ವೈಭವ್ ಸೂರ್ಯವಂಶಿಗೆ ಸತ್ಯ ಹೇಳ್ಬಿಡಿ ಎಂದ ಮುರಳಿ ಕಾರ್ತಿಕ್‌ಗೆ ನೆಟ್ಟಿಗರ ಕ್ಲಾಸ್
Vaibhav Sooryavanshi: ಟೀಮ್ ಇಂಡಿಯಾ ಕ್ರಿಕೆಟ್‌ನ ಯುವ ಪ್ರತಿಭೆ 15 ವರ್ಷದ ವೈಭವ್ ಸೂರ್ಯವಂಶಿ ಅವರು ತಮ್ಮ ಆಕ್ರಮಣಕಾರಿ ಬ್ಯಾಟಿಂಗ್‌ನಿಂದಲೇ ಹೆಸರಾಗಿದ್ದಾರೆ. ಇದೀಗ ಇವರು ತಂಡಕ್ಕೆ ಆಯ್ಕೆಯಾದರೂ ಸಹ ಪ್ಲೇಯಿಂಗ್ 11ನಲ್ಲಿ ಅವಕಾಶ ಸಿಗುತ್ತಿಲ್ಲ. ಈ ಕುರಿತು ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗಳು ಶುರುವಾಗಿವೆ. ಈ ನಡುವೆ ಭಾರತದ ಮಾಜಿ ಕ್ರಿಕೆಟರ್ ಮುರಳಿ ಕಾರ್ತಿಕ್ ಮುಖ್ಯ ಕೋಚ್ ಗೌತಮ್ ಗಂಭೀರ್ ಹಾಗೂ ಮ್ಯಾನೇಜ್‌ಮೆಂಟ್ ನಿರ್ಧಾರದ ಪರ ಬ್ಯಾಟ್ ಬೀಸಿ ವೈಭವ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಐಪಿಎಲ್ ಹಾಗೂ ದೇಶಿಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ವಿಶ್ವದ ಗಮನ ಸೆಳೆದಿರುವ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ, ಪ್ರಸ್ತುತ ಭಾರತೀಯ ಟಿ20 ಕ್ರಿಕೆಟ್ ತಂಡದ 11 ಬಳಗದಲ್ಲಿ ಖಾಯಂ ಸ್ಥಾನ ಪಡೆಯಲು ಹೋರಾಡುತ್ತಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಹಾಗೂ ನಾಯಕ ಶ್ರೇಯಸ್ ಅಯ್ಯರ್ ನೇತೃತ್ವದ ಮ್ಯಾನೇಜ್‌ಮೆಂಟ್ ಯುವ ಬ್ಯಾಟರ್ ವೈಭವ್‌ಗೆ ಟೀಮ್ ಸೆಲೆಕ್ಷನ್ ಕುರಿತು ಕಠಿಣ ಸತ್ಯವನ್ನು ಮನವರಿಕೆ ಮಾಡಿಕೊಟ್ಟಿದೆ ಎಂದು ಭಾರತದ ಮಾಜಿ ಕ್ರಿಕೆಟಿಗ ಮುರಳಿ ಕಾರ್ತಿಕ್ ಹೇಳಿದ್ದಾರೆ.

ವೈಭವ್‌ಗೆ ಸ್ಥಾನ ಸಿಗದಿರಲು ಪ್ರಮುಖ ಕಾರಣ ಏನು?
ಐಪಿಎಲ್‌ನಲ್ಲಿ ಐತಿಹಾಸಿಕ ಪ್ರದರ್ಶನ ನೀಡಿದ್ದರೂ, ಸದ್ಯ ಭಾರತದ ಟಿ20 ತಂಡದಲ್ಲಿ ಆರಂಭಿಕ ಬ್ಯಾಟರ್‌ಗಳಾಗಿ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಜೋಡಿಗೆ ಮ್ಯಾನೇಜ್‌ಮೆಂಟ್ ಆದ್ಯತೆ ನೀಡುತ್ತಿದೆ. 2026ರ ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಈ ಜೋಡಿಯು ಉತ್ತಮ ಲಯದಲ್ಲಿದೆ. ಸಂಜು ಕಳೆದ 10 ಪಂದ್ಯಗಳಲ್ಲಿ 4 ಅರ್ಧಶತಕಗಳನ್ನು ಸಿಡಿಸಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಹೀಗಾಗಿ ಯಾವುದೇ ಬಲವಾದ ಕಾರಣವಿಲ್ಲದೆ ಯಶಸ್ವಿ ಜೋಡಿಯನ್ನು ಬದಲಾಯಿಸಲು ತರಬೇತುದಾರರು ಬಯಸುತ್ತಿಲ್ಲ.
ಯಶಸ್ವಿ ಜೈಸ್ವಾಲ್ ಉದಾಹರಣೆ ನೀಡಿದ ಮುರಳಿ ಕಾರ್ತಿಕ್
ವೈಭವ್ ಸೂರ್ಯವಂಶಿ ಅವರ ಪ್ರಸ್ತುತ ಪರಿಸ್ಥಿತಿಯನ್ನು ಏಕದಿನ ಕ್ರಿಕೆಟ್‌ನಲ್ಲಿ ಯಶಸ್ವಿ ಜೈಸ್ವಾಲ್ ಎದುರಿಸುತ್ತಿರುವ ಸನ್ನಿವೇಶಕ್ಕೆ ಮುರಳಿ ಕಾರ್ತಿಕ್ ಹೋಲಿಸಿದ್ದಾರೆ. 'ಅತ್ಯದ್ಭುತ ಪ್ರತಿಭೆ ಎಂಬ ಕಾರಣಕ್ಕೆ ಮಾತ್ರ ಯಾರನ್ನಾದರೂ ದಿಢೀರನೆ ತಂಡದಿಂದ ಹೊರಗಿಡಲು ಸಾಧ್ಯವಿಲ್ಲ. ಹಿರಿಯ ಆಟಗಾರರು ಚೆನ್ನಾಗಿ ಪ್ರದರ್ಶನ ನೀಡುತ್ತಿರುವಾಗ ಕಾಯುವುದು ಅನಿವಾರ್ಯ. ಸೂರ್ಯವಂಶಿ ವಿಷಯದಲ್ಲೂ ಇದೇ ಆಗಿದೆ. ಕೆಲವೊಮ್ಮೆ ಸತ್ಯವನ್ನು ನೇರವಾಗಿ ಒಪ್ಪಿಕೊಳ್ಳುವುದು ಕಷ್ಟವಾದರೂ, ಅದನ್ನು ಸ್ವೀಕರಿಸಿ ಮುನ್ನಡೆಯುವುದು ಕ್ರೀಡಾಪಟುವಿಗೆ ಅಗತ್ಯ,' ಎಂದು ಮುರಳಿ ಕಾರ್ತಿಕ್ ಅಭಿಪ್ರಾಯಪಟ್ಟಿದ್ದಾರೆ.
ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಶ್ರೇಯಸ್ ಅಯ್ಯರ್ ಅವರು ವೈಭವ್ ಸೂರ್ಯವಂಶಿ ಜೊತೆ ಸೂಕ್ತ ರೀತಿಯಲ್ಲಿ ಸಂವಹನ ನಡೆಸಿದ್ದಾರೆ. ಅವರನ್ನು ತಂಡದ ಯೋಜನೆಯಿಂದ ಹೊರಗಿಡಲಾಗಿಲ್ಲ, ಬದಲಿಗೆ ಸೂಕ್ತ ಸಮಯ ಬಂದಾಗ ಅವಕಾಶ ನೀಡಲಾಗುವುದು ಎಂಬುದನ್ನು ಸ್ಪಷ್ಟವಾಗಿ ತಿಳಿಸಲಾಗಿದೆ. ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ ಅಥವಾ ಇಶಾನ್ ಕಿಶನ್ ಅವರಲ್ಲಿ ಯಾರಾದರೂ ಬ್ಯಾಟಿಂಗ್‌ನಲ್ಲಿ ಸತತವಾಗಿ ವಿಫಲರಾದರೆ ಮಾತ್ರ ವೈಭವ್‌ಗೆ ಪ್ಲೇಯಿಂಗ್ 11ನಲ್ಲಿ ಸ್ಥಾನ ಸಿಗುವ ಸಾಧ್ಯತೆಯಿದೆ.
ಇನ್ನು ಇದೀಗ ಮುರಳಿ ಕಾರ್ತಿಕ್ ಅವರು ಮ್ಯಾನೇಜ್‌ಮೆಂಟ್ ನಿರ್ಧಾರವನ್ನು ಸಮರ್ಥಿಸಿಕೊಂಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ನೆಟ್ಟಿಗರು ಹಾಗೂ ಕ್ರಿಕೆಟ್ ಪ್ರೇಮಿಗಳು ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.
ಮುರಳಿ ಕಾರ್ತಿಕ್ ವಿರುದ್ಧ ವೈಭವ್ ಅಭಿಮಾನಿಗಳ ಆಕ್ರೋಶ
'ಐಪಿಎಲ್ ಮತ್ತು ದೇಶೀಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಯುವ ಆಟಗಾರನಿಗೆ ಬೆಂಚ್ ಕಾಯಿಸುತ್ತಿರುವುದು ಸರಿಯಲ್ಲ. ಅದ್ಭುತ ಫಾರ್ಮ್‌ನಲ್ಲಿರುವಾಗ ಅವರಿಗೆ ಮೈದಾನಕ್ಕಿಳಿಯಲು ಅವಕಾಶ ನೀಡಬೇಕು,' ಎಂದು ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಲ್ಲದೆ 'ಸ್ಥಿರ ಪ್ರದರ್ಶನ ನೀಡಲು ಪರದಾಡುತ್ತಿರುವ ಹಿರಿಯ ಆಟಗಾರರನ್ನು ರಕ್ಷಿಸಲು ಯುವ ಪ್ರತಿಭೆಗಳನ್ನು ಬಲಿ ನೀಡಲಾಗುತ್ತಿದೆ,' ಎಂದು ಹಲವರು ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಮ್ಯಾನೇಜ್‌ಮೆಂಟ್ ವಿರುದ್ಧ ಕಿಡಿಕಾರಿದ್ದಾರೆ. ಮತ್ತೊಂದೆಡೆ ಇನ್ನೂ ಕೆಲವರು ಮುರಳಿ ಕಾರ್ತಿಕ್ ಮತ್ತು ಗಂಭೀರ್ ನಿರ್ಧಾರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. 'ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಮುಂತಾದ ಆಟಗಾರರು ಸರಣಿ ಗೆಲುವುಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಗೆಲ್ಲುವ ಸಂಯೋಜನೆಯನ್ನು ಯಾವುದೇ ಕಾರಣವಿಲ್ಲದೆ ಬದಲಾಯಿಸುವುದು ಸರಿಯಲ್ಲ,' ಎಂದು ಮುರಳಿ ಕಾರ್ತಿಕ್ ಹೇಳಿಕೆಗೆ ಬೆಂಬಲ ಸೂಚಿಸಿದ್ದಾರೆ.


Click it and Unblock the Notifications
