Musheer Khan: ರಸ್ತೆ ಅಪಘಾತದಲ್ಲಿ ಕ್ರಿಕೆಟಿಗ ಮುಶೀರ್ ಖಾನ್‌ಗೆ ಗಂಭೀರ ಗಾಯ
ಮುಂಬೈ ತಂಡದ ಯುವ ಕ್ರಿಕೆಟಿಗ ಮುಶೀರ್ ಖಾನ್ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಮುಂಬರುವ ಇರಾನಿ ಕಪ್‌ನಲ್ಲಿ ಆಡಲು ಸಜ್ಜಾಗಿದ್ದ ಯುವ ಕ್ರಿಕೆಟಿಗನಿಗೆ ಅಪಘಾತ ಆಘಾತ ತಂದಿದೆ. ಇರಾನಿ ಕಪ್‌ನಿಂದ ಹೊರಗುಳಿಯುವುದು ಖಚಿತವಾಗಿದೆ. ಉತ್ತರ ಪ್ರದೇಶದ ಅಜಂಗಢದಿಂದ ಲಕ್ನೋಗೆ ಪ್ರಯಾಣ ಮಾಡುವ ಸಂದರ್ಭದಲ್ಲಿ ಅಪಘಾತದಲ್ಲಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿದ್ದು, ಅಪಘಾತಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ.
ಭಾರತ ತಂಡದ ಆಟಗಾರ ಸರ್ಫರಾಜ್ ಖಾನ್ ಅವರ ಕಿರಿಯ ಸಹೋದರ ಮುಶೀರ್ ಖಾನ್, ರಣಜಿ ಟ್ರೋಫಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದರು. ಅಪಘಾತವಾದ ಸಂದರ್ಭದಲ್ಲಿ ಕಾರಿನಲ್ಲಿ ತಂದೆ ನೌಶಾದ್ ಖಾನ್ ಕೂಡ ಇದ್ದರು ಎನ್ನಲಾಗಿದೆ.

19 ವರ್ಷದ ಯುವ ಕ್ರಿಕೆಟಿಗನಿಗೆ ಗಾಯದ ಪ್ರಮಾಣ ಎಷ್ಟಿದೆ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಅವರು ಕನಿಷ್ಠ ಮೂರು ತಿಂಗಳ ಕಾಲ ಕ್ರಿಕೆಟ್‌ನಿಂದ ಹೊರಗುಳಿಯುವ ಸಾಧ್ಯತೆ ಇದೆ. ರಣಜಿ ಟ್ರೋಫಿ ಪಂದ್ಯಾವಳಿ ಕೂಡ ಮುಂದಿನ ತಿಂಗಳಿನಿಂದ ಆರಂಭವಾಗಲಿದ್ದು, ಗಾಯಗೊಂಡಿರುವ ಮುಶೀರ್ ಖಾನ್ ಆಡುವುದು ಅನುಮಾನವಾಗಿದೆ.
ಮಾಹಿತಿ ನೀಡಬೇಕಿದೆ ಎಂಸಿಎ
ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಇನ್ನೂ ಮುಶೀರ್ ಖಾನ್ ಅವರ ಗಾಯದ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ. ಮುಶೀರ್ ಆಡದೇ ಇರುವುದು ಮುಂಬೈ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ಮುಶೀರ್ ಬೇಗ ಚೇತರಿಸಿಕೊಳ್ಳಲಿ ಎಂದು ಮುಂಬೈ ಕ್ರಿಕೆಟ್‌ನ ಅಭಿಮಾನಿಗಳು ಹಾರೈಸಿದ್ದಾರೆ.
ಉತ್ತಮ ಫಾರ್ಮ್‌ನಲ್ಲಿದ್ದ ಮುಶೀರ್
ರೆಡ್ ಬಾಲ್ ಕ್ರಿಕೆಟ್‌ನಲ್ಲಿ ಮುಶೀರ್ ಖಾನ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ದುಲೀಪ್ ಟ್ರೋಫಿ ಪಂದ್ಯಾವಳಿಯಲ್ಲಿ ಭಾರತ ಬಿ ತಂಡಕ್ಕಾಗಿ ಆಡಿದ ಮುಶೀರ್ ಭಾರತ ಎ ತಂಡದ ವಿರುದ್ಧ 181 ರನ್ ಗಳಿಸುವ ಮೂಲಕ ಮಿಂಚಿದ್ದರು. ಮೊದಲ ಪಂದ್ಯದಲ್ಲಿ ಮಿಂಚಿದ ಅವರು, ಬಳಿಕ ಕೊನೆ ನಾಲ್ಕು ಇನ್ನಿಂಗ್ಸ್‌ಗಳಲ್ಲಿ 1, 5 ರನ್ ಗಳಿಸಿದರೆ, ಕೊನೆಯ ಎರಡು ಇನ್ನಿಂಗ್ಸ್‌ಗಳಲ್ಲಿ ಶೂನ್ಯಕ್ಕೆ ಔಟಾಗಿದ್ದರು.
ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 51.14ರ ಸರಾಸರಿಯೊಂದಿ 15 ಇನ್ನಿಂಗ್ಸ್‌ಗಳಲ್ಲಿ ಮೂರು ಶತಕ ಒಂದು ಅರ್ಧಶತಕ ಸೇರಿದಂತೆ 716 ರನ್ ಗಳಿಸುವ ಮೂಲಕ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ.












Click it and Unblock the Notifications