ರೋಹಿತ್ ಶರ್ಮಾ ನಾಯಕತ್ವಕ್ಕೆ ಮರಳಿದರೂ ಮುಂಬೈ ಇಂಡಿಯನ್ಸ್‌ನಲ್ಲಿ ಆಳವಾದ ಸಮಸ್ಯೆ ಇದೆ: ಆರ್. ಅಶ್ವಿನ್
R AShwin: ಐಪಿಎಲ್ 2027 ಮಿನಿ ಹರಾಜಿಗೂ ಮುನ್ನ ರೋಹಿತ್ ಶರ್ಮಾ ಅವರಿಗೆ ಮತ್ತೆ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ಪಟ್ಟ ಕಟ್ಟಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್, ಕೇವಲ ನಾಯಕತ್ವದ ಬದಲಾವಣೆಯಿಂದ ತಂಡದ ಯಶಸ್ಸು ಖಚಿತವಲ್ಲ ಹಾಗೂ ಫ್ರಾಂಚೈಸಿಯಲ್ಲಿ ಇದಕ್ಕಿಂತ ಆಳವಾದ ಸಮಸ್ಯೆಗಳಿವೆ ಎಂದು ನೇರವಾಗಿ ಹೇಳಿದ್ದಾರೆ. ಹಾಗಾದ್ರೆ ಹೀಗೆ ಹೇಳಲು ಕಾರಣ ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಆರ್.ಅಶ್ವಿನ್ ಅವರು, 2020ರ ನಂತರ ಮುಂಬೈ ಇಂಡಿಯನ್ಸ್ ತಂಡದ ಅತ್ಯುತ್ತಮ ಸಾಧನೆ ಎಂದರೆ ನಾಲ್ಕನೇ ಸ್ಥಾನ ಮಾತ್ರ. ರೋಹಿತ್ ಶರ್ಮಾ ನಾಯಕರಾಗಿದ್ದರೂ, ಹಾರ್ದಿಕ್ ಪಾಂಡ್ಯ ನಾಯಕರಾಗಿದ್ದರೂ ಫಲಿತಾಂಶದಲ್ಲಿ ದೊಡ್ಡ ವ್ಯತ್ಯಾಸವೇನೂ ಕಂಡುಬಂದಿಲ್ಲ ಎಂದು ಹೇಳಿದ್ದಾರೆ.

ಅಶ್ವಿನ್ ತಂಡದಲ್ಲಿ ದೊಡ್ಡ ಸಮಸ್ಯೆಯಿದೆ ಎಂದಿದ್ದು ಯಾಕೆ?
'ಹಾರ್ದಿಕ್ ಪಾಂಡ್ಯ ಅವರು ಸರಿಯಾಗಿ ನಾಯಕತ್ವ ನಿಭಾಯಿಸಲಿಲ್ಲ, ರೋಹಿತ್ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂಬ ವಾದವಿದೆ. ಆದರೆ ನನ್ನ ಪ್ರಕಾರ ಇಲ್ಲಿ ಆಳವಾದ ಸಮಸ್ಯೆ ಇದೆ. ದಾಖಲೆಗಳನ್ನು ನೋಡಿದಾಗ ನಾಯಕ ಯಾರೇ ಇದ್ದರೂ ಫಲಿತಾಂಶ ಸಮಾನವಾಗಿಯೇ ಇದೆ,' ಎಂದು ಅಶ್ವಿನ್ ಹೇಳಿದ್ದಾರೆ. 2020ರ ಪ್ರಶಸ್ತಿ ಗೆಲುವಿನ ಬಳಿಕ ರೋಹಿತ್ ನಾಯಕತ್ವದಲ್ಲೇ ತಂಡ 2021ರಲ್ಲಿ ಐದನೇ ಸ್ಥಾನ, 2022ರಲ್ಲಿ ಹತ್ತನೇ ಸ್ಥಾನ ಪಡೆದಿತ್ತು ಮತ್ತು 2023ರಲ್ಲಿ ಕ್ವಾಲಿಫೈಯರ್ 2 ಹಂತದಲ್ಲಿ ಹೊರಬಿದ್ದಿತ್ತು.
ಎಂಐ ಡ್ರೆಸ್ಸಿಂಗ್ ರೂಮ್ ಸಂಸ್ಕೃತಿ..
'ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಎಂ.ಎಸ್. ಧೋನಿ ಅವರನ್ನು ಹೇಗೆ ಬೇರ್ಪಡಿಸಲು ಸಾಧ್ಯವಿಲ್ಲವೋ, ಹಾಗೆಯೇ ಮುಂಬೈ ಇಂಡಿಯನ್ಸ್ ಪರಂಪರೆಯಿಂದ ರೋಹಿತ್ ಶರ್ಮಾ ಅವರನ್ನು ಬೇರೆ ಮಾಡಲು ಆಗುವುದಿಲ್ಲ. ತಂಡದ ಶ್ರೇಷ್ಠ ಸಂಸ್ಕೃತಿ ಮತ್ತು ಸ್ಥಿರತೆಯನ್ನು ಮರಳಿ ತರುವ ಪ್ರಯತ್ನವಾಗಿ ಈ ನಿರ್ಧಾರ ಕೈಗೊಂಡಿರಬಹುದು. ಡ್ರೆಸ್ಸಿಂಗ್ ರೂಮ್‌ನಲ್ಲಿ ಪ್ರತಿಯೊಬ್ಬ ಆಟಗಾರನೂ ರೋಹಿತ್ ಅವರನ್ನು ಗೌರವಿಸುತ್ತಾರೆ. ಕೀರನ್ ಪೊಲಾರ್ಡ್ ಮತ್ತು ರೋಹಿತ್ ನಡುವಿನ ಉತ್ತಮ ಬಾಂಧವ್ಯವೂ ಈ ಮರಳುವಿಕೆಗೆ ಕಾರಣವಾಗಿರಬಹುದು,' ಎಂದು ತಿಳಿಸಿದ್ದಾರೆ.
ರೋಹಿತ್ ಶರ್ಮಾ ನಾಯಕತ್ವದ ಬಗ್ಗೆ ಅಶ್ವಿನ್ ಹೇಳಿದ್ದೇನು?
ಬೌಲರ್‌ಗಳು ಮತ್ತು ಫೀಲ್ಡರ್‌ಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ತಂತ್ರಗಾರಿಕೆ ರೋಹಿತ್ ಶರ್ಮಾ ಅವರಿಗೆ ಚೆನ್ನಾಗಿ ತಿಳಿದಿದೆ ಎಂದಿರುವ ಅಶ್ವಿನ್, ತಂಡದಲ್ಲಿ ಜಸ್‌ಪ್ರೀತ್ ಬುಮ್ರಾ ಹಾಗೂ ಹೊಸದಾಗಿ ಸೇರಿಕೊಂಡಿರುವ ಅರ್ಷದೀಪ್ ಸಿಂಗ್ ಅವರಂತಹ ವೇಗಿಗಳಿದ್ದಾರೆ. ವಿಲ್ ಜ್ಯಾಕ್ಸ್ ಬೌಲಿಂಗ್‌ನಲ್ಲಿ ನೆರವಾಗಬಲ್ಲರು ಮತ್ತು ಸ್ಪಿನ್ ವಿಭಾಗಕ್ಕೆ ಮಿಚೆಲ್ ಸ್ಯಾಂಟ್ನರ್ ಇದ್ದಾರೆ. ಆದರೆ ಐದನೇ ಬೌಲರ್ ಯಾರಾಗಬೇಕು ಮತ್ತು ಸೂಕ್ತ ಭಾರತೀಯ ಸ್ಪಿನ್ನರ್‌ಗಳನ್ನು ಗುರುತಿಸುವುದು ತಂಡಕ್ಕೆ ಮುಖ್ಯವಾಗಿದೆ. ಅರ್ಷ್‌ದೀಪ್ ಸೇರ್ಪಡೆಯಿಂದ ಬೌಲಿಂಗ್ ಬಲ ಹೆಚ್ಚಿದರೂ, 2020ರ ನಂತರವೂ ಮುಂಬೈ ಬಳಿ ಉತ್ತಮ ಬೌಲಿಂಗ್ ಪಡೆಯಿತ್ತು ಎಂಬುದನ್ನು ಮರೆಯುವಂತಿಲ್ಲ ಎಂದಿದ್ದಾರೆ.
ಅಷ್ಟೇ ಅಲ್ಲದೆ ತಂಡದ ಆಟಗಾರರ ವಯಸ್ಸಿನ ವಿಚಾರವನ್ನೂ ಆರ್.ಅಶ್ವಿನ್ ಪ್ರಸ್ತಾಪಿಸಿದ್ದಾರೆ. ಇದು ವಯಸ್ಸಾಗುತ್ತಿರುವ ತಂಡದ ಲಕ್ಷಣಗಳನ್ನು ತೋರಿಸುತ್ತಿದ್ದು, ಜಸ್‌ಪ್ರೀತ್ ಬುಮ್ರಾ ಗಾಯದಿಂದ ಚೇತರಿಸಿಕೊಂಡು ಮರಳುತ್ತಿದ್ದಾರೆ ಮತ್ತು ರೋಹಿತ್ ಶರ್ಮಾ ಕೂಡ ತಮ್ಮ ವೃತ್ತಿಜೀವನದ ಕೊನೆಯ ಹಂತದಲ್ಲಿದ್ದಾರೆ ಎಂದು ಹೇಳಿದ್ದಾರೆ.
ನಾಯಕತ್ವದಿಂದ ಸಿಗುವ ಭರವಸೆ..
ರೋಹಿತ್ ನಾಯಕನಾಗಿ ಕಡಿಮೆ ತಪ್ಪುಗಳನ್ನು ಮಾಡುವ ಸಾಧ್ಯತೆ ಇದೆ. ಆದರೂ ಕೇವಲ ನಾಯಕತ್ವದಿಂದ ಮಾತ್ರ ಯಶಸ್ಸು ಸಿಗುತ್ತದೆಯೇ ಎಂಬ ಪ್ರಶ್ನೆಗೆ ಇತಿಹಾಸ ಪೂರ್ಣ ಉತ್ತರ ನೀಡುವುದಿಲ್ಲ ಎಂದು ಅಶ್ವಿನ್ ಎಚ್ಚರಿಸಿದ್ದಾರೆ. ಆದರೂ, ರೋಹಿತ್ ಮರಳಿರುವುದು ಮತ್ತು ತಂಡದ ಬಲವನ್ನು ಗಮನಿಸಿದಾಗ, ಮುಂಬೈ ಇಂಡಿಯನ್ಸ್ ತಂಡವನ್ನು ಮತ್ತೊಮ್ಮೆ ಪ್ರಶಸ್ತಿಯ ಸ್ಪರ್ಧಿಗಳಲ್ಲಿ ಒಂದಾಗಿ ಪರಿಗಣಿಸಬೇಕಾಗುತ್ತದೆ ಎಂದು ಅವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.


Click it and Unblock the Notifications
