India vs Australia: ಎರಡನೇ ಟೆಸ್ಟ್‌ನಲ್ಲಿ ಕನ್ನಡಿಗನಿಗೆ ಇಲ್ಲ ಸ್ಥಾನ; ಹೇಗಿರಲಿದೆ ಪ್ಲೇಯಿಂಗ್ ಇಲೆವೆನ್
ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲನೇ ಪಂದ್ಯದಲ್ಲಿ ಗೆಲುವು ಸಾಧಿಸಿರುವ ಭಾರತ ಎರಡನೇ ಟೆಸ್ಟ್‌ಗೆ ಸಜ್ಜಾಗುತ್ತಿದೆ. ಡಿಸೆಂಬರ್ 6ರಂದು ಅಡಿಲೇಡ್ ಓವಲ್‌ನಲ್ಲಿ ಎರಡನೇ ಟೆಸ್ಟ್ ಆರಂಭವಾಗಲಿದೆ. ಮೊದಲ ಟೆಸ್ಟ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿದ್ದರೂ, ಎರಡನೇ ಟೆಸ್ಟ್‌ನಲ್ಲಿ ಭಾರತ ಪ್ಲೇಯಿಂಗ್ ಇಲೆವೆನ್ ಅನಿವಾರ್ಯವಾಗಿ ಬದಲಾವಣೆಯಾಗಲಿದೆ.
ಎರಡನೇ ಮಗುವಿನ ತಂದೆಯಾಗಿರುವ ರೋಹಿತ್ ಶರ್ಮಾ ಮೊದಲನೇ ಟೆಸ್ಟ್‌ಗೆ ಅಲಭ್ಯರಾಗಿದ್ದರು. ಮೊದಲ ಟೆಸ್ಟ್‌ನ ಮೂರನೇ ದಿನದಾಟದ ವೇಳೆಗೆ ತಂಡವನ್ನು ಸೇರಿಕೊಂಡಿದ್ದರು. ರೋಹಿತ್ ಅನುಪಸ್ಥಿತಿಯಲ್ಲಿ ಜಸ್ಪ್ರೀತ್ ಬುಮ್ರಾ ತಂಡವನ್ನು ಮುನ್ನಡೆಸಿದ್ದರು. ಈಗ ರೋಹಿತ್ ಶರ್ಮಾ ಎರಡನೇ ಟೆಸ್ಟ್‌ನಲ್ಲಿ ನಾಯಕತ್ವ ವಹಿಸಿಕೊಳ್ಳಲಿದ್ದಾರೆ.

ಅಡಿಲೇಡ್‌ನಲ್ಲಿ ನಡೆಯುವುದು ಪಿಂಕ್ ಬಾಲ್ ಟೆಸ್ಟ್ ಆಗಿರುವ ಕಾರಣ, ಭಾರತ ವಿಶೇಷವಾಗಿ ಸಿದ್ಧತೆ ನಡೆಸಿದೆ. ಪ್ರೈಮ್‌ಮಿನಿಸ್ಟರ್ ಪ್ಲೇಯಿಂಗ್ 11 ವಿರುದ್ಧ ಭಾರತ ಎರಡು ದಿನಗಳ ಅಭ್ಯಾಸ ಪಂದ್ಯವನ್ನು ಆಡಿದ್ದು, ಭಾರತ ಗೆಲುವು ಸಾಧಿಸಿದ್ದು, ಎರಡನೇ ಟೆಸ್ಟ್ ಆಡಲು ವಿಶ್ವಾಸದಿಂದಲೇ ಕಾಯುತ್ತಿದೆ.
ಪ್ಲೇಯಿಂಗ್ ಇಲೆವೆನ್‌ನಲ್ಲಿ ಬದಲಾವಣೆ
ಮೊದಲ ಟೆಸ್ಟ್ ಪಂದ್ಯದಲ್ಲಿ ಹೊರಗುಳಿದಿದ್ದ ರೋಹಿತ್ ಶರ್ಮಾ ಎರಡನೇ ಟೆಸ್ಟ್‌ನಲ್ಲಿ ಆಡಲಿದ್ದು ಭಾರತ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅನಿವಾರ್ಯವಾಗಿ ಬದಲಾವಣೆಯಾಗಲಿದೆ. ಮೊದಲ ಟೆಸ್ಟ್‌ನಲ್ಲಿ ಅವಕಾಶ ಸಿಕ್ಕರೂ ಅಷ್ಟೇನೂ ಉತ್ತಮ ಪ್ರದರ್ಶನ ನೀಡದ ಕರ್ನಾಟಕದ ಬ್ಯಾಟರ್ ದೇವದತ್ ಪಡಿಕ್ಕಲ್ ಎರಡನೇ ಟೆಸ್ಟ್‌ನಲ್ಲಿ ಹೊರಗುಳಿಯುವುದು ಬಹುತೇಕ ಖಚಿತವಾಗಿದೆ. ದೇವದತ್ ಪಡಿಕ್ಕಲ್ ರೋಹಿತ್ ಶರ್ಮಾಗೆ ಜಾಗ ಬಿಟ್ಟುಕೊಡಲಿದ್ದಾರೆ.
ಉಳಿದಂತೆ ಬಹುತೇಕ ಮೊದಲ ಪಂದ್ಯದಲ್ಲಿ ಆಡಿದ್ದ ತಂಡವೇ ಕಣಕ್ಕಿಳಿಯಲಿದೆ. ನಿತೀಶ್ ಕುಮಾರ್ ರೆಡ್ಡಿ ಮೊದಲ ಪಂದ್ಯದಲ್ಲೇ ಉತ್ತಮ ಪ್ರದರ್ಶನ ನೀಡಿದ್ದು ಭರವಸೆ ಮೂಡಿಸಿದ್ದಾರೆ. ಹರ್ಷಿತ್ ರಾಣಾ ಅಭ್ಯಾಸ ಪಂದ್ಯದಲ್ಲಿ 4 ವಿಕೆಟ್ ಪಡೆದಿದ್ದು, ಎರಡನೇ ಟೆಸ್ಟ್‌ನಲ್ಲಿ ಮತ್ತೆ ಮಿಂಚುವ ಮುನ್ಸೂಚನೆ ಕೊಟ್ಟಿದ್ದಾರೆ. ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಅಭ್ಯಾಸ ಪಂದ್ಯದಲ್ಲಿ ಕಣಕ್ಕಿಳಿಯದೆ ವಿಶ್ರಾಂತಿ ಪಡೆದಿದ್ದರು.
ಮೊದಲ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಜೈಸ್ವಾಲ್, ಕೆಎಲ್ ರಾಹುಲ್ ಉತ್ತಮ ಪ್ರದರ್ಶನ ನೀಡಿದ್ದು ಎರಡನೇ ಟೆಸ್ಟ್‌ನಲ್ಲಿ ಈ ಜೋಡಿಯೇ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ನಾಯಕ ರೋಹಿತ್ ಶರ್ಮಾ ಮೂರನೇ ಕ್ರಮಾಂಕ ಅಥವಾ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ.
ಭಾರತ ತಂಡದ ಪ್ಲೇಯಿಂಗ್ ಇಲೆವೆನ್
ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್, ನಿತೀಶ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಹರ್ಷಿತ್ ರಾಣಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.












Click it and Unblock the Notifications