Nitish Kumar Reddy: ಚೊಚ್ಚಲ ಶತಕವನ್ನು ತನ್ನ ಪಾಲಿನ ಹೀರೋಗೆ ಅರ್ಪಿಸಿದ ನಿತೀಶ್ ರೆಡ್ಡಿ
ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ನಾಲ್ಕನೇ ಪಂದ್ಯ ಕುತೂಹಲ ಘಟ್ಟಕ್ಕೆ ಬಂದು ತಲುಪಿದೆ. ಎರಡನೇ ದಿನ 162 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಭಾರತ ಮೂರನೇ ದಿನ ದಿಟ್ಟ ಹೋರಾಟ ನೀಡಿದೆ. ಭಾರತ ಆಲ್‌ರೌಂಡರ್ ಗಳಾದ ವಾಷಿಂಗ್ಟನ್ ಸುಂದರ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಆಸ್ಟ್ರೇಲಿಯಾ ಬಲಿಷ್ಠ ಬೌಲಿಂಗ್ ಪಡೆಯನ್ನು ದಿಟ್ಟವಾಗಿ ಎದುರಿಸುವ ಮೂಲಕ ಭಾರತಕ್ಕೆ ಆಸರೆಯಾದರು.
ನಿತೀಶ್ ಕುಮಾರ್ ರೆಡ್ಡಿ ಭಾರತದ ಪಾಲಿಗೆ ಹೊಸ ಹೀರೋ ಆಗಿ ಹೊರಹೊಮ್ಮಿದ್ದಾರೆ. ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಅವರ ಆಟ ನೋಡಿ ಇಡೀ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಫಾಲೋ ಆನ್ ಭೀತಿಯನ್ನು ತಪ್ಪಿಸಿದ ನಿತೀಶ್ ಮತ್ತು ವಾಷಿಂಗ್ಟನ್ ಸುಂದರ್ ಜೋಡಿ ಟೀಂ ಇಂಡಿಯಾದ ಆಪದ್ಭಾಂಧವರಾದರು.

ಶತಕದ ಸನಿಹದಲ್ಲಿ ಆತಂಕ
ನಿತೀಶ್ ಕುಮಾರ್ ರೆಡ್ಡಿ 90 ರನ್ ಗಳಿಸಿದ ಬಳಿಕ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಿದರು. ವಾಷಿಂಗ್ಟನ್ ಸುಂದರ್ 50 ರನ್ ಗಳಿಸಿದ್ದಾಗ ನಾಥನ್ ಲಿಯಾನ್ ಬೌಲಿಂಗ್‌ನಲ್ಲಿ ಔಟಾದರು. ಬಳಿಕ ಬ್ಯಾಟಿಂಗ್‌ಗೆ ಬಂದ ಬುಮ್ರಾ 3 ಎಸೆತಗಳಲ್ಲಿ ಯಾವುದೇ ರನ್ ಗಳಿಸದೆ ಔಟಾದರು. ಭಾರತ 9 ವಿಕೆಟ್ ಕಳೆದುಕೊಂಡಿತ್ತು, 99 ರನ್ ಗಳಿಸಿದ್ದ ನಿತೀಶ್ ಕುಮಾರ್ ರೆಡ್ಡಿ ಮತ್ತೊಂದು ಕಡೆಯಲ್ಲಿದ್ದರು. ಒಂದು ಕಡೆ ಭಾರತ ಆಲ್‌ಔಟ್ ಆಗುವ ಭೀತಿ ಇದ್ದರೆ ಮತ್ತೊಂದು ಕಡೆ ನಿತೀಶ್ ಕುಮಾರ್ ರೆಡ್ಡಿ ಶತಕ ತಪ್ಪಿಸಿಕೊಳ್ಳುವ ಆತಂಕ ಕೂಡ ಇತ್ತು.
ಆದರೆ ಮೊಹಮ್ಮದ್ ಸಿರಾಜ್ ಎರಡು ಎಸೆತಗಳನ್ನು ದಿಟ್ಟವಾಗಿ ಎದುರಿಸುವ ಮೂಲಕ ವಿಕೆಟ್ ಉಳಿಸಿಕೊಂಡರು. ಓವರ್ ಬದಲಾದ ಬಳಿಕ ನಿತೀಶ್ ಕುಮಾರ್ ರೆಡ್ಡಿ ಸ್ಟ್ರೈಕ್‌ಗೆ ಬಂದರು. ಬೊಲ್ಯಾಂಡ್‌ರ ಎಸೆತದಲ್ಲಿ ಭರ್ಜರಿ ಬೌಂಡರಿ ಬಾರಿಸಿದ ಅವರು ತಮ್ಮ ಚೊಚ್ಚಲ ಶತಕ ಬಾರಿಸಿದರು.
ನಿತೀಶ್ ಕುಮಾರ್ ರೆಡ್ಡಿ ಆಸ್ಟ್ರೇಲಿಯಾದಲ್ಲಿ ಶತಕ ಬಾರಿಸಿದ ನಾಲ್ಕನೇ ಕಿರಿಯ ಭಾರತೀಯ ಆಟಗಾರ ಎನ್ನುವ ಸಾಧನೆ ಮಾಡಿದರು. ಅರ್ಧಶತಕ ಬಾರಿಸಿದ ಬಳಿಕ ಪುಷ್ಪ ಮಾದರಿಯಲ್ಲಿ ಸಂಭ್ರಮಿಸಿದ್ದ ಅವರು, ಶತಕ ಸಿಡಿಸುತ್ತಿದ್ದಂತೆ ಬ್ಯಾಟ್‌ಗೆ ಹೆಲ್ಮೆಟ್ ಹಾಕಿ ಎತ್ತಿ ಹಿಡಿದು ಸಂಭ್ರಮಾಚರಣೆ ಮಾಡಿದರು.
ಮಗನ ಆಟವನ್ನು ನೋಡುತ್ತಿದ್ದ ನಿತೀಶ್ ಕುಮಾರ್ ರೆಡ್ಡಿ ಕುಟುಂಬದ ಸಂಭ್ರಮಕ್ಕೆ ಪಾರವೇ ಇಲ್ಲದಂತಾಗಿತ್ತು. ನಿತೀಶ್ ತಂದೆ ಮೈದಾನದಲ್ಲೇ ಖುಷಿಯಿಂದ ಕಣ್ಣೀರಾಕಿದರು. 18 ವರ್ಷ 253 ದಿನವಿದ್ದಾಗ ಶತಕ ಸಿಡಿಸಿದ ಸಚಿನ್ ತೆಂಡೂಲ್ಕರ್ ಅತ್ಯಂತ ಕಿರಿಯ ಆಟಗಾರರಾಗಿದ್ದಾರೆ. ರಿಷಬ್ ಪಂತ್ 21 ವರ್ಷ 91 ದಿನ ವಯಸ್ಸಿನಲ್ಲಿ ಶತಕ ಸಿಡಿಸಿದ್ದು, ಈಗ ನಿತೀಶ್ ರೆಡ್ಡಿ 21 ವರ್ಷ 216 ದಿನ ವಯಸ್ಸಿನಲ್ಲಿ ಶತಕ ಸಿಡಿಸಿದ್ದಾರೆ.
ತಂದೆಗೆ ಶತಕ ಅರ್ಪಣೆ
ತಮ್ಮ ಈ ಐತಿಹಾಸಿಕ ಚೊಚ್ಚಲ ಶತಕವನ್ನು ನಿತೀಶ್ ಕುಮಾರ್ ರೆಡ್ಡಿ ತಮ್ಮ ತಂದೆಗೆ ಅರ್ಪಿಸಿದ್ದಾರೆ. ತನ್ನ ಸಾಧನೆಗೆ ತಂದೆಯ ಕೊಡುಗೆ ಅಪಾರವಾಗಿದೆ ಎಂದು ಹೇಳಿರುವ ಅವರು ಈ ಶತಕವನ್ನು ಅವರಿಗೆ ಅರ್ಪಿಸುತ್ತೇನೆ ಎಂದು ಹೇಳಿದರು.












Click it and Unblock the Notifications