ಮೈಸೂರಿನಲ್ಲಿ ಕಾಣಿಸಿಕೊಂಡ ಅನಿಲ್ ಕುಂಬ್ಳೆ, Love you guys ಎಂದ ಆರ್‌ಸಿಬಿ ಟಗರು ಪುಟ್ಟಿ ಶ್ರೇಯಾಂಕಾ ಪಾಟೀಲ್, ವೈರಲ್
Mysuru Dasara: ವಿಶ್ವಪ್ರಸಿದ್ಧ ಮೈಸೂರು ದಸರಾ ಜಂಬೂಸವಾರಿ ಹಾಗೂ ಸಾಂಸ್ಕೃತಿಕ ವೈಭವದ ಸಂಭ್ರಮದಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ಮತ್ತು ಆರ್‌ಸಿಬಿ ಆಟಗಾರ್ತಿ ಶ್ರೇಯಾಂಕಾ ಪಾಟೀಲ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. ತಮ್ಮ ತವರು ರಾಜ್ಯ ಕರ್ನಾಟಕದ ಕ್ರೀಡಾ ಸಾಧಕರೊಂದಿಗೆ ದಸರಾ ಮೆರವಣಿಗೆಯಲ್ಲಿ ಈ ಇಬ್ಬರು ದಿಗ್ಗಜರು ಕಾಣಿಸಿಕೊಂಡ ತಕ್ಷಣ ಅಭಿಮಾನಿಗಳು 'ಆರ್‌ಸಿಬಿ... ಆರ್‌ಸಿಬಿ...' ಎಂದು ಜಯಘೋಷ ಕೂಗುವ ಮೂಲಕ ಭವ್ಯ ಸ್ವಾಗತ ಕೋರಿದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಮೈಸೂರಿನಲ್ಲಿ ಅಭಿಮಾನಿಗಳಿಂದ ಸಿಕ್ಕ ಅದ್ಭುತ ಸ್ಪಂದನೆಗೆ ಫುಲ್ ಖುಷ್ ಆದ ಶ್ರೇಯಾಂಕಾ ಪಾಟೀಲ್, ಈ ಸುಂದರ ಕ್ಷಣಗಳ ವೀಡಿಯೊವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 'ನಿಮ್ಮ ಈ ಪ್ರೀತಿಗೆ ಆಭಾರಿಯಾಗಿದ್ದೇನೆ.. ಐ ಲವ್ ಯು ಗಾಯ್ಸ್.. ಎಂತಹ ಅದ್ಭುತ ಭಾವನೆ ಇದು! ನಿಮ್ಮಂತೆಯೇ ನನಗೂ ಆರ್‌ಸಿಬಿ ಎಂದರೆ ಅಷ್ಟೇ ಪ್ರೀತಿ. ಧನ್ಯವಾದಗಳು ಮೈಸೂರು, ಇದು ಅತ್ಯಂತ ವಿಶೇಷವಾದ ಕ್ಷಣ,' ಎಂದು ಬರೆದುಕೊಂಡು ತಮ್ಮ ಸಂತಸ ಹಂಚಿಕೊಂಡಿದ್ದಾರೆ.

ಕ್ರೀಡಾ ವೈಭವವನ್ನು ಕೊಂಡಾಡಿದ ಅನಿಲ್ ಕುಂಬ್ಳೆ
ಮತ್ತೊಂದೆಡೆ ದಸರಾ ಸಂಭ್ರಮದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಆರ್‌ಸಿಬಿ ಮಾಜಿ ನಾಯಕ ಅನಿಲ್ ಕುಂಬ್ಳೆ ಅವರು, 'ಮೈಸೂರು ದಸರಾ ಕರ್ನಾಟಕದ ಹೆಮ್ಮೆ, ಸಂಸ್ಕೃತಿ ಮತ್ತು ಕ್ರೀಡಾ ಶ್ರೇಷ್ಠತೆಯ ಆಚರಣೆ,' ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಇದೇ ವೇಳೆ 'ಅಥ್ಲೆಟಿಕ್ಸ್, ಬಾಸ್ಕೆಟ್‌ಬಾಲ್, ಈಜು, ಶೂಟಿಂಗ್, ಪ್ಯಾರಾ ಸ್ಪೋರ್ಟ್ಸ್, ಚೆಸ್, ಹಾಕಿ ಮತ್ತು ಕ್ರಿಕೆಟ್ ಸೇರಿದಂತೆ ವಿವಿಧ ಕ್ರೀಡೆಗಳ ಕರ್ನಾಟಕದ ಅತ್ಯುತ್ತಮ ಕ್ರೀಡಾಪಟುಗಳೊಂದಿಗೆ ಒಂದಾಗಿ ಸೇರಿದ್ದು ಹೆಮ್ಮೆಯ ವಿಷಯ,' ಎಂದು ಅವರು ತಿಳಿಸಿದ್ದಾರೆ.
ಆರ್‌ಸಿಬಿ ಜೊತೆಗಿನ ವಿಶೇಷ ಬಾಂಧವ್ಯ
ಅನಿಲ್ ಕುಂಬ್ಳೆ ಮತ್ತು ಶ್ರೇಯಾಂಕಾ ಪಾಟೀಲ್ ಇಬ್ಬರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಜೊತೆ ಅವಿನಾಭಾವ ಬಾಂಧವ್ಯ ಹೊಂದಿದ್ದಾರೆ. ಕುಂಬ್ಳೆ ಅವರು ಐಪಿಎಲ್ ಆರಂಭಿಕ ವರ್ಷಗಳಲ್ಲಿ ಆರ್‌ಸಿಬಿ ತಂಡವನ್ನು ಮುನ್ನಡೆಸಿ, 2009ರಲ್ಲಿ ಫೈನಲ್‌ಗೆ ತಲುಪಿಸಿದ್ದರು.
ಮತ್ತೊಂದೆಡೆ ಶ್ರೇಯಾಂಕಾ ಪಾಟೀಲ್ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆರ್‌ಸಿಬಿ ಪರ ಆಲ್‌ರೌಂಡರ್ ಆಗಿ ಅತ್ಯುತ್ತಮ ಪ್ರದರ್ಶನ ನೀಡಿ ತಂಡದ ಚಾಂಪಿಯನ್ ಪಟ್ಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸದ್ಯ ಕಾಲಿನ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಶ್ರೇಯಾಂಕಾ, ಜಿಂಬಾಬ್ವೆ ವಿರುದ್ಧದ ಇತ್ತೀಚಿನ ಸರಣಿಯಿಂದ ಹೊರಗುಳಿದಿದ್ದರು. ಆದರೆ ದಸರಾ ಆಚರಣೆಯ ಈ ಕ್ಷಣಗಳು ಕ್ರಿಕೆಟ್ ಮೈದಾನದಿಂದ ಆಚೆಗೂ ಕರ್ನಾಟಕದಲ್ಲಿ ಆರ್‌ಸಿಬಿಗಿರುವ ಕ್ರೇಜ್ ಹಾಗೂ ಅಭಿಮಾನಿಗಳ ಪ್ರೀತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿವೆ ಅಂತಲೇ ಹೇಳಬಹುದು.
ನೆಟ್ಟಿಗರು ಹೇಳುವುದೇನು?
ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಭಾರತದ ಕ್ರಿಕೆಟ್ ದಂತಕಥೆ ಅನಿಲ್ ಕುಂಬ್ಳೆ ಮತ್ತು ಆರ್‌ಸಿಬಿ ಮಹಿಳಾ ತಂಡದ ಶ್ರೇಯಾಂಕಾ ಪಾಟೀಲ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಬಗ್ಗೆ ಅಭಿಮಾನಿಗಳು ಸಂತಸ ವ್ಯಕ್ಯಪಡಿಸಿದ್ದಾರೆ. 'ಕ್ರಿಕೆಟ್ ಮೈದಾನವಿರಲಿ, ದಸರಾ ಮೆರವಣಿಗೆಯೇ ಇರಲಿ, ನಮ್ಮ ರಾಜ್ಯದ ಕ್ರೀಡಾಪಟುಗಳನ್ನು ಕಂಡರೆ ಆರ್‌ಸಿಬಿ ಜಯಘೋಷ ಕೂಗುವುದು ಕನ್ನಡಿಗರ ಅಭಿಮಾನಕ್ಕೆ ಸಾಕ್ಷಿ. 'ಈ ಸಲ ಕಪ್ ನಮ್ದು' ಅನ್ನೋದಷ್ಟೇ ಅಲ್ಲ, ಇದು ಕನ್ನಡಿಗರ ಭಾವನಾತ್ಮಕ ಬಾಂಧವ್ಯ,' ಎಂದು ಹಲವು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.
ಶ್ರೇಯಾಂಕಾ ಪಾಟೀಲ್‌ಗೆ ಅಭಿಮಾನಿಗಳ ಸಂದೇಶ ಏನು?
ಡಬ್ಲ್ಯೂಪಿಎಲ್ ಚಾಂಪಿಯನ್ ಆಗಿ ಆರ್‌ಸಿಬಿಗೆ ಟ್ರೋಫಿ ಗೆದ್ದುಕೊಟ್ಟ ಶ್ರೇಯಾಂಕಾ ಪಾಟೀಲ್ ಮೈಸೂರು ದಸರಾದಲ್ಲಿ ಭಾಗಿಯಾಗಿದ್ದನ್ನು ಕಂಡು ಅಭಿಮಾನಿಗಳು ಹೆಮ್ಮೆ ವ್ಯಕ್ತಪಡಿಸಿದ್ದಾರೆ. 'ಗಾಯದಿಂದ ಬೇಗ ಚೇತರಿಸಿಕೊಂಡು ಮತ್ತೆ ಮೈದಾನದಲ್ಲಿ ಅಬ್ಬರಿಸಿ ಮೇಡಂ, ನಿಮ್ಮ ಪ್ರದರ್ಶನ ನೋಡಲು ಕಾಯುತ್ತಿದ್ದೇವೆ,' ಎಂದು ಹಾರೈಸಿದ್ದಾರೆ.
ದಿಗ್ಗಜ ಅನಿಲ್ ಕುಂಬ್ಳೆಗೆ ಜೈಕಾರ
2009ರಲ್ಲಿ ಆರ್‌ಸಿಬಿ ತಂಡವನ್ನು ಫೈನಲ್‌ಗೆ ಮುನ್ನಡೆಸಿದ್ದ ಅನಿಲ್ ಕುಂಬ್ಳೆ ಅವರನ್ನು ಮೈಸೂರಿನಲ್ಲಿ ಕಂಡ ಅಭಿಮಾನಿಗಳು, 'ಅನಿಲ್ ಕುಂಬ್ಳೆ ಸರ್ ನಮ್ಮ ಕರ್ನಾಟಕದ ಶಕ್ತಿ. ಅವರ ಸರಳತೆ ಮತ್ತು ಕ್ರೀಡಾ ಪ್ರೇಮಕ್ಕೆ ಸಾಟಿಯಿಲ್ಲ,' ಎಂದು ಶ್ಲಾಘಿಸಿದ್ದಾರೆ.
ನಾಡಹಬ್ಬ ದಸರಾದಲ್ಲಿ ಕೇವಲ ಕ್ರಿಕೆಟ್ ಮಾತ್ರವಲ್ಲದೆ ಅಥ್ಲೆಟಿಕ್ಸ್, ಈಜು, ಚೆಸ್ ಹಾಗೂ ಪ್ಯಾರಾ ಸ್ಪೋರ್ಟ್ಸ್‌ನಂತಹ ವಿಭಿನ್ನ ಕ್ರೀಡಾಪಟುಗಳನ್ನು ಒಂದೇ ವೇದಿಕೆಯಲ್ಲಿ ಗೌರವಿಸಿದ್ದು ಕ್ರೀಡಾ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ. 'ಕರ್ನಾಟಕದ ಸಂಸ್ಕೃತಿ ಮತ್ತು ಕ್ರೀಡಾ ವೈಭವ ಎರಡೂ ಒಂದೇ ಕಡೆ ಸಮ್ಮಿಲನಗೊಂಡಂತೆ ಇತ್ತು,' ಎಂದು ನೆಟ್ಟಿಗರು ಹೇಳಿದ್ದಾರೆ. ಒಟ್ಟಿನಲ್ಲಿ ಮೈಸೂರಿನ ರಸ್ತೆಗಳಲ್ಲಿ ಮೊಳಗಿದ ಆರ್‌ಸಿಬಿ ಜಯಘೋಷವು, ಕರ್ನಾಟಕದಲ್ಲಿ ಕ್ರೀಡೆ ಮತ್ತು ಕ್ರೀಡಾಪಟುಗಳ ಮೇಲಿರುವ ಅಪಾರ ಪ್ರೀತಿಯನ್ನು ಜಗತ್ತಿಗೆ ಮತ್ತೊಮ್ಮೆ ಸಾರಿದಂತಿದೆ.


Click it and Unblock the Notifications
