಿಸುತ್ತಿದ್ದ ದಿನೇಶ್ ಕಾರ್ತಿಕ್ ಬ್ಯಾಟಿಂಗ್ ನೋಡಲು ಮತ್ತೆ ಆಗಲ್ಲ ಎಂದು ಬೇಸರಗೊಂಡಿದ್ದ ಅಭಿಮಾನಿಗಳಿಗೆ ಖುಷಿ ಸುದ್ದಿ ಸಿಕ್ಕಿದೆ. ದಿನೇಶ್ ಕಾರ್ತಿಕ್ ಬ್ಯಾಟ್ ಹಿಡಿದು ಮತ್ತೆ ಮೈದಾನಕ್ಕಿಳಿಯಲು ಸಜ್ಜಾಗಿದ್ದಾರೆ.
ಭಾರತದಲ್ಲಿ ಐಪಿಎಲ್ ನಡೆಯುವಂತೆ ದಕ್ಷಿಣ ಆಫ್ರಿಕಾದಲ್ಲಿ ಎಸ್‌ಎ20 ಪಂದ್ಯಾವಳಿ ನಡೆಯುತ್ತದೆ. ಇಂದಿನಿಂದ (ಜನವರಿ 9) ಎಸ್‌ಎ20 ಪಂದ್ಯಾವಳಿ ಆರಂಭವಾಗಲಿದೆ. ಈ ಪಂದ್ಯಾವಳಿಯಲ್ಲಿ ದಿನೇಶ್ ಕಾರ್ತಿಕ್ ಆಡಲಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಭಾರತೀಯ ಆಟಗಾರರಿಗೆ ವಿದೇಶಿ ಲೀಗ್‌ಗಳಲ್ಲಿ ಆಡಲು ಅವಕಾಶವಿರುತ್ತದೆ. ದಿನೇಶ್ ಕಾರ್ತಿಕ್ 2024ರ ಐಪಿಎಲ್ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದು ಈಗ ವಿದೇಶಿ ಲೀಗ್‌ಗಳಲ್ಲಿ ಆಡಲು ಅವಕಾಶವಿದ್ದು, ಎಸ್‌ಎ20 ಪಂದ್ಯಾವಳಿಯಲ್ಲಿ ಆಡಲಿದ್ದಾರೆ.
ಸನ್‌ರೈಸರ್ಸ್ ವಿರುದ್ಧ ಕಣಕ್ಕೆ
ಪಾರ್ಲ್ ರಾಯಲ್ಸ್ ಪರವಾಗಿ ದಿನೇಶ್ ಕಾರ್ತಿಕ್ ಆಡಲಿದ್ದು ಜನವರಿ 11ರಂದು ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡದ ವಿರುದ್ಧ ಆಡಲಿದ್ದಾರೆ. ಜನವರಿ 11, ಶನಿವಾರ ಮಧ್ಯಾಹ್ನ 1 ಗಂಟೆಗೆ ಪಂದ್ಯ ಆರಂಭವಾಗಲಿದೆ. ದಿನೇಶ್ ಕಾರ್ತಿಕ್ ಅಭಿಮಾನಿಗಳು ಮತ್ತೊಮ್ಮೆ ಅವರ ಬ್ಯಾಟಿಂಗ್ ನೋಡಿ ಆನಂದಿಸಬಹುದು.
ಆರ್ ಸಿಬಿ ತಂಡದಲ್ಲಿ ಫಿನಿಷರ್ ಪಾತ್ರವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದ ದಿನೇಶ್ ಕಾರ್ತಿಕ್ 2022ರ ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಟಿ20 ವಿಶ್ವಕಪ್ ಪಂದ್ಯಾವಳಿಗೆ ಭಾರತ ತಂಡಕ್ಕೆ ವಾಪಸಾತಿ ಮಾಡಿದ್ದರು. ಅಂತಿಮ ಓವರ್ ಗಳಲ್ಲಿ ಅಬ್ಬರಿಸುತ್ತಿದ್ದ ದಿನೇಶ್ ಕಾರ್ತಿಕ್ ಆರ್ ಸಿಬಿಗಾಗಿ ಹಲವು ಪಂದ್ಯ ಗೆಲ್ಲಿಸಿಕೊಟ್ಟಿದ್ದಾರೆ. ಆರ್ ಸಿಬಿ ಜೊತೆ ಉತ್ತಮ ನಂಟು ಹೊಂದಿರುವ ಅವರು ನಿವೃತ್ತಿ ಘೋಷಣೆ ಬಳಿಕ ಮೆಂಟರ್ ಮತ್ತು ಆರ್ ಸಿಬಿ ಬ್ಯಾಟಿಂಗ್ ಕೋಚ್ ಮುಂದುವರೆದಿದ್ದಾರೆ.
ಒಂದು ತಿಂಗಳು ಕ್ರಿಕೆಟ್ ಹಬ್ಬ
ಐಪಿಎಲ್ ತಂಡಗಳ ಒಡೆತನ ಹೊಂದಿರುವ ಫ್ರಾಂಚೈಸಿಗಳೇ ಎಸ್‌ಎ20 ಪಂದ್ಯಾವಳಿಯಲ್ಲಿ ಆಡುವ ತಂಡಗಳನ್ನು ಹೊಂದಿರುವುದು ವಿಶೇಷ. ಸನ್‌ರೈಸರ್ಸ್ ಹೈದರಾಬಾದ್, ಮುಂಬೈ ಇಂಡಿಯನ್ಸ್, ರಾಜಸ್ಥಾನ ರಾಯಲ್ಸ್, ಲಕ್ನೋ ಸೂರ್ ಜೈಂಟ್ಸ್, ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಗಳೇ ಎಸ್‌ಎ20 ಟೂರ್ನಿಯಲ್ಲಿ ತಂಡಗಳನ್ನು ಹೊಂದಿವೆ.
ಎಂಐ ಕೇಪ್‌ಟೌನ್, ಜೋಬರ್ಗ್ ಸೂಪರ್ ಕಿಂಗ್ಸ್, ಪಾರ್ಲ್ ರಾಯಲ್ಸ್, ಪ್ರೆಟೋರಿಯಾ ಕ್ಯಾಪಿಟಲ್ಸ್, ಡರ್ಬನ್ ಸೂಪರ್ ಜೈಂಟ್ಸ್, ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡಗಳು ಪ್ರತಿಷ್ಠಿತ ಪ್ರಶಸ್ತಿಗಾಗಿ ಸೆಣೆಸಲಿವೆ. ದಕ್ಷಿಣ ಆಫ್ರಿಕಾದ ಕ್ರಿಕೆಟ್ ಆಟಗಾರರಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಈ ಪಂದ್ಯಾವಳಿಯನ್ನು ಆರಂಭಿಸಲಾಗಿದೆ.
ಜಗತ್ತಿನ ವಿವಿಧ ದೇಶದಗಳ ಕ್ರಿಕೆಟಿಗರು ಕೂಡ ಈ ಪಂದ್ಯಾವಳಿಯಲ್ಲಿ ಆಡುತ್ತಾರೆ. ಜನವರಿ 9ರಿಂದ ಆರಂಭವಾಗಿರುವ ಪಂದ್ಯಾವಳಿ ಫೆಬ್ರವರಿ 8 ರಂದು ಮುಕ್ತಾಯವಾಗಲಿದೆ.












Click it and Unblock the Notifications