T20 World Cup: ಚೊಚ್ಚಲ ಟಿ20 ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದ ನ್ಯೂಜಿಲೆಂಡ್
ಭಾನುವಾರ ನ್ಯೂಜಿಲೆಂಡ್ ಕ್ರಿಕೆಟ್ ಅಭಿಮಾನಿಗಳಿಗೆ ಡಬಲ್ ಖುಷಿ, ಎಂದಿಗೂ ಮರೆಯಲಾಗದ ಮಹತ್ವದ ದಿನ. ಮೊದಲನೆಯದಾಗಿ 1988ರ ಬಳಿಕ ನ್ಯೂಜಿಲೆಂಡ್ ಭಾರತದ ನೆಲದಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದರೆ, ಎರಡನೆಯದಾಗಿ ನ್ಯೂಜಿಲೆಂಡ್ ಮಹಿಳಾ ತಂಡ ಚೊಚ್ಚಲ ಮಹಿಳಾ ಟಿ20 ವಿಶ್ವಕಪ್ ಎತ್ತಿಹಿಡಿದಿದೆ. ಸೋಫಿ ಡಿವೈನ್ ನಾಯಕತ್ವದ ನ್ಯೂಜಿಲೆಂಡ್ ಮಹಿಳಾ ಟಿ20 ವಿಶ್ವಕಪ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಮೊದಲ ಟಿ20 ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿತು.
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 158 ರನ್‌ಗಳನ್ನು ಕಲೆಹಾಕಿತು. ಸುಜಿ ಬೇಟ್ಸ್ 32 ರನ್, ಅಮೆಲಿಯಾ ಕೆರ್ 43 ರನ್, ಬ್ರೂಕ್ ಹಲಿಡೆ 38 ರನ್ ಗಳಿಸುವ ಮೂಲಕ ತಂಡ ಸವಾಲಿನ ಮೊತ್ತ ಕಲೆಹಾಕಲು ಕಾರಣವಾದರು.

159 ರನ್‌ಗಳ ಸವಾಲಿನ ಗುರಿಯನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 126 ರನ್ ಮಾತ್ರ ಗಳಿಸಿ ಸೋಲೊಪ್ಪಿಕೊಂಡಿತು. ಅಮೆಲಿಯಾ ಕೆರ್ ಮತ್ತು ರೋಸ್‌ಮೆರಿ ಮೈರ್ ತಲಾ 3 ವಿಕೆಟ್ ಪಡೆಯುವ ಮೂಲಕ ಮಿಂಚಿದರು. ಪುರುಷರ ಟಿ20 ವಿಶ್ವಕಪ್‌ನಲ್ಲಿ ಕೂಡ ಫೈನಲ್‌ನಲ್ಲಿ ಭಾರತದ ಎದುರು ಮುಗ್ಗರಿಸಿದ್ದ ದಕ್ಷಿಣ ಆಫ್ರಿಕಾ, ಇದೀಗ ಮಹಿಳಾ ವಿಶ್ವಕಪ್‌ನಲ್ಲಿ ಕೂಡ ಫೈನಲ್‌ನಲ್ಲಿ ಸೋತು ಭಾರಿ ನಿರಾಸೆ ಅನುಭವಿಸಿತು.
2009 ಮತ್ತು 2010 ರ ಟಿ20 ಮಹಿಳಾ ವಿಶ್ವಕಪ್‌ನಲ್ಲಿ ಫೈನಲ್ ಪ್ರವೇಶಿಸಿದ್ದ ನ್ಯೂಜಿಲೆಂಡ್ ಪ್ರಶಸ್ತಿ ಗೆಲ್ಲುವಲ್ಲಿ ಎಡವಿತ್ತು. ಮೂರನೇ ಬಾರಿಗೆ ಟಿ20 ವಿಶ್ವಕಪ್ ಫೈನಲ್‌ನಲ್ಲಿ ತಮ್ಮ ಪ್ರಶಸ್ತಿಯ ಬರವನ್ನು ನೀಗಿಸಿಕೊಂಡಿದೆ.
ಸ್ಟಾರ್ ಆಲ್‌ರೌಂಡರ್ ಅಮೆಲಿಯಾ ಕೆರ್ ನ್ಯೂಜಿಲೆಂಡ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಬಾರಿ ವಿಶ್ವಕಪ್ ಪಂದ್ಯಾವಳಿಯಲ್ಲಿ 15 ವಿಕೆಟ್ ಪಡೆದ ಅವರು, 135 ರನ್ ಗಳಿಸಿದರು. ಫೈನಲ್‌ನಲ್ಲಿ ಆಲ್‌ರೌಂಡ್ ಪ್ರದರ್ಶನ ನೀಡಿದ ಅವರು ಪಂದ್ಯ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿ ಜೊತೆ ಪಂದ್ಯಾವಳಿ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿ ಪಡೆದುಕೊಂಡರು.
ಸೆಮಿಫೈನಲ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿದ್ದ ದಕ್ಷಿಣ ಆಫ್ರಿಕಾ ನ್ಯೂಜಿಲೆಂಡ್ ವಿರುದ್ಧ ಒತ್ತಡಕ್ಕೆ ಒಳಗಾದಂತೆ ಕಂಡು ಬಂದಿತು. ಚೊಚ್ಚಲ ಪ್ರಶಸ್ತಿ ಗೆದ್ದು ಚೋಕರ್ಸ್ ಪಟ್ಟಿ ಕಳಚಬೇಕು ಎಂದು ಎರಡೂ ತಂಡಗಳು ಕಾದಾಡಿದರು, ನ್ಯೂಜಿಲೆಂಡ್ ಮೇಲುಗೈ ಸಾಧಿಸಿತು.












Click it and Unblock the Notifications