Ind vs NZ: ಬೃಹತ್ ಮುನ್ನಡೆ ಸಾಧಿಸಿದ ನ್ಯೂಜಿಲೆಂಡ್; ಸಂಕಷ್ಟದಲ್ಲಿ ಟೀಂ ಇಂಡಿಯಾ
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಮೇಲುಗೈ ಸಾಧಿಸಿದೆ. ಎರಡನೇ ದಿನದಾಟದ ಅಂತ್ಯಕ್ಕೆ ನ್ಯೂಜಿಲೆಂಡ್ 301 ರನ್‌ಗಳ ಮುನ್ನಡೆ ಸಾಧಿಸಿದ್ದು, ಭಾರತ ಸಂಕಷ್ಟಕ್ಕೆ ಸಿಲುಕಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 156 ರನ್‌ಗಳಿಗೆ ಆಲೌಟ್ ಆದ ಬಳಿಕ ಎರಡನೇ ಇನ್ನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ಭಾರತದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿಯೇ ಎದುರಿಸಿತು.
ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಮಾಡಿತು. ಮೊದಲ ಇನ್ನಿಂಗ್ಸ್‌ನಲ್ಲಿ 259 ರನ್‌ಗಳಿಗೆ ಆಲೌಟ್ ಆಗಿತ್ತು. ವಾಷಿಂಗ್ಟನ್ ಸುಂದರ್ 7 ವಿಕೆಟ್ ಪಡೆದರೆ, ರವಿಚಂದ್ರನ್ ಅಶ್ವಿನ್ 3 ವಿಕೆಟ್ ಪಡೆದಿದ್ದರು.

ಬಳಿಕ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಭಾರತ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ನ್ಯೂಜಿಲೆಂಡ್ ಸ್ಪಿನ್ ದಾಳಿಯ ಎದುರು ತತ್ತರಿಸಿದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 156 ರನ್‌ಗಳಿಗೆ ಆಲೌಟ್ ಆಯಿತು. ಮಿಚೆಲ್ ಸ್ಯಾಂಟ್ನರ್ 7 ವಿಕೆಟ್ ಪಡೆದರೆ, ಗ್ಲೆನ್ ಫಿಲಿಪ್ಸ್ 2 ವಿಕೆಟ್ ಪಡೆದರು, ಟಿಮ್ ಸೌಥಿ 1 ವಿಕೆಟ್ ಪಡೆದರು.
ಮೊದಲ ಇನ್ನಿಂಗ್ಸ್‌ನಲ್ಲಿ 103 ರನ್‌ಗಳ ದೊಡ್ಡ ಮುನ್ನಡೆ ಪಡೆದುಕೊಂಡು ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಎರಡನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 198 ರನ್ ಗಳಿಸಿದ್ದು 301 ರನ್‌ಗಳ ಬೃಹತ್ ಮುನ್ನಡೆ ಪಡೆದುಕೊಂಡಿದೆ.
ನಾಯಕ ಟಾಮ್ ಲಾಥಮ್ ತಾಳ್ಮೆಯ ಬ್ಯಾಟಿಂಗ್ ಪ್ರದರ್ಶನ ನೀಡಿದರು. 86 ರನ್ ಗಳಿಸಿದ ಅವರು ನ್ಯೂಜಿಲೆಂಡ್ ಬೃಹತ್ ಮುನ್ನಡೆ ಪಡೆಯಲು ಅಮೂಲ್ಯ ಕೊಡುಗೆ ನೀಡಿದರು. ವಿಲ್ ಯಂಗ್ 23 ರನ್, ಡೇರಿಲ್ ಮಿಚೆಲ್ 18 ರನ್ ಗಳಿಸಿದರು. ವಿಕೆಟ್ ಕೀಪರ್ ಟಾಮ್ ಬ್ಲಂಡೆಲ್ ಅಜೇಯ 30 ರನ್ ಗಳಿಸಿದ್ದು, ಗ್ಲೆನ್ ಫಿಲಿಪ್ಸ್ ಅಜೇಯ 9 ರನ್ ಗಳಿಸಿ ಕ್ರೀಸ್‌ನಲ್ಲಿದ್ದು, ಮೂರನೇ ದಿನಕ್ಕೆ ವಿಕೆಟ್ ಕಾಯ್ದುಕೊಂಡಿದ್ದಾರೆ.
ಮೊದಲ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ಪಡೆದು ಮಿಂಚಿದ್ದ ವಾಷಿಂಗ್ಟನ್ ಸುಂದರ್ ಎರಡನೇ ಇನ್ನಿಂಗ್ಸ್‌ನಲ್ಲಿ ಕೂಡ 4 ವಿಕೆಟ್ ಪಡೆದುಕೊಂಡಿದ್ದಾರೆ. ರವಿಚಂದ್ರನ್ ಅಶ್ವಿನ್ ಒಂದು ವಿಕೆಟ್ ಪಡೆದುಕೊಂಡಿದ್ದಾರೆ.
ಬೆಂಗಳೂರು ಟೆಸ್ಟ್‌ನಲ್ಲಿ ಸೋಲು ಕಂಡಿರುವ ಟೀಂ ಇಂಡಿಯಾಗೆ ಇದೀಗ ಎರಡನೇ ಟೆಸ್ಟ್ ಪಂದ್ಯದಲ್ಲೂ ಸೋಲಿನ ಭೀತಿ ಶುರುವಾಗಿದೆ. ಈಗಾಗಲೇ ನ್ಯೂಜಿಲೆಂಡ್ 301 ರನ್ ಮುನ್ನಡೆ ಪಡೆದುಕೊಂಡಿದ್ದು 3ನೇ ದಿನ ಕೂಡ ಇನ್ನಷ್ಟು ರನ್ ಕಲೆ ಹಾಕುವ ವಿಶ್ವಾಸದಲ್ಲಿದೆ. ಈಗಾಗಲೇ ಸ್ಪಿನ್ನರ್ ಗಳಿಗೆ ಪಿಚ್ ಹೆಚ್ಚಿನ ನೆರವು ನೀಡಲಿದ್ದು, ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವುದು ಇನ್ನಷ್ಟು ಕಷ್ಟವಾಗಲಿದೆ. ಇದೇ ಈಗ ಭಾರತ ತಂಡದ ಅಭಿಮಾನಿಗಳ ಚಿಂತೆ ಹೆಚ್ಚಿಸಿದೆ.












Click it and Unblock the Notifications