ನಾರ್ವೆ ಚೆಸ್ 2026 ಪ್ರಶಸ್ತಿ ಗೆದ್ದು ಹೊಸ ಇತಿಹಾಸ ನಿರ್ಮಿಸಿದ ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್.ಪ್ರಜ್ಞಾನಂದ
Praggnanandhaa creates history: ಭಾರತದ ಯುವ ಚೆಸ್ ತಾರೆ, ಗ್ರ್ಯಾಂಡ್ ಮಾಸ್ಟರ್ ಆರ್.ಪ್ರಜ್ಞಾನಂದ ಅವರು ಪ್ರತಿಷ್ಠಿತ 'ನಾರ್ವೆ ಚೆಸ್ 2026' ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಈ ಮೈಲಿಗಲ್ಲು ತಲುಪಿದ ಭಾರತದ ಮೊದಲ ಚೆಸ್ ಆಟಗಾರ ಎಂಬ ಹೆಗ್ಗಳಿಕೆಗೆ 20 ವರ್ಷದ ಚೆನ್ನೈ ಮೂಲದ ಪ್ರಜ್ಞಾನಂದ ಪಾತ್ರರಾಗಿದ್ದಾರೆ.
ಟೂರ್ನಿಯ ರೋಚಕ ಅಂತಿಮ ಸುತ್ತಿನಲ್ಲಿ ಜರ್ಮನಿಯ ವಿನ್ಸೆಂಟ್ ಕೀಮರ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಪ್ರಜ್ಞಾನಂದ ಒಟ್ಟು 18 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಟೂರ್ನಿಯುದ್ದಕ್ಕೂ ಉತ್ತಮ ಆಟ ಆಡಿಕೊಂಡು ಬಂದಿದ್ದ ಪ್ರಜ್ಞಾನಂದ ಅವರು 7 ಬಾರಿ ನಾರ್ವೆ ಚೆಸ್ ಚಾಂಪಿಯನ್ ಆಗಿರುವ ವಿಶ್ವದ ನಂ.1 ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ಅವರಿಗೆ ಎರಡು ಬಾರಿ ಸೋಲಿನ ರುಚಿ ತೋರಿಸಿದರು.

ದಿಗ್ಗಜರನ್ನು ಹಿಂದಿಕ್ಕಿದ ಪ್ರಜ್ಞಾನಂದ
ಅಂತಿಮ ದಿನದ ಆರಂಭದಲ್ಲಿ 15 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದ ಪ್ರಜ್ಞಾನಂದ, ಕೊನೆಯ ಹಂತದಲ್ಲಿ ತೋರಿದ ಅದ್ಭುತ ಪ್ರದರ್ಶನದಿಂದಾಗಿ ವಿಶ್ವನಾಥನ್ ಆನಂದ್ ಮತ್ತು ಡಿ. ಗುಕೇಶ್ ಅವರಂತಹ ದಿಗ್ಗಜರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿ ಗಮನ ಸೆಳೆದಿದ್ದಾರೆ.
ಚಾಂಪಿಯನ್ ಪಟ್ಟ ಅಲಂಕರಿಸಿದ ಪ್ರಜ್ಞಾನಂದ
ಅಂತಿಮ ಸುತ್ತಿಗೂ ಮುನ್ನ 15.5 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದ ಅಮೆರಿಕದ ವೆಸ್ಲಿ ಸೊ, ಫ್ರಾನ್ಸ್‌ನ ಅಲಿರೇಝಾ ಫೀರೋಝ್‌ಜಾ ವಿರುದ್ಧದ ಪಂದ್ಯದಲ್ಲಿ ಡ್ರಾ ಮಾಡಿಕೊಂಡರು. ಟೈ-ಬ್ರೇಕರ್‌ನಲ್ಲಿ ವೆಸ್ಲಿ ಸೊ ಗೆದ್ದರೂ ಅವರಿಗೆ ಸಿಕ್ಕಿದ್ದು 1.5 ಅಂಕ ಮಾತ್ರ (ಒಟ್ಟು 17 ಅಂಕ). ಇದು ಕೀಮರ್ ವಿರುದ್ಧ ನೇರ ಗೆಲುವು ದಾಖಲಿಸಿದ ಪ್ರಜ್ಞಾನಂದ (18 ಅಂಕ) ಅವರಿಗೆ ಚಾಂಪಿಯನ್ ಪಟ್ಟ ಅಲಂಕರಿಸಲು ವರದಾನವಾಯಿತು.












Click it and Unblock the Notifications