ಮೈತುಂಬಾ ಸುಡುವ ಜ್ವರದ ನಡುವೆಯೂ ಪಂದ್ಯದಿಂದ ಹಿಂದೆ ಸರಿಯದ ಚೆಸ್ ಗ್ರ್ಯಾಂಡ್ಮಾಸ್ಟರ್ ಆರ್.ಪ್ರಜ್ಞಾನಂದ ರೋಚಕ ಸ್ಟೋರಿ
R.Praggnanandhaa: ಮೈತುಂಬಾ ಸುಡುವ ಜ್ವರ, ನಿಲ್ಲದ ನೆಗಡಿ ಮತ್ತು ಶಕ್ತಿಗುಂದಿದ ದೇಹ.. ಇಲವೆಲ್ಲಾ ಸಮಸ್ಯೆಗಳಿದ್ದರೂ ಸಹ ಬೋರ್ಡ್ ಮುಂಭಾಗ ಕುಳಿತರೆ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸುವ ಅದೇ ಚಾಣಾಕ್ಷ ನಡೆ. ಉಜ್ಬೇಕಿಸ್ತಾನ್ನಲ್ಲಿ ನಡೆದ 46ನೇ ಚೆಸ್ ಒಲಿಂಪಿಯಾಡ್ನಲ್ಲಿ ಭಾರತದ ಯುವ ಗ್ರ್ಯಾಂಡ್ಮಾಸ್ಟರ್ ರಮೇಶ್ಬಾಬು ಪ್ರಜ್ಞಾನಂದ ತೋರಿದ ಸಾಹಸವಿದು. ಇವರು ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದು, ಹಲವು ಮಹತ್ವದ ವಿಚಾರಗಳನ್ನ ಬಿಚ್ಚಿಟ್ಟಿದ್ದಾರೆ.
ಅನಾರೋಗ್ಯದ ಕಠಿಣ ಸವಾಲನ್ನು ಮೆಟ್ಟಿ ನಿಂತು ಆಡಿದ 21 ವರ್ಷದ ಈ ಚೆಸ್ ಜಾದೂಗಾರ, ಭಾರತ ತಂಡಕ್ಕೆ ಬೆಳ್ಳಿ ಪದಕ ಹಾಗೂ ವೈಯಕ್ತಿಕ ವಿಭಾಗದಲ್ಲಿ ಕಂಚಿನ ಪದಕ ತಂದುಕೊಡುವ ಮೂಲಕ ಜಾಗತಿಕ ಚೆಸ್ ಅಂಗಳದಲ್ಲಿ ಮತ್ತೆ ಭಾರತದ ಪತಾಕೆ ಹಾರಿಸಿದ್ದಾರೆ.

ಆರೋಗ್ಯ ತೊಂದರೆ ನಡುವೆ ದಿಟ್ಟ ಹೋರಾಟ
ಚೆಸ್ ಒಲಿಂಪಿಯಾಡ್ನ ಕೊನೆಯ ಹಂತದ ಪಂದ್ಯಗಳ ಸಮಯದಲ್ಲಿ ತಮಗೆ ಜ್ವರ ಹಾಗೂ ನೆಗಡಿ ಕಾಣಿಸಿಕೊಂಡಿತ್ತು ಎಂದು ಪ್ರಜ್ಞಾನಂದ ಹೇಳಿದ್ದಾರೆ. 'ಪಂದ್ಯದ ಕೊನೆಯ ದಿನಗಳಲ್ಲಿ ನನ್ನ ದೇಹದಲ್ಲಿ ಉತ್ಸಾಹ ಹಾಗೂ ಶಕ್ತಿ ಕಡಿಮೆಯಾಗಿತ್ತು. ಆದರೆ ಪಂದ್ಯಾವಳಿ ಮುಗಿದ ನಂತರ ಚೇತರಿಸಿಕೊಳ್ಳುತ್ತಿದ್ದೇನೆ. ಈಗ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗುತ್ತಿದ್ದು, ಆರೋಗ್ಯ ಸುಧಾರಿಸುತ್ತಿದೆ,' ಎಂದು ಅವರು ತಿಳಿಸಿದ್ದಾರೆ.
ತಂಗಿದ್ದ ಸ್ಥಳ, ಆಹಾರದ ಬಗ್ಗೆ ಧನಾತ್ಮಕ ಪ್ರತಿಕ್ರಿಯೆ
ತಂಗಿದ್ದ ಸ್ಥಳ ಅಥವಾ ಆಹಾರದ ಬಗ್ಗೆ ಮಾತನಾಡಿದ ಅವರು, 'ಮೊದಲ ದಿನ ಸ್ವಲ್ಪ ಅನಾನುಕೂಲವಿತ್ತು. ಆದರೆ ನಂತರ ಅಖಿಲ ಭಾರತ ಚೆಸ್ ಫೆಡರೇಶನ್ ಮತ್ತು ಉಜ್ಬೇಕಿಸ್ತಾನ್ ಚೆಸ್ ಫೆಡರೇಶನ್ ಉತ್ತಮ ವ್ಯವಸ್ಥೆ ಮಾಡಿದವು. ಭಾರತೀಯ ಆಟಗಾರರಿಗೆ ಪ್ರತ್ಯೇಕವಾಗಿ ಭಾರತೀಯ ಆಹಾರದ ವ್ಯವಸ್ಥೆ ಮಾಡಲಾಗಿತ್ತು. ಜ್ವರ ಬರಲು ವಾತಾವರಣ ಅಥವಾ ಆಹಾರ ಕಾರಣವಲ್ಲ. ಬದಲಿಗೆ ಆಟಗಾರರ ನಡುವೆ ಹರಡಿದ ವೈರಲ್ ಜ್ವರವೇ ಕಾರಣ,' ಎಂದು ಸ್ಪಷ್ಟಪಡಿಸಿದ್ದಾರೆ.
ನಾಯಕ ಶ್ರೀನಾಥ್ ನಾರಾಯಣನ್ ಹೇಳಿದ್ದೇನು?
ಭಾರತದ ಮೊದಲ ಬೋರ್ಡ್ ಆಟಗಾರನಾಗಿ ಕಣಕ್ಕಿಳಿದ 21 ವರ್ಷದ ಪ್ರಜ್ಞಾನಂದ, 10 ಪಂದ್ಯಗಳಲ್ಲಿ 3 ಜಯ ಸಾಧಿಸಿ, ಒಟ್ಟು 6.5 ಅಂಕಗಳೊಂದಿಗೆ ವೈಯಕ್ತಿಕ ಕಂಚಿನ ಪದಕ ಗೆದ್ದುಕೊಂಡರು. ಇನ್ನು ಇವರ ಆಟದ ಕುರಿತು ಮಾತನಾಡಿದ ತಂಡದ ನಾಯಕ ಶ್ರೀನಾಥ್ ನಾರಾಯಣನ್ ಅವರು, 'ಪ್ರಜ್ಞಾನಂದ ಗಳಿಸಿದ ಅಂಕಗಳು ಅವರು ಆಡಿದ ಉನ್ನತ ಮಟ್ಟದ ಆಟವನ್ನು ಪೂರ್ಣವಾಗಿ ಪ್ರತಿಫಲಿಸುವುದಿಲ್ಲ. ಪ್ರತಿಯೊಂದು ಪಂದ್ಯದಲ್ಲೂ ಗೆಲ್ಲುವ ಅವಕಾಶಗಳನ್ನು ಸೃಷ್ಟಿಸುತ್ತಿದ್ದರು. ಎದುರಾಳಿಗಳು ಒತ್ತಡದಲ್ಲಿದ್ದರೇ ಹೊರತು ಪ್ರಜ್ಞಾನಂದ ಎಂದಿಗೂ ಸೋಲಿನ ಭೀತಿಯಲ್ಲಿರಲಿಲ್ಲ,' ಎಂದು ಹೇಳಿದ್ದಾರೆ.
'ಕ್ರೀಡೆಯಲ್ಲಿ ಸಣ್ಣಪುಟ್ಟ ತಪ್ಪುಗಳು ಸಾಮಾನ್ಯ'
ಬಳಿಕ ಮತ್ತೆ ಮುಂದುವರೆದು ಮಾತನಾಡಿದ ಆ.ಪ್ರಜ್ಞಾನಂದ ಅವರು, 'ನಾನು ಉತ್ತಮವಾಗಿಯೇ ಆಡಿದೆ. ಎಸ್ಪಾನ್ನ ಆಂಟನ್ ವಿರುದ್ಧದ ಪಂದ್ಯದಂತಹ ಕೆಲವು ಪಂದ್ಯಗಳಲ್ಲಿ ಸುಲಭವಾಗಿ ಗೆಲ್ಲಬಹುದಾದ ಅವಕಾಶಗಳನ್ನು ಕೈಚೆಲ್ಲಿದ್ದು ಆಶ್ಚರ್ಯ ತಂದಿತು. ಕ್ರೀಡೆಯಲ್ಲಿ ಇಂತಹ ಸಣ್ಣಪುಟ್ಟ ತಪ್ಪುಗಳು ಸಾಮಾನ್ಯ,' ಎಂದು ಹೇಳಿದ್ದಾರೆ.
ಭಾರತ ತಂಡ ಈ ಬಾರಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ. ಕಳೆದ ಬಾರಿ ಚಿನ್ನದ ಪದಕ ಗೆದ್ದಿದ್ದರಿಂದ ನಿರೀಕ್ಷೆಗಳು ಹೆಚ್ಚಾಗಿದ್ದವು. ಆದರೆ ಪ್ರಜ್ಞಾನಂದ ಅವರ ಪ್ರಕಾರ, ಪ್ರಬಲ ಸ್ಪರ್ಧೆಯ ನಡುವೆ ಬೆಳ್ಳಿ ಪದಕ ಗೆದ್ದಿರುವುದು ಕೂಡ ಉತ್ತಮ ಸಾಧನೆ. ಉಜ್ಬೇಕಿಸ್ತಾನ್ ವಿರುದ್ಧದ ಪಂದ್ಯವೇ ಈ ಟೂರ್ನಿಯ ನಿರ್ಣಾಯಕ ಹಂತವಾಗಿತ್ತು. ಆ ಪಂದ್ಯದಲ್ಲಿ ನಿಹಾಲ್ ಸರಿನ್ ಅವರ ಒಂದು ದುರದೃಷ್ಟಕರ ತಪ್ಪಿನಿಂದಾಗಿ ಭಾರತ ಸೋಲನುಭವಿಸಬೇಕಾಯಿತು.
'ಸೋಲಿನಿಂದ ಧೃತಿಗೆಡದೆ ತಂಡವಾಗಿ ಒಗ್ಗಟ್ಟಿನಿಂದ ನಿಂತೆವು'
'ಪಂದ್ಯಾವಳಿಯಲ್ಲಿ ಯಾರಿಗಾದರೂ ಇಂತಹ ತಪ್ಪುಗಳು ಸಂಭವಿಸಬಹುದು. ನಾವು ಸೋಲಿನಿಂದ ಧೃತಿಗೆಡದೆ ತಂಡವಾಗಿ ಒಗ್ಗಟ್ಟಿನಿಂದ ನಿಂತೆವು. ಪಂದ್ಯಗಳ ನಡುವೆ ಪ್ಯಾಡಲ್ (Padel) ಆಟವಾಡುವುದು ನಮಗೆ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡಿತು,' ಎಂದು ಪ್ರಜ್ಞಾನಂದ ಅವರು ಹೇಳಿದ್ದಾರೆ.
ಕೆಲವು ತಿಂಗಳ ಹಿಂದೆ ಸೈಪ್ರಸ್ನಲ್ಲಿ ನಡೆದ ಕ್ಯಾಂಡಿಡೇಟ್ಸ್ ಟೂರ್ನಿಯಲ್ಲಿ ನಿರೀಕ್ಷಿತ ಯಶಸ್ಸು ಸಿಗದಿದ್ದರೂ, ನಂತರದ ದಿನಗಳಲ್ಲಿ ನಾರ್ವೇ ಚೆಸ್ ಟೂರ್ನಿಯಲ್ಲಿ ಮ್ಯಾಗ್ನಸ್ ಕಾರ್ಲ್ಸನ್ ಅವರನ್ನು ಸೋಲಿಸಿ ಪ್ರಶಸ್ತಿ ಗೆದ್ದಿದ್ದು ಮತ್ತು ಗ್ರಾಂಡ್ ಚೆಸ್ ಟೂರ್ನಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದು ಪ್ರಜ್ಞಾನಂದ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಮುಂದಿನ ದಿನಗಳಲ್ಲಿ ಅಮೆರಿಕದಲ್ಲಿ ನಡೆಯಲಿರುವ ಕ್ಲಚ್ ಚೆಸ್ (Clutch Chess) ಹಾಗೂ ಬುಡಾಪೆಸ್ಟ್ನಲ್ಲಿ ನಡೆಯಲಿರುವ ವರ್ಲ್ಡ್ ಚಾಂಪಿಯನ್ಶಿಪ್ ಟೂರ್ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಅವರು ಸಜ್ಜಾಗುತ್ತಿದ್ದಾರೆ. ಒಟ್ಟಿನಲ್ಲಿ ಅವರ ಅಭಯದ ಆತ್ಮವಿಶ್ವಾಸವೇ ಇದೀಗ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟುಹಾಕಿದೆ ಅಂದರೆ ತಪ್ಪಾಗುವುದಿಲ್ಲ.


Click it and Unblock the Notifications
