ಕೊನೆಯ 5 ಎಸೆತಗಳಲ್ಲಿ 24 ರನ್ ಸಿಡಿಸಿದ ಸ್ಟೋಯ್ನಿಸ್; ರಾಜಸ್ಥಾನ್ ರಾಯಲ್ಸ್‌ಗೆ 223 ರನ್‌ಗಳ ಗುರಿ ನೀಡಿದ ಪಂಜಾಬ್ ಕಿಂಗ್ಸ್
PBKS VS RR IPL 2026: ಮುಲ್ಲನ್‌ಪುರ್‌ನ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ (ಏಪ್ರಿಲ್ 28) ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿವೆ. ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 222 ರನ್‌ಗಳನ್ನು ಪೇರಿಸಿತು. ಮಾರ್ಕಸ್ ಸ್ಟೋಯ್ನಿಸ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಪಿಬಿಕೆಎಸ್ ಈ ಬೃಹತ್ ರನ್‌ಗಳನ್ನು ಕಲೆಹಾಕಿತು.
ಪಂಜಾಬ್ ಕಿಂಗ್ಸ್ ಪರ ಮಾರ್ಕಸ್ ಸ್ಟೋಯ್ನಿಸ್ ಅವರು ಕೇವಲ 22 ಎಸೆತಗಳಲ್ಲಿ 4 ಬೌಂಡರಿ, 6 ಸಿಕ್ಸರ್‌ಗಳ ಸಹಿತ ಅಜೇಯ 62 ರನ್ ಚಚ್ಚುವ ಮೂಲಕ ರಾಜಸ್ಥಾನ್ ಬೌಲರ್‌ಗಳಿಗೆ ಚಳಿ ಬಿಡಿಸಿದರು. ವಿಶೇಷವಾಗಿ ಇನಿಂಗ್ಸ್‌ನ ಕೊನೆಯ 5 ಎಸೆತಗಳಲ್ಲಿ ಅವರು 24 ರನ್ ಬಾಚುವ ಮೂಲಕ ಪಂದ್ಯದ ವೇಗವನ್ನು ಹೆಚ್ಚಿಸಿದರು. ಆರಂಭಿಕ ಆಟಗಾರ ಪ್ರಭ್‌ಸಿಮ್ರಾನ್ ಸಿಂಗ್ 59 ರನ್ ಗಳಿಸುವ ಮೂಲಕ ತಂಡಕ್ಕೆ ಉತ್ತಮ ಆರಂಭ ನೀಡಿದರು.

ಮಿಂಚಿದ ಮಾರ್ಕಸ್ ಸ್ಟೋಯ್ನಿಸ್
ಪ್ರಿಯಾಂಶ್ ಆರ್ಯ ಮತ್ತು ಶ್ರೇಯಸ್ ಅಯ್ಯರ್ ಅವರೊಂದಿಗೆ ಪ್ರಭ್‌ಸಿಮ್ರಾನ್ ನಡೆಸಿದ ಉಪಯುಕ್ತ ಜೊತೆಯಾಟಗಳು ತಂಡದ ಬೃಹತ್ ಮೊತ್ತಕ್ಕೆ ಕಾರಣವಾಯಿತು. ಪಂಜಾಬ್ ಕಿಂಗ್ಸ್ ಪರ ಮಾರ್ಕಸ್ ಸ್ಟೋಯ್ನಿಸ್ ಅಜೇಯ 62 ರನ್, ಪ್ರಭ್‌ಸಿಮ್ರಾನ್ ಸಿಂಗ್ 59(44), ಪ್ರಿಯಾಂಶ್ ಆರ್ಯ 29(11), ಕೂಪರ್ ಕನೊಲಿ 30(14), ನಾಯಕ ಶ್ರೇಯಸ್ ಅಯ್ಯರ್ 30(27) ರನ್‌ಗಳ ಕೊಡುಗೆ ನೀಡಿದರು.
ಆರ್‌ಆರ್ ಬೌಲರ್‌ಗಳ ಬೆವರಿಳಿಸಿದ ಸ್ಟೋಯ್ನಿಸ್
ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದರು. ಅದರಂತೆಯೇ ಮೊದಲು ಬ್ಯಾಟ್ ಬೀಸಿದ ಪಂಜಾಬ್ ಕಿಂಗ್ಸ್ ಬ್ಯಾಟರ್‌ಗಳು ಮಾತ್ರ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟುವ ಮೂಲಕ ಆರ್‌ಆರ್ ಬೌಲರ್‌ಗಳಿಗೆ ಬೆವರಳಿಸಿದರು. ಪಂಜಾಬ್ ಇಷ್ಟು ರನ್‌ಗಳನ್ನು ಕಲೆಹಾಕಲು ಪ್ರಮುಖ ಕಾರಣವಾಗಿದ್ದೇ ಮಾರ್ಕಸ್ ಸ್ಟೋಯ್ನಿಸ್ (62), ಪ್ರಭ್‌ಸಿಮ್ರಾನ್ ಸಿಂಗ್ (59) ಅವರ ಆಕ್ರಮಣಕಾರಿ ಬ್ಯಾಟಿಂಗ್. ಇನ್ನೂ ರಾಜಸ್ಥಾನ್ ರಾಯಲ್ಸ್ ಈ ಬೃಹತ್ ಗುರಿಯನ್ನು ಬೆನ್ನಟ್ಟಲು ಸ್ಫೋಟಕ ಆರಂಭದ ನಿರೀಕ್ಷೆಯಲ್ಲಿದೆ. ಇದೀಗ ಎಲ್ಲರ ಕಣ್ಣು 15 ವರ್ಷದ ವೈಭವ್ ಸೂರ್ಯವಂಶಿ ಅವರ ಮೇಲೆ ನೆಟ್ಟಿದೆ.












Click it and Unblock the Notifications