Champions Trophy: ಬಿಸಿಸಿಐಗೆ ಶಾಕ್ ಕೊಟ್ಟ ಪಾಕಿಸ್ತಾನ!
ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ವಿಚಾರ ಇದೀಗ ಭಾರತ ಮತ್ತು ಪಾಕಿಸ್ತಾನ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ. ಯಾವುದೇ ಕಾರಣಕ್ಕೂ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆಡಲು ಪಾಕಿಸ್ತಾನಕ್ಕೆ ಬರುವುದಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ. ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿ ನಡೆಸಲು ಕೂಡ ಕೇಳಿದೆ. ಆದರೆ ಪಾಕಿಸ್ತಾನ ಕೂಡ ಪಟ್ಟು ಹಿಡಿದಿದ್ದು, ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯಸ್ಥ ಮೊಹ್ಸಿನ್ ನಖ್ವಿ ಮಾಧ್ಯಮಗಳ ಜೊತೆ ಮಾತನಾಡಿದ್ದು, ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ಆಡಲು ಬಿಸಿಸಿಐ ನಿರಾಕರಿಸಿರುವ ಕುರಿತು ಐಸಿಸಿಯಿಂದ ಇನ್ನೂ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದ್ದಾರೆ. ಬಿಸಿಸಿಐ ಈಗಾಗಲೇ ಐಸಿಸಿಗೆ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳಿಸುವುದಿಲ್ಲ, ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿ ನಡೆಸಬೇಕು ಎಂದು ಪತ್ರಬರೆದಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೈಬ್ರಿಡ್ ಮಾದರಿಯನ್ನು ತಿರಸ್ಕರಿಸಿದ್ದು ಭಾರತ ಪಾಕಿಸ್ತಾನಕ್ಕೆ ಪ್ರಯಾಣಿಸದೇ ಇರಲು ಕಾರಣವೇನು ಎಂದು ಸ್ಪಷ್ಟನೆ ಕೊಡುವಂತೆ ಐಸಿಸಿಗೆ ಕೇಳಿದೆ.

2008ರಲ್ಲಿ ಪಾಕಿಸ್ತಾನ ಬೆಂಬಲಿತ ಉಗ್ರರು ಮುಂಬೈನಲ್ಲಿ ಭಯೋತ್ಪಾದನಾ ದಾಳಿ ನಡೆಸಿದ ಬಳಿಕ ಭಾರತ ತಂಡವು ಪಾಕಿಸ್ತಾನದಲ್ಲಿ ಯಾವುದೇ ಕ್ರಿಕೆಟ್ ಪಂದ್ಯವನ್ನು ಆಡಿಲ್ಲ. ಐಸಿಸಿ ಪಂದ್ಯಾವಳಿಗಳಲ್ಲಿ ಮಾತ್ರ ಎರಡು ತಂಡಗಳು ಮುಖಾಮುಖಿಯಾಗುತ್ತವೆ.
ಹೈಬ್ರಿಡ್ ಮಾದರಿ ಮಾತೇ ಇಲ್ಲ!
"ಪಾಕಿಸ್ತಾನಕ್ಕೆ ಭಾರತ ತಂಡವನ್ನು ಕಳಿಸದೇ ಇರಲು ಕಾರಣವೇನು ಎಂದು ನಮಗೆ ತಿಳಿಸಿದರೆ, ನಾವು ಅದಕ್ಕೆ ಪರಿಹಾರ ನೀಡುತ್ತೇವೆ. ಅವರು ನಮ್ಮ ಜೊತೆ ಮಾತನಾಡಬೇಕು, ಚಾಂಪಿಯನ್ಸ್ ಟ್ರೋಫಿ ಆಡಲು ಭಾರತ ತಂಡವು ಪಾಕಿಸ್ತಾನಕ್ಕೆ ಬರದೇ ಇರಲು ಯಾವುದೇ ಕಾರಣಗಳು ಇಲ್ಲ ಎಂದು ಭಾವಿಸುತ್ತೇನೆ" ಎಂದು ಹೇಳಿದ್ದಾರೆ.
ಪಾಕಿಸ್ತಾನದ ಹೆಮ್ಮೆ ಮತ್ತು ಗೌರವ ನಮ್ಮ ಮೊದಲ ಆದ್ಯತೆ. ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲಿ ಮಾತ್ರ ನಡೆಯುತ್ತದೆ. ಹೈಬ್ರಿಡ್ ಮಾದರಿಯನ್ನು ನಾವು ಒಪ್ಪುವ ಪ್ರಶ್ನೆಯೇ ಇಲ್ಲ. ಭಾರತ ತಂಡಕ್ಕೆ ಪಾಕಿಸ್ತಾನಕ್ಕೆ ಬರಲು ಯಾವುದೇ ಸಮಸ್ಯೆ ಇದ್ದರು ನಮಗೆ ತಿಳಿಸಬಹುದು, ನಾವು ಅದನ್ನು ಪರಿಹರಿಸುತ್ತೇವೆ ಎಂದು ಹೇಳಿದರು.
ಹೈಬ್ರಿಡ್ ಮಾದರಿಯನ್ನು ಅನುಸರಿಸಲು ಸಾಧ್ಯವಿಲ್ಲ, ನಮ್ಮ ನಿಲುವಿಗೆ ನಾವು ಬದ್ದರಾಗಿದ್ದೇವೆ. ಐಸಿಸಿ ಆದಷ್ಟು ಬೇಗ ವೇಳಾಪಟ್ಟಿಯನ್ನು ಪ್ರಕಟಿಸಲಿ ಎಂದು ಕಾಯುತ್ತಿರುವುದಾಗಿ ತಿಳಿಸಿದರು.
ಡಿಸೆಂಬರ್ 1ರಂದು ಜಯ್ ಶಾ ಐಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಬಳಿಕ ಪಾಕಿಸ್ತಾನಕ್ಕೆ ಮತ್ತಷ್ಟು ಸಮಸ್ಯೆಯಾಗಬಹುದಾ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಉತ್ತರ ನೀಡಿದ ಅವರು, ಪ್ರತಿಯೊಂದು ಮಂಡಳಿಯು ಸ್ವತಂತ್ರವಾಗಿದೆ, ತನ್ನದೇ ಆದ ಅಭಿಪ್ರಾಯವನ್ನು ಹೊಂದಿದೆ. ಐಸಿಸಿ ಎಲ್ಲಾ ಕ್ರಿಕೆಟ್ ಮಂಡಳಿಗಳನ್ನು ಪ್ರತಿನಿಧಿಸುವ ಕಾರಣ, ನಮ್ಮ ಅಭಿಪ್ರಾಯಕ್ಕೆ ಮನ್ನಣೆ ಸಿಗುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಲಿ ಲಾಹೋರ್, ಕರಾಚಿ ಮತ್ತು ರಾವಲ್ಪಿಂಡಿ ಕ್ರೀಡಾಂಗಣಗಳನ್ನು ಆಧುನೀಕರಣಗೊಳಿಸುತ್ತಿದೆ. ಈಗಾಗಲೇ ಭರದಿಂದ ಕೆಲಸ ನಡೆಯುತ್ತಿದ್ದು ಒಂದೆರಡು ತಿಂಗಳಿನಲ್ಲಿ ಕ್ರೀಡಾಂಗಣಗಳು ಸಂಪೂರ್ಣ ಸಜ್ಜಾಗುವ ನಿರೀಕ್ಷೆ ಮಾಡಲಾಗಿದೆ.












Click it and Unblock the Notifications