ವೀರಶೈವ-ಲಿಂಗಾಯತ ಒಂದೇ ನಾಣ್ಯದ ಎರಡು ಮುಖಗಳು ಎಂದ ಬಿ.ವೈ ವಿಜಯೇಂದ್ರ; ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆಗೆ ನೆಟ್ಟಿಗರ ತೀವ್ರ ವಿರೋಧ
ವೀರಶೈವ ಹಾಗೂ ಲಿಂಗಾಯತ ಒಂದೇ ನಾಣ್ಯದ ಎರಡು ಮುಖಗಳು ಎಂದು ಕರ್ನಾಟಕದ ಬಿಜೆಪಿ ರಾಜಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಹೇಳಿದ್ದಾರೆ.
ನವೆಂಬರ್ 28ರಂದು ನಡೆದ ಕಾರ್ಯಕ್ರಮದಲ್ಲಿ ಬಿ.ವೈ ವಿಜಯೇಂದ್ರ ಅವರು, ಹಿಂದೂ ನಾವೆಲ್ಲ ಒಂದು ಎಂದು ಹೇಳಿದ್ದು ಭಾರೀ ಟೀಕೆಗೆ ಕಾರಣವಾಗಿತ್ತು. ಕೆಲವರು ಈ ಮಾತನ್ನು ಒಪ್ಪದೆ ಆಕ್ಷೇಪ ವ್ಯಕ್ತಪಡಿಸಿದ ಹಿನ್ನಲೆ, ಬಿ.ವೈ ವಿಜಯೇಂದ್ರ ಅವರು ಭಾಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದರು. ಇದೀಗ ಈ ವಿಚಾರವಾಗಿ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ವೀರಶೈವ ಹಾಗೂ ಲಿಂಗಾಯತ ಒಂದೇ ನಾಣ್ಯದ ಎರಡು ಮುಖಗಳು ಎಂದಿದ್ದಾರೆ. ಇದಕ್ಕೆ ನೆಟ್ಟಿಗರು ಹೇಳಿದ್ದೇನು ಎನ್ನುವ ವಿವರ ಇಲ್ಲಿದೆ.

ನಿನ್ನೆ ಬಸವಕಲ್ಯಾಣ ಕಾರ್ಯಕ್ರಮದಲ್ಲಿ ನನ್ನ ಅಭಿಪ್ರಾಯ ವ್ಯಕ್ತಪಡಿಸುವಾಗ ನನ್ನ ಮಾತಿಗೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೇ, ನಾನು ಆಡಿದ ಮಾತುಗಳು ವೀರಶೈವ ಲಿಂಗಾಯತ ಮಹಾಸಭಾ ತೆಗೆದುಕೊಂಡ ನಿರ್ಧಾರ ಮತ್ತು ಅವರ ನಿಲುವನ್ನು ನಾನು ಹೇಳಿದ್ದೇನೆ. ವೀರಶೈವ ಮಹಾಸಭಾ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಕರ್ನಾಟಕ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಹೇಳಿದ್ದಾರೆ.
ವೀರಶೈವ ಹಾಗೂ ಲಿಂಗಾಯತ ಒಂದೇ ನಾಣ್ಯದ ಎರಡು ಮುಖಗಳು. ಸಾವಿರಾರು ವರ್ಷದ ಸಂಬಂಧಗಳನ್ನು ಹಾಳು ಮಾಡುವುದು ಸರಿಯಲ್ಲ. ಕೆಲವರು ಕೇವಲ ರಾಜಕೀಯ ಕಾರಣಕ್ಕಾಗಿ ಲಿಂಗಾಯತ ಪ್ರತ್ಯೇಕ ಧರ್ಮ ಬೇಕು ಅಂತ ಹೇಳುತ್ತಿದ್ದಾರೆ. ಸಮಾಜದಲ್ಲಿ ಒಡಕು ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಸಾವಿರಾರು ವರ್ಷಗಳಿಂದ ವೀರಶೈವ ಮತ್ತು ಲಿಂಗಾಯತ ಶಬ್ದಗಳ ನಡುವೆ ವ್ಯತ್ಯಾಸಗಳು ಸಂಬಂಧಗಳಿಗೆ ಯಾವತ್ತು ಧಕ್ಕೆ ಬಂದಿಲ್ಲ. ನನ್ನ ಹೇಳಿಕೆಯಲ್ಲಿ ಸ್ಪಷ್ಟತೆಯಿದೆ. ವೀರಶೈವ - ಲಿಂಗಾಯತರು ಯಾವತ್ತಿದ್ದರೂ ಒಂದೇ. ಇವರನ್ನು ದೂರ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.
ಮುಂದುವರಿದು ಅಭಿಪ್ರಾಯಕ್ಕೆ ತಾತ್ವಿಕವಾಗಿ ವಿರೋಧ ಮಾಡಬಹುದು. ಆದರೇ, ವೈಯುಕ್ತಿಕವಾಗಿ ಅಭಿಪ್ರಾಯವನ್ನೇ ಹೇಳಬಾರದು ಎನ್ನುವುದು ಸರಿಯಲ್ಲ. ಎಲ್ಲರ ಅಭಿಪ್ರಾಯವನ್ನು ಎಲ್ಲರೂ ಗೌರವಿಸಬೇಕು. ಹೇಳಿಕೆಗೆ ವಿರೋಧವಿದ್ದರೆ ತಾತ್ವಿಕವಾಗಿ ವಿರೋಧಿಸಬೇಕು. ಲಿಂಗಾಯತ ಹಾಗೂ ವೀರಶೈವ ಎರಡೂ ಒಂದೇ ಎಂದು ನಂಬಿದವನು. ನನ್ನ ಅಭಿಪ್ರಾಯ ವೈಯಕ್ತಿಕ ಅಭಿಪ್ರಾಯ ಅಲ್ಲ. ವೀರಶೈವ ಲಿಂಗಾಯತ ಮಹಾಸಭಾ ಅಭಿಪ್ರಾಯವನ್ನು ನಾನು ವ್ಯಕ್ತಪಡಿಸಿದ್ದೇನೆ ಅಷ್ಟೇ ಎಂದು ಹೇಳಿದ್ದಾರೆ.
BY Vijayendra: ನೆಟ್ಟಿಗರು ಹೇಳಿದ್ದೇನು ?
ಇನ್ನು ವೀರಶೈವ ಹಾಗೂ ಲಿಂಗಾಯತ ಒಂದೇ ನಾಣ್ಯದ ಎರಡು ಮುಖಗಳು ಎನ್ನುವ ಬಿ.ವೈ ವಿಜಯೇಂದ್ರ ಅವರ ಹೇಳಿಕೆಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಮಹೇಶ್ ಬಸಾಪುರ ಎನ್ನುವವರು, ಲಿಂಗಾಯತ ಬಸವಾದಿ ಶರಣರು ಕಟ್ಟಿದ ಧರ್ಮ. ಲಿಂಗಾಯತರು ಕಲ್ಯಾಣ ಕ್ರಾಂತಿಯ ನಂತರ ಶಕ್ತಿಹೀನರಾದಾಗ ಅವರನ್ನ ಸನಾತನದ ಶೂದ್ರರನ್ನಾಗಿಸಲು ಕಟ್ಟಿದ ಜ್ಯಾತಿ ವೀರಶೈವ , 12ನೇ ಶತಮ್ಮಾನಕ್ಕೂ ಮೊದಲು ವೀರಶೈವ ಪದ ಬಳಕೆಯಲ್ಲಿದ್ದದ್ದಕ್ಕೆ ಒಂದು ಪುರಾವೆ ಇಲ್ಲ. ಹಳಕಟ್ಟಿ, ಕಲ್ಬುರ್ಗಿಯವರು ಸಂಶೋಧನೆ ಮಾಡದಿದ್ರೆ ನಾವೂ ಬಸವಣ್ಣನ್ನ ನಂದಿ ಅಂದು ಕೊಳ್ತಿದ್ವಿ ಎಂದಿದ್ದಾರೆ.
ಆರ್‌ಎಸ್ಎಸ್ ಅವರನ್ನು ಮೆಚ್ಚಿಸಲು ಹಿಂದೂ ಮತ್ತು ಲಿಂಗಾಯತ ಒಂದು ಅಂತ ಹೇಳಿಕೆ ಕೊಟ್ಟಿದ್ದಕ್ಕೆ ನಿಮಗೆ ಧಿಕ್ಕಾರ. ನಿಮ್ಮ ಗುಲಾಮಗಿರಿ ನೋಡಿ ಬಸವಣ್ಣ ಮತ್ತು ಬಸವಾದಿ ಪ್ರಮಥರು ನಗುತ್ತಿರುತ್ತಾರೆ. ಶ್ರೀ ಗುರು ಬಸವಲಿಂಗಾಯನಮಃ. ಮತ್ತೊಮ್ಮೆ ನಿಮಗೆ ಧಿಕ್ಕಾರ. ಲಿಂಗಾಯತ ಬೇರೆ, ವೀರಶೈವ ಬೇರೆ, ಹಿಂದೂ ಬೇರೆ ಎಂದು ನೆಟ್ಟಿಗರು ಹೇಳಿದ್ದಾರೆ.
ಮಹಾಸಭೆಯ ನಿಲುವೇ ಇಡೀ ಲಿಂಗಾಯತ ಸಮುದಾಯದ ಅಂತಿಮ ತೀರ್ಮಾನವಲ್ಲ! ವೀರಶೈವ-ಲಿಂಗಾಯತ ಒಂದೇ ಎನ್ನುವುದು ಒಂದು ಅಭಿಪ್ರಾಯವಾದರೆ, ಪ್ರತ್ಯೇಕ ಧರ್ಮ ಎನ್ನುವುದು ಮತ್ತೊಂದು ತಾತ್ವಿಕ ನಿಲುವು. ಅದನ್ನು ರಾಜಕೀಯ ಪ್ರೇರಿತ ಎನ್ನುವುದು ಸರಿಯಲ್ಲ. ಒಗ್ಗಟ್ಟು ಎಂದರೆ ಭಿನ್ನಾಭಿಪ್ರಾಯ ಹತ್ತಿಕ್ಕುವುದಲ್ಲ; ಪರಸ್ಪರ ಗೌರವಿಸುವುದು! ಎಂದೂ ನೆಟ್ಟಿಗರು ಬಿ.ವೈ ವಿಜಯೇಂದ್ರ ಅವರಿಗೆ ತಿರುಗೇಟು ಕೊಟ್ಟಿದ್ದಾರೆ.





Click it and Unblock the Notifications
