India vs Pakistan: ಕೊಲಂಬೋದಲ್ಲಿ ಭಾರತ vs ಪಾಕಿಸ್ತಾನ ಪಂದ್ಯ?
ಹೈಬ್ರಿಡ್ ಮಾದರಿಯಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಯೋಜಿಸಲು ಕೊನೆಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಒಪ್ಪಿಕೊಂಡಿದೆ. ಈ ಮೂಲಕ ಭಾರತದ ಪಂದ್ಯಗಳನ್ನು ಪಾಕಿಸ್ತಾನದ ಹೊರಗೆ ಆಯೋಜಿಸಲಾಗುತ್ತದೆ. ಏಷ್ಯಾಕಪ್ ಪಂದ್ಯಾವಳಿ ರೀತಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳನ್ನು ಆಯೋಜನೆ ಮಾಡಲಾಗುತ್ತದೆ. ಆದರೆ ಭಾರತದ ಪಂದ್ಯಗಳನ್ನು ಎಲ್ಲಿ ಅಯೋಜಿಸಲಾಗುತ್ತದೆ ಎನ್ನುವ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲವಾದರೂ ಶ್ರೀಲಂಕಾ ಅಥವಾ ದುಬೈನಲ್ಲಿ ನಡೆಸುವ ಸಾಧ್ಯತೆ ಇದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ( ಬಿಸಿಸಿಐ) ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಂತಿಮವಾಗಿ ಒಂದು ಒಪ್ಪಂದಕ್ಕೆ ಬಂದಿವೆ. ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನೂತನ ಅಧ್ಯಕ್ಷ ಜಯ್ ಶಾ ನೇತೃತ್ವದಲ್ಲಿ ಒಪ್ಪಂದ ಮಾಡಿಕೊಂಡಿದ್ದು, ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲು ಒಪ್ಪಿಕೊಂಡಿದೆ.

ಭಾರತದ ಎಲ್ಲಾ ಪಂದ್ಯಗಳು ತಟಸ್ಥ ಸ್ಥಳದಲ್ಲಿ ನಡೆಯಲಿವೆ. ಭಾರತ ಸೆಮಿಫೈನಲ್ ತಲುಪದೇ ಇದ್ದರೆ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಯಲಿವೆ. 2026ರಲ್ಲಿ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯಾವಳಿಗೆ ಪಾಕಿಸ್ತಾನ ಭಾರತಕ್ಕೆ ಬರಬೇಕು ಎಂದು ಬಿಸಿಸಿಐ ಒತ್ತಾಯಿಸುವುದಿಲ್ಲ ಎಂದು ಹೇಳಿದೆ.
ನವೆಂಬರ್ 11ರೊಳಗೆ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ವೇಳಾಪಟ್ಟಿಯನ್ನು ಘೋಷಿಸಬೇಕಿದ್ದರೂ, ಡಿಸೆಂಬರ್ 15 ನೇ ತಾರೀಖು ಬಂದರೂ ಇನ್ನೂ ಘೋಷಣೆ ಮಾಡಿಲ್ಲ. ಈಗಾಗಲೇ ವೇಳಾಪಟ್ಟಿ ಪ್ರಕಟ ತುಂಬಾ ತಡವಾಗಿದ್ದು ಸೋಮವಾರ (ಡಿಸೆಂಬರ್ 16) ವೇಳಾಪಟ್ಟಿ ಘೋಷಣೆ ಮಾಡುವ ಸಾಧ್ಯತೆ ಇದೆ.
ಕೊಲಂಬೋದಲ್ಲಿ ಭಾರತ ಪಾಕಿಸ್ತಾನ ಪಂದ್ಯ?
ಯುಎಇಯ ದುಬೈನಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯ ನಡೆಯಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು, ಆದರೆ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಪಂದ್ಯಗಳನ್ನು ಆಯೋಜಿಸಲು ಈಗ ಕೊಲಂಬೋ ಕೂಡ ಮುಂಚೂಣಿಯಲ್ಲಿದೆ. ಭಾರತ ಮತ್ತು ಪಾಕಿಸ್ತಾನ ಪಂದ್ಯ ಕೊಲಂಬೊದಲ್ಲಿ ನಡೆಯುವ ಸಾಧ್ಯತೆ ಇದೆ. 2026ರ ಭಾರತದಲ್ಲಿ ನಡೆಯುವ ಟಿ20 ವಿಶ್ವಕಪ್‌ನ ಭಾರತ ಪಾಕಿಸ್ತಾನ ಪಂದ್ಯ ಕೂಡ ಕೊಲಂಬೋದಲ್ಲಿ ನಡೆಯುವ ಸಾಧ್ಯತೆ ಬಗ್ಗೆ ಚರ್ಚಿಸಲಾಗುತ್ತಿದೆ.
ನಾಳೆ ವೇಳಾಪಟ್ಟಿ ಬಿಡುಗಡೆ?
ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ವೇಳಾಪಟ್ಟಿ ಸೋಮವಾರ ಬಿಡುಗಡೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಪಾಕಿಸ್ತಾನ ಈಗಾಗಲೇ ಲಾಹೋರ್, ಇಸ್ಲಮಾಬಾದ್ ಕ್ರೀಡಾಂಗಣಗಳನ್ನು ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗಾಗಿ ನವೀಕರಣ ಮಾಡಲಾಗುತ್ತಿದೆ.












Click it and Unblock the Notifications