ಅಮೆರಿಕದಲ್ಲಿ RCB ಸ್ಟಾರ್ ಆಲ್‌ರೌಂಡರ್ ಸಿಡಿಲಬ್ಬರ
ಇಂಡಿಯನ್ ಪ್ರೀಮಿಯರ್ ಲೀಗ್ ಮುಗಿದಿದೆ. ಈಗ ಎಲ್ಲ ಆಟಗಾರರು ರಾಷ್ಟ್ರೀಯ ತಂಡದ ಪರ ಆಡುತ್ತಿದ್ದಾರೆ. ಇನ್ನು ಹಲವು ಆಟಗಾರರು ವಿಶ್ವದ ಬೇರೆ ಬೇರೆ ಲೀಗ್‌ಗಳಲ್ಲಿ ಬ್ಯಾಟ್ ಮಾಡುತ್ತಿದ್ದಾರೆ. ಅಂತೆಯೇ, ಆರ್‌ಸಿಬಿ ತಂಡದ ಆಟಗಾರ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಬ್ಯಾಟ್ ಮಾಡಿದರು. ಈ ವೇಳೆ ಇವರ ಬಿರುಸಿನ ಬ್ಯಾಟಿಂಗ್‌ಗೆ ಅಭಿಮಾನಿಗಳು ಫುಲ್ ಮಾರ್ಕಸ್ ನೀಡಿದ್ದಾರೆ. ಐಪಿಎಲ್‌ನಲ್ಲಿ ಆಡಿದ ಧಾಟಿಯಲ್ಲಿ ವಿಂಡೀಸ್ ಪ್ಲೇಯರ್ ರೊಮಾರಿಯೊ ಶೆಫರ್ಡ್ ಅಮೆರಿಕದಲ್ಲಿ ಬ್ಯಾಟ್ ಮಾಡಿದ್ದಾರೆ.
ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಯೂನಿಕಾರ್ನಸ್ ಹಾಗೂ ಸಿಯಾಟಲ್ ಓರ್ಕಾಸ್ ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸ್ಯಾನ್ ಫ್ರಾನ್ಸಿಸ್ಕೋ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 176 ರನ್ ಸಿಡಿಸಿದರು. ಗುರಿಯನ್ನು ಬೆನ್ನಟ್ಟಿದ ಸಿಯಾಟಲ್ ಓರ್ಕಾಸ್ 18.2 ಓವರ್‌ಗಳಲ್ಲಿ 144 ರನ್‌ಗಳಿಗೆ ಆಲೌಟ್ ಆಯಿತು.

ಮೊದಲು ಬ್ಯಾಟ್ ಮಾಡಿದ ಸ್ಯಾನ್ ಫ್ರಾನ್ಸಿಸ್ಕೋ ತಂಡದ ನಾಯಕ ಮ್ಯಾಥ್ಯೂ ಶಾರ್ಟ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 7 ಬೌಂಡರಿ, 2 ಸಿಕ್ಸರ್ ಸಹಾಯದಿಂದ 52 ರನ್ ಬಾರಿಸಿ ಅಬ್ಬರಿಸಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಜೇಕ್ ಫ್ರೇಸರ್-ಮೆಕ್‌ಗುರ್ಕ್ ಸಹ 34 ರನ್ ಕಾಣಿಕೆ ನೀಡಿದರು. ಆರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಆರ್‌ಸಿಬಿ ಪ್ಲೇಯರ್ ರೋಮಾರಿಯೊ ಶೆಫರ್ಡ್ ಅಬ್ಬರಿಸಿದರು. ಇವರು ಐಪಿಎಲ್‌ನಲ್ಲಿ ಆಡಿದ ರೀತಿಯ ಬ್ಯಾಟಿಂಗ್ ಪ್ರದರ್ಶನ ನೀಡಿ ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣ ಬಡಿಸಿದರು.
ರೋಮಾರಿಯೋ ಆರ್ಭಟ
ಸ್ಯಾನ್ ಫ್ರಾನ್ಸಿಸ್ಕೋ ತಂಡ ಸ್ಪರ್ಧಾತ್ಮಕ ಮೊತ್ತವನ್ನು ಕಲೆ ಹಾಕುವಲ್ಲಿ ರೊಮಾರಿಯೊ ಕೊಡುಗೆ ಅಪಾರ. ಇವರು 31 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್ ಸಹಾಯದಿಂದ 56 ರನ್ ಬಾರಿಸಿದರು. ಸಿಯಾಟಲ್ ಓರ್ಕಾಸ್ ತಂಡದ ಜೆರಾಲ್ಡ್ ಕೋಟ್ಜೀ, ಹರ್ಮೀತ್ ಸಿಂಗ್ ತಲಾ ಮೂರು ವಿಕೆಟ್ ಕಬಳಿಸಿದರು.
ಗುರಿಯನ್ನು ಬೆನ್ನಟ್ಟಿದ ಸಿಯಾಟಲ್ ಓರ್ಕಾಸ್ ತಂಡದ ಆರಂಭಿಕರಾದ ಶ್ಯಾಮ್ ಜಹಾಂಗಿರ್ (40), ಡೇವಿಡ್ ವಾರ್ನರ್ (23) ಜೋಡಿ ಮೊದಲ ವಿಕೆಟ್‌ಗೆ 66 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಸ್ಟಾರ್ ಆಟಗಾರ ಹ್ಯಾನ್ರಿ ಕ್ಲಾಸೇನ್ ರನ್ ಕಲೆ ಹಾಕುವಲ್ಲಿ ವಿಫಲರಾದರು. ಭರವಸೆಯ ಆಟಗಾರ ಶಿಮ್ರೋನ್ ಹೆಟ್ಮೆಯರ್ (30), ಸುಜಿತ್ ನಾಯಕ್ (15) ಡಬಲ್ ಡಿಜಿಟ್ ಮುಟ್ಟಿದ್ದು ಬಿಟ್ಟರೆ ಉಳಿದ ಆಟಗಾರರು ರನ್ ಬರ ಅನುಭವಿಸಿದರು.
ಸ್ಯಾನ್ ಫ್ರಾನ್ಸಿಸ್ಕೋ ತಂಡದ ಪರ ಹ್ಯಾರಿಸ್ ರೌಫ್ 4, ನಾಯಕ ಮ್ಯಾಥ್ಯೂ ಶಾರ್ಟ್ 3, ರೋಮಾರಿಯೊ ಶೆಫರ್ಡ್ 2 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಮಿಂಚಿದರು. ಈ ಗೆಲುವಿನ ಮೂಲಕ ಸ್ಯಾನ್ ಫ್ರಾನ್ಸಿಸ್ಕೋ ಆಡಿರುವ 6 ಪಂದ್ಯಗಳನ್ನು ಗೆದ್ದು 12 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.












Click it and Unblock the Notifications